ಅರಿವುಗೇಡಿತನ

Update: 2022-02-20 07:05 GMT

ತನ್ನ ಮಗುವಿಗೆ ಮೆಡ್ಯುಲೋ ಬ್ಲಾಸ್ಟೊಮಾ ಅಂತ ಡಾಕ್ಟರ್ ತಾಯಿಗೆ ಹೇಳಿದರು. ತನ್ನ ಮಗುವಿಗೆ ಕ್ಯಾನ್ಸರ್ ಇದೆ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ತಾಯಿ, ಬಹುಶಃ ತಪ್ಪುತಪಾಸಣೆಯಿಂದ ಅಥವಾ ಆ ವೈದ್ಯರ ಅಧ್ಯಯನ ದೋಷದಿಂದ ಈ ರಿಪೋರ್ಟ್ ಬಂದಿರಬಹುದು, ಬೇರೆ ಕಡೆ ತೋರಿಸೋಣ ಎಂದು ಬೇರೆ ಡಾಕ್ಟರ್ ಬಳಿಗೆ ತನ್ನ ಮಗುವನ್ನು ಕೊಂಡೊಯ್ದಳು. ಇದು ಸಹಜ. ಮಾರಣಾಂತಕವಾಗಿರಬಹುದಾದ ಒಂದು ಕಾಯಿಲೆ ತನ್ನ ಮಗುವಿಗೆ ವಕ್ಕರಿಸಿದೆ ಎಂದು ಒಪ್ಪಿಕೊಳ್ಳಲು ಅವಳಿಗೆ ಆಗದು. ಆ ಮಗುವು ಸದೃಢವಾಗಿ, ಆರೋಗ್ಯವಾಗಿ, ಚೆಂದವಾಗಿ ಇರಬೇಕೆಂದು ಬಯಸುವವಳು ಮತ್ತು ಆ ಬಗೆಯದೇ ಕನಸುಗಳನ್ನು ಕಾಣುವವಳು.

ತಮಗೇ ಏನಾದರೂ ಈ ಬಗೆಯ ಸಮಸ್ಯೆ ಇದೆ ಎಂದರೆ ಒಪ್ಪಿಕೊಳ್ಳಲು ಸಾಮಾನ್ಯವಾದ ಮನಸ್ಥಿತಿಯು ಸಿದ್ಧವಿರುವುದಿಲ್ಲ. ಸೆಕೆಂಡರಿ ಒಪೀನಿಯನ್ ತೆಗೆದುಕೊಳ್ಳುವ ನೆಪದಲ್ಲಿ ಅದನ್ನು ಸುಳ್ಳಾಗಿಸಿಕೊಳ್ಳಲು ಬೇರೆ ಬೇರೆ ತಪಾಸಣೆಗಳಿಗೆ ಮುಂದಾಗುತ್ತಾರೆ. ಇದು ಸಹಜ ಬದುಕಿನ ಪ್ರೀತಿ. ಆದರೆ ಸಮಸ್ಯೆಯ ವಾಸ್ತವತೆಯನ್ನು ಅರಿತುಕೊಂಡು ನಂತರ ಅದನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ.

ಆದರೆ ಕೆಲವರ ವಿಷಯದಲ್ಲಿ ಪ್ರಾರಂಭದಲ್ಲಿ ಒಪ್ಪದಿರುವುದು ಮಾತ್ರವಲ್ಲ, ಯಾವಾಗಲೂ ಒಪ್ಪರು. ತಾವೊಂದು ಸ್ಥಿತಿಯನ್ನು ಭಾವಿಸಿಕೊಂಡಿರುತ್ತಾರೆ, ಅದು ಹೇಗೇ ಬದಲಾಗಿದ್ದರೂ ತಮ್ಮ ಪೂರ್ವನಿರ್ಧಾರಿತ ಅಥವಾ ಪೂರ್ವನಿರ್ಮಿತ ಮನಸ್ಥಿತಿಯಿಂದ ಹೊರಗೆ ಬರಲಾರರು. ಒಂದು ಸಣ್ಣ ಉದಾಹರಣೆ. ಆತನಿಗೆ ನಾವೇನು ಹೇಳಿದರೂ ಕೇಳಿಸುತ್ತಿರಲಿಲ್ಲ. ಆತ ನಮಗೇ ಹೇಳುತ್ತಿದ್ದ ‘‘ಸರಿಯಾಗಿ ಮಾತಾಡಿ. ಅದ್ಯಾಕೆ ಮೆಲ್ಲಮೆಲ್ಲಗೆ ಗೊಣಗಿಕೊಳ್ಳುತ್ತೀರಿ’’ ಅಂತ. ನಾವು ಸರಿಯಾದ ಎತ್ತರದ ಧ್ವನಿಯಲ್ಲಿ ಹೇಳಿದರೂ ಆತ ದೂರುವುದು ನಮ್ಮನ್ನೇ, ‘‘ನೀವು ಸರಿಯಾಗಿ ಮಾತಾಡುತ್ತಿಲ್ಲ!’’ ಎಂದು. ಏಕೆಂದರೆ ತಾನು ಕಿವುಡೆಂದು ಆತನಿಗೆ ಒಪ್ಪಿಕೊಳ್ಳಲಾಗಲಿ, ತಪಾಸಣೆಗೊಳಗಾಗುವುದಾಗಲಿ, ಕಿವಿಗೊಂದು ಶ್ರವಣ ಯಂತ್ರವನ್ನು ಸಿಗಿಸಿಕೊಳ್ಳುವುದಾಗಲಿ ಸುತಾರಾಂ ಸಾಧ್ಯವಿಲ್ಲ. ಇದನ್ನೇ ಅರಿವುಗೇಡಿತನ ಎನ್ನುವುದು. ಮನೋವಿಜ್ಞಾನದಲ್ಲಿ ಇದನ್ನು ತಮ್ಮ ಬಗೆಗಿನ ವಾಸ್ತವತೆಯನ್ನು ಅರಿತುಕೊಳ್ಳಲು ಸಾಧ್ಯವಾಗದ ಈ ದೌರ್ಬಲ್ಯವನ್ನು ಅನೊಸೊಗ್ನೇಶಿಯಾ ಎಂದು ಕರೆಯುತ್ತಾರೆ. ಒಪ್ಪಿಕೊಳ್ಳಲು ಇರುವ ಮನಸ್ಸಿನ ಹಟಮಾರಿತನ ಮಾತ್ರವಲ್ಲ. ಅದು ಅವರ ಮೆದುಳಿನಲ್ಲಿಯೇ ಆಗಿರುವಂತಹ ಬದಲಾವಣೆ. ವಾಸ್ತವವನ್ನು ಒಪ್ಪಲಾಗದಂತಹ ಭ್ರಮಾಧೀನ ಸಮಸ್ಯೆ (ಸ್ಕಿಸೋಫ್ರೇನಿಯಾ) ಅಥವಾ ಅತಿಮೇನಿಯಾ (ಬೈಪೋಲಾರ್ ಸಮಸ್ಯೆ) ಇರುವಂತಹವರಿಗೆ ಇದು ಸಾಮಾನ್ಯವಾಗಿರುವಂತಹ ಲಕ್ಷಣ.

ಯಾವಾಗ ಓರ್ವ ವ್ಯಕ್ತಿ ಉಂಟಾಗಿರುವ ಬದಲಾವಣೆಯನ್ನು ತನಗೆ ಇಷ್ಟವಿಲ್ಲದ ಕಾರಣ ನೋಡಲು ಅಥವಾ ಗ್ರಹಿಸಲು ನಿರಾಕರಿಸುತ್ತಿರುತ್ತಾನೋ, ಅದು ದೀರ್ಘಕಾಲ ಮುಂದುವರಿದರೆ, ಅವನ ಮೆದುಳು ಬದಲಾವಣೆಯನ್ನು ಗ್ರಹಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಡುತ್ತದೆ. ಇದು ಅವರ ಸಮಸ್ಯೆ. ಹಾಗೆಯೇ ವ್ಯಕ್ತಿಗತವಾದ ಮಾನಸಿಕ ಸಮಸ್ಯೆಗಳು ಸಂಕಲಿತವಾಗಿ ಸಮಾಜದಲ್ಲಿಯೂ ಕೂಡಾ ಪ್ರತಿಫಲಿಸುತ್ತಿರುತ್ತದೆ. ಏಕೆಂದರೆ ಸಮಾಜವೆಂಬುದು ವ್ಯಕ್ತಿಗಳ ಸಮೂಹ ತಾನೇ!

ಈ ಹೊತ್ತಿಗೆ ನಮ್ಮ ಸಾಮಾಜಿಕ ಪರಿಸರದಲ್ಲಿ ಉಂಟಾಗಿರುವಂತಹ ಹಿಜಾಬಿನ ವಿವಾದವನ್ನು ಗಮನಿಸಿ. ಮೊದಲನೆಯದಾಗಿ ಬಹಳಷ್ಟು ಮಂದಿಗೆ ಈ ಹಿಜಾಬ್ ವಿವಾದವನ್ನು ನೋಡುವ ಬಗೆಯೇ ತಿಳಿದಿಲ್ಲ ಅಥವಾ ತಾವು ನೋಡುವ ಬಗೆಯನ್ನು ಬದಲಿಸಿಕೊಳ್ಳಲು ಸಿದ್ಧವಿಲ್ಲ. ಅವರವರದೇ ಆದಂತಹ ಪೂರ್ವನಿರ್ಧಾರಿತ ಅಥವಾ ಹಳೆಯ ರೂಢಿಗತ ದೃಷ್ಟಿಯಿಂದಲೇ ನೋಡಲಾಗುವುದು. ಸಾರ್ವಜನಿಕ ವಿದ್ಯಾಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ ಎಂದೂ, ಹಿಜಾಬ್ ಸಮವಸ್ತ್ರ ಸಂಹಿತೆಗೆ ಭಂಗ ತರುವುದೆಂದೂ ಕಾರಣಗಳನ್ನು ನೀಡಿ, ತಮ್ಮ ಅಜ್ಜಿ, ತಾಯಿ ಮತ್ತು ತಮ್ಮ ಕುಟುಂಬದ ಇತರ ಮಹಿಳೆಯರು ತೊಡುವ ಧಾರ್ಮಿಕ ರೂಢಿಯಲ್ಲಿರುವ ಹಿಜಾಬನ್ನು ಧರಿಸಿಕೊಂಡು ಎಂದಿನಂತೆ ಕಲಿಯಲು ಬಂದವರನ್ನು ಗೇಟಿನಲ್ಲಿ ತಡೆಯಲಾಯಿತು. ಅವರು ಹಾಗೆ ಬಂದರೆ ನಾವು ಕೇಸರಿ ಶಾಲನ್ನು ಧರಿಸಿ ಬರುತ್ತೇವೆ ಎಂದು ಹುಡುಗರು ತಮ್ಮ ತಾತಂದಿರು, ಅಪ್ಪಂದಿರು ಮತ್ತು ಹಿರಿಯರು ತೊಡುವ ರೂಢಿಯೇನೂ ಇಲ್ಲದ ಹೊಸ ರುಮಾಲನ್ನು ಕುತ್ತಿಗೆಗೆ ಹಾಕಿಕೊಂಡು ಬಂದರು.

ಇದು ಸಂಘರ್ಷದ ಭಾಗ. ಈ ಸಂಘರ್ಷಕ್ಕೆ ಕಾರಣ ಬಹಳಷ್ಟು ಮಂದಿ ವಿವರಿಸುವಂತೆ ಧಾರ್ಮಿಕ ಮೂಲಭೂತವಾದದ ಹಟಮಾರಿತನ. ಹಿಜಾಬಿನ ಹೆಣ್ಣು ಮಕ್ಕಳೂ ಮತ್ತು ಕೇಸರಿ ಶಾಲಿನ ಗಂಡು ಮಕ್ಕಳೂ ತಮ್ಮ ಧಾರ್ಮಿಕ ಖಡ್ಗಗಳನ್ನು ಝಳಪಿಸುತ್ತಿದ್ದಾರೆ ಎಂದು ಅವರ ವಾದ. ಹಾಗೆಯೇ ಬಹಳಷ್ಟು ಮಂದಿ ಹಿಜಾಬನ್ನು ಸಮರ್ಥಿಸುವವರು ಮತ್ತು ನಿರಾಕರಿಸುವವರು ಇಬ್ಬರೂ ಧಾರ್ಮಿಕತೆಯ ಹಕ್ಕು ಮತ್ತು ದಬ್ಬಾಳಿಕೆಯ ದೃಷ್ಟಿಯಿಂದಲೇ ನೋಡುತ್ತಿದ್ದಾರೆ.

ಆದರೆ ಇಲ್ಲಿ ತೊಡಕಾಗಿದ್ದು ಸಾಮಾಜಿಕ ನ್ಯಾಯಕ್ಕೆ ಮತ್ತು ಬಹುತ್ವದ ವ್ಯವಸ್ಥೆಯ ಸಾಮಾಜಿಕ ಯಂತ್ರದಲ್ಲಿ ಉಂಟಾಗುತ್ತಿರುವ ತೊಡಕು ಎಂದು ತಿಳಿಯುತ್ತಿಲ್ಲ. ಸಿಖ್ಖರ ಧಾರ್ಮಿಕ ಮುಖಂಡ ಗುರು ಗೋವಿಂದ್ ಸಿಂಗ್ 1699ರಲ್ಲಿ ಪ್ರಾರಂಭಿಸಿದ ಸಂಪ್ರದಾಯವಾದ ತನ್ನ ನೀಳವಾದ ಕೇಶವನ್ನು ಪಗೋಡದಲ್ಲಿ ಕಟ್ಟಿಕೊಳ್ಳುವ, ಗಡ್ಡ ಬೆಳೆಸಿಕೊಂಡಿರುವ, ಕಿರುಗತ್ತಿ, ಬಾಚಣಿಕೆ, ಬಳೆ ಮತ್ತು ಬಿಳಿಯ ಒಳವಸ್ತ್ರವನ್ನು ಇಂದಿಗೂ ಹೊಂದಿರುವ ಯಾವುದೇ ಸಿಂಗ್ ಒಬ್ಬ ಅವನ ಶಿರವಸ್ತ್ರ, ಕತ್ತಿ ಒಳಗೊಂಡಂತಹ ಐದು ‘ಕ’ಗಳ ಸಮೇತ ವಿಂಗ್ ಕಮ್ಯಾಂಡರ್ ಆಗಬಹುದು, ಪ್ರಧಾನಿ, ರಾಷ್ಟ್ರಪತಿ ಆಗಬಹುದು, ದೇಶದ ಅತ್ಯುನ್ನತ ಹುದ್ದೆಗಳನ್ನಾವುದನ್ನಾದರೂ ಅಲಂಕರಿಸಬಹುದು. ಆದರೆ ಈ ಮುಸಲ್ಮಾನ ಹೆಣ್ಣುಮಗು ತನ್ನ ಮೈ ಮುಚ್ಚಿಕೊಳ್ಳುವಂತೆ ಬಂದರೆ ಆಗುವ ಸಮಸ್ಯೆ ಏನೆಂದು ಗುರುತಿಸುವಲ್ಲಿ ವಿಫಲರಾಗಿ ಧಾರ್ಮಿಕತೆಯನ್ನು ದೂರುತ್ತಿರುವರು ಅಥವಾ ಅದನ್ನು ಸಮರ್ಥಿಸುತ್ತಿರುವರು ಈ ಹುಡುಗಿಯರು ಕಲಿಕೆಯನ್ನು ಬಿಡದ ಮನಸ್ಥಿತಿಯನ್ನು, ಈ ಹುಡುಗರ ಜಿದ್ದುಗೇಡಿತನದ ಮನಸ್ಥಿತಿಯನ್ನು ಗುರುತಿಸದಾದರು.

ಸಾಂಪ್ರದಾಯಿಕ ಮುಸ್ಲಿಮ್ ದ್ವೇಷದ ಪೋಷಣೆ, ಸಾಮಾಜಿಕ ನ್ಯಾಯದ ಉಲ್ಲಂಘನೆ, ಸರಕಾರದ ವೈಫಲ್ಯಗಳಿಂದ ಗಮನ ಪಲ್ಲಟ, ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಕೌಟುಂಬಿಕ ಹಿನ್ನೆಲೆಯುಳ್ಳ ಮಗುವು ಶಿಕ್ಷಣ ಪಡೆಯಬೇಕಾದ ರಾಷ್ಟ್ರೀಯ ಅಗತ್ಯ; ಇವುಗಳ ದಿಕ್ಕಿನಲ್ಲಿ ನೋಡುವುದರಲ್ಲಿ ಎಡವುತ್ತಿವೆ. ಏಕೆಂದರೆ ಧಾರ್ಮಿಕತೆಯ ಅನೊಸೊಗ್ನೇಶಿಯಾ ಅಥವಾ ಅರಿವುಗೇಡಿತನದಿಂದ ಹೊರಗೆ ಬರಲು ಇಬ್ಬರಿಗೂ ಆಗುತ್ತಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News