ಮಂಗಳೂರು: ಎನ್‌ಎಂಪಿಟಿ ತಾಂತ್ರಿಕ ಪ್ರಗತಿ ವೀಕ್ಷಿಸಿದ ಕೇಂದ್ರ ಸಚಿವ ಸಿಂಗ್
ಮಂಗಳೂರು, ಫೆ.20: ನಗರ ಹೊರವಲಯದ ಪಣಂಬೂರಿನಲ್ಲಿರುವ ನವಮಂಗಳೂರು ಬಂದರಿಗೆ ರವಿವಾರ ಭೇಟಿ ನೀಡಿದ ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಬಂದರು ನಿರ್ವಹಣೆ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಎನ್‌ಎಂಪಿಟಿ ಕೆಐಒಸಿಎಲ್, ಜೆಎಸ್‌ಡಬ್ಲ್ಯು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎನ್‌ಎಂಪಿಟಿ ಅಧ್ಯಕ್ಷ ಡಾ.ಎ.ವಿ.ರಮಣ ಬಂದರು ಅಳವಡಿಸಿಕೊಂಡಿರುವ ಹಲವಾರು ಮೂಲಸೌಕರ್ಯ ಮತ್ತು ತಾಂತ್ರಿಕ ಪ್ರಗತಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಬಂದರಿನಲ್ಲಿ ಕೆಐಒಸಿಎಲ್‌ನ ಕಬ್ಬಿಣದ ಅದಿರು ಉಂಡೆಗಳ, ಕಚ್ಚಾ ವಸ್ತುಗಳ ಆಮದು ಮತ್ತು ರಫ್ತಿನ ನಿರ್ವಹಣೆ ಸೌಲಭ್ಯಗಳನ್ನು ಪರಿಶೀಲಿಸಿದ ಸಚಿವರು ಭವಿಷ್ಯದ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಸಚಿವರು ಬಂದರಿನ ಟಗ್ ಬೋಟ್‌ನಲ್ಲಿ ಸಂಚರಿಸಿ, ಬಂದರು ಒದಗಿಸುವ ಬರ್ತ್‌ಗಳು ಮತ್ತು ವಿವಿಧ ಮೂಲಸೌಕರ್ಯ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭ ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ಶ್ರೀನಿವಾಸ್, ಎನ್‌ಎಂಪಿಟಿ, ಕೆಐಒಸಿಎಲ್, ಜೆಎಸ್‌ಡಬ್ಲ್ಯು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.