ಸಮಾಜಕಾರ್ಯ ಸಾಹಿತ್ಯ ರಚನೆಯ ಕೊರತೆಯಿದೆ: ಡಾ.ರೂತ್ ಮನೋರಮಾ
ಬೆಂಗಳೂರು, ಫೆ. 20: ಇಂದಿನ ದಿನಗಳಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸಾಕಷ್ಟು ಸಾಹಿತ್ಯವಿಲ್ಲದಿರುವುದು ಬಹುದೊಡ್ಡ ಸಮಸ್ಯೆಯೇ ಆಗಿದೆ ಎಂದು ಮಹಿಳಾಪರ ಚಳವಳಿಗಾರ್ತಿ, ರೈಟ್ ಲೈವ್‍ಲಿಹುಡ್ ಪ್ರಶಸ್ತಿ ಪುರಸ್ಕøತೆ ಡಾ.ರೂತ್ ಮನೋರಮಾ ಹೇಳಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಿರುತ ಪಬ್ಲಿಕೇಷನ್ಸ್ ಮತ್ತು ಬೆಂಗಳೂರು ಯುನಿವರ್ಸಿಟೀಸ್ ಸೋಷಿಯಲ್ ವರ್ಕ್ ಅಲ್ಯೂಮ್ನಿ ಅಸೋಸಿಯೇಷನ್ ಸಹಯೋಗದಿಂದ ಆಯೋಜಿಸಿದ್ದ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಬಿಡುಗಡೆಯಾದ ಡಾ.ಸಿ.ಆರ್.ಗೋಪಾಲ್‍ರವರ ಸಾಮಾಜಿಕ ಕ್ರಿಯಾಚರಣೆ ಹಾಗೂ ಇನ್ನಿತರ ಹಲವು ಕೃತಿಗಳು ಸಮಾಜಕಾರ್ಯ ಅಂಶಗಳಿರುವ ಕೃತಿಗಳಾಗಿವೆ. ಪುಸ್ತಕ ಪ್ರಕಾಶಕರೂ ವ್ಯಾಪಾರಕ್ಕಷ್ಟೇ ಸೀಮಿತವಾಗಿರದೆ ಅನೇಕ ಮಹೋನ್ನತರವಾದ ಕೃತಿಗಳಿಗೆ ಬಂಡವಾಳ ಹೂಡಿ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ತತ್ವಜ್ಞಾನಿ ಶ್ರೀನಿವಾಸ ಅರ್ಕ ಮಾತನಾಡಿ, ಪುಸ್ತಕ ಬರೆಯುವ ಪ್ರವೃತ್ತಿಯು ಇಂದಿನ ದಿನದಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯವಾಗಿದ್ದು, ಬರವಣಿಗೆಯ ಮೂಲಕ ತಮ್ಮ ಜ್ಞಾನವನ್ನು ಲೋಕಕ್ಕೆ ವಿತರಿಸುವ ಲೇಖಕರು ಹೆಚ್ಚಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಶೇಖರ್‍ಗಣಲೂರು, ರಾಜಾಜಿನಗರದ ಐಎಸ್‍ಐ ಆಸ್ಪತ್ರೆಯ ಸಾಮಾಜಿಕ ಸುರಕ್ಷಾ ಅಧಿಕಾರಿ ನಾಗವೇಣಿ ಹೆಗಡೆ, ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಜನಾರ್ಧನ, ಬೆಂಗಳೂರು ಯೂನಿವರ್ಸಿಟೀಸ್ ಸೋಷಿಯಲ್ ವರ್ಕ್‍ಅಲ್ಯೂಮ್ನಿ ಅಸೋಸಿಯೇಷನ್‍ನ ಅಧ್ಯಕ್ಷ ಡಾ.ಬಿ.ಕೆ.ಕೆಂಪೇಗೌಡ ಉಪಸ್ಥಿತರಿದ್ದರು.
ಪುಸ್ತಕಗಳ ಬಿಡುಗಡೆ: ಡಾ.ಸಿ.ಆರ್.ಗೋಪಾಲ್‍ರವರ ಸಾಮಾಜಿಕ ಕ್ರಿಯಾಚರಣೆ, ಎಚ್.ಎನ್. ಯಾದವಾಡರವರ ಶಿಕ್ಷಣ ರಥ ನೀತಿ ಪಥ ಹಾಗೂ ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. ರವರ ಮನೋ-ವೈದ್ಯಕೀಯ ಸಮಾಜಕಾರ್ಯ ಪುಸ್ತಕಗಳು ಬಿಡುಗಡೆಗೊಂಡವು.