ಕೇಂದ್ರದ ಅಧಿಕಾರಶಾಹಿ ವ್ಯವಸ್ಥೆಯಿಂದ ಒಕ್ಕೂಟ ವ್ಯವಸ್ಥೆ ದುರ್ಬಲ

Update: 2022-02-21 09:00 GMT

 2022ರ ಜನವರಿಯಲ್ಲಿ ಕೇಂದ್ರ ಸರಕಾರವು ಭಾರತೀಯ ಆಡಳಿತಾತ್ಮಕ ಸೇವಾ (ಕೇಡರ್) ನಿಯಮಗಳ,1954ಕ್ಕೆ ತಿದ್ದುಪಡಿಯನ್ನು ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಈ ತಿದ್ದುಪಡಿಯಿಂದಾಗಿ ಕೇಂದ್ರ ಸರಕಾರವು ಯಾವುದೇ ಐಎಎಸ್ ಅಧಿಕಾರಿಯ ಸೇವೆಗಳನ್ನು ಆತ/ಆಕೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರಕಾರದ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯಿಲ್ಲದೆಯೇ ಅವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ.

  ಈ ಪ್ರಸ್ತಾವನೆಯು ಕೇಂದ್ರ-ರಾಜ್ಯ ಸರಕಾರಗಳ ನಡುವೆ ಸಂಘರ್ಷದ ಕಿಡಿಯನ್ನು ಹೊತ್ತಿಸಿದೆ. ಎಲ್ಲಾ ಭಾರತೀಯ ನಾಗರಿಕ ಸೇವೆಗಳಲ್ಲಿ ಹಾಸುಹೊಕ್ಕಾಗಿರುವ ಒಕ್ಕೂಟವಾದ ಚೈತನ್ಯವನ್ನು ನೂತನ ತಿದ್ದುಪಡಿಗಳು ಕಡೆಗಣಿಸಿವೆ ಮತ್ತು ಅಧಿಕಾರಶಾಹಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕೇಂದ್ರದ ಹಿಡಿತದಲ್ಲಿರಿಸಿದೆ.

      

  ಭಾರತದ ರಾಜಕಾರಣದಲ್ಲಿ ಕೇಂದ್ರ ಸರಕಾರದ ಹಿಡಿತವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಈ ಬಿಕ್ಕಟ್ಟು ಭಾರತದ ಒಕ್ಕೂಟವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸುವಲ್ಲಿ ಉನ್ನತ ಅಧಿಕಾರಿ ವ್ಯವಸ್ಥೆಯ ಅದರಲ್ಲೂ ವಿಶೇಷವಾಗಿ ಐಎಎಸ್‌ನ ಮಹತ್ವವನ್ನು ನಮಗೆ ನೆನಪಿಸಿದೆ. ಅಖಿಲ ಭಾರತೀಯ ಸೇವೆಗಳ ಪೈಕಿ ಭಾರತೀಯ ಆಡಳಿತಾತ್ಮಕ ಸೇವೆಯು ಅತ್ಯಂತ ಮಹತ್ವದ್ದಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಆಡಳಿತಾತ್ಮಕ ಸೇತುವೆಯಾಗಿ ಸೇವೆ ಸಲ್ಲಿಸಲು ರೂಪುಗೊಳಿಸಲಾಗಿದೆ, ಈ ಪ್ರಜ್ಞೆಯು ಸಂವಿಧಾನದ ವ್ಯಾಪ್ತಿಯ ಮೂಲಭೂತ ಪ್ರಜ್ಞೆಯಾಗಿದೆ.

 ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳು ಪ್ರಧಾನವಾಗಿ ತಮ್ಮ ಕಾರ್ಯನಿರ್ವಹಣೆಗಾಗಿ ರಾಜ್ಯ ಸರಕಾರಕ್ಕೆ ಉತ್ತರದಾಯಿಗಳಾಗಿರುತ್ತಾರೆ.ಪ್ರಸ್ತಾವಿತ ತಿದ್ದುಪಡಿಗಳಿಂದಾಗಿ ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜ್ಯ ಸರಕಾರದ ಅಭಿಪ್ರಾಯಗಳನ್ನು ಬದಿಗೊತ್ತುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ.

        ಐಎಎಸ್‌ನ ಮೂಲ ವಿನ್ಯಾಸವು ಬಹುಶಃ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಸಮತೋಲನದ ಬಾಂಧವ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಕೂಡಿದೆ. ಆದರೆ ಐಎಎಸ್ ಕೇಡರ್ ಅಧಿಕಾರಿಗಳ ಪ್ರಾತಿನಿಧ್ಯ ನೀಡಿಕೆಯಲ್ಲಿ ಕೇಂದ್ರ ಸರಕಾರವು ಕೆಲವು ರಾಜ್ಯಗಳಿಗೆ (ಹಿಮಾಚಲ ಪ್ರದೇಶ, ಬಿಹಾರ, ಕೇಂದ್ರ ಹಾಗೂ ಈಶಾನ್ಯ ಭಾರತ) ಹೆಚ್ಚಿನ ಒಲವು ತೋರಿಸುತ್ತಿದೆ. ದೇಶದ ರಾಜಕಾರಣದ ಮೇಲೆ ಕೇಂದ್ರ ಸರಕಾರದ ಹತೋಟಿ ಉತ್ತುಂಗಕ್ಕೇರಿರುವ ಈ ಕಾಲಘಟ್ಟದಲ್ಲಿ ನೂತನ ತಿದ್ದುಪಡಿಗಳು ಅಧಿಕಾರಶಾಹಿಯ ಕೇಂದ್ರೀಕರಣವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಭಾರತ ಸರಕಾರದ ಹಲವಾರು ಪ್ರಮುಖ ಹುದ್ದೆಗಳನ್ನು ಈಗ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿಗಳು ಆಲಂಕರಿಸಿದ್ದಾರೆ. ಇವರೆಲ್ಲರೂ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರಿಗೆ ಅತ್ಯಂತ ನಿಷ್ಠರಾಗಿದ್ದವರು. ಇದಕ್ಕಿಂತಲೂ ಹೆಚ್ಚಾಗಿ ಕೇಂದ್ರದಲ್ಲಿ ಅಧಿಕಾರಿಸಿಬ್ಬಂದಿಯ ನಿರಂತರವಾಗಿ ಕಂಡುಬರುತ್ತಿರುವ ಕೊರತೆಯು ಈ ಪ್ರಸ್ತಾವಿತ ತಿದ್ದುಪಡಿಗಳಿಗೆ ನ್ಯಾಯಸಮ್ಮತವೆಂಬಂತೆ ತೋರ್ಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದಲ್ಲದೆ, ಅಧಿಕಾರಿ ಸಿಬ್ಬಂದಿಯ ಕೊರತೆಯನ್ನು ನಿವಾರಿಸಲು ಕೇಂದ್ರ ಸರಕಾರವು ಹಲವಾರು ಐಎಎಸ್‌ಯೇತರ ಕೇಡರ್‌ನ (ಅರಣ್ಯ ಹಾಗೂ ರೈಲ್ವೆ ಸೇವೆ) ಅಧಿಕಾರಿಗಳನ್ನು, ಸಾಂಪ್ರದಾಯಿಕವಾಗಿ ಐಎಎಸ್ ಕೇಡರ್‌ನವರಿಗೆ ಮಾತ್ರ ಮೀಸಲಾದ ಆಯಕಟ್ಟಿನ ಹುದ್ದೆಗಳಿಗೆ ನೇಮಿಸಿಕೊಳ್ಳುತ್ತಿದೆ.

   ಮೋದಿ ಸರಕಾರದ ಅತ್ಯಂತ ಗೋಚರನೀಯವಾದ ಸ್ವರೂಪವೆಂದರೆ ಕೇಂದ್ರ ಹಾಗೂ ತಳಮಟ್ಟದ ಅಧಿಕಾರಶಾಹಿಗಳ ನಡುವಿನ ನೇರ ಒಡನಾಟವನ್ನು ಹೆಚ್ಚಿಸಿಕೊಂಡಿರುವುದಾಗಿದೆ. ರಾಜ್ಯ ಸರಕಾರದ ನಿಯಂತ್ರಣ ಮೀರಿ ಐಎಎಸ್ ಅಧಿಕಾರಿಗಳು ಕೇಂದ್ರಕ್ಕೆ ಉತ್ತರದಾಯಿಗಳಾಗುವ ವ್ಯವಸ್ಥೆಯನ್ನು ಈ ತಿದ್ದುಪಡಿಯು ಜಾರಿಗೆ ತರಲಿದೆ. ಈ ನೇರ ಉತ್ತರದಾಯಿತ್ವದಿಂದಾಗಿ ಹಲವಾರು ಕಲ್ಯಾಣ ಕಾರ್ಯಕ್ರಮ ಯೋಜನೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗಾಗಿನ ಸಾಲ ನೀಡುವ ಕಾರ್ಯಕ್ರಮಗಳೆಲ್ಲವೂ ಕೇಂದ್ರ ಸರಕಾರದ ನಿಯಂತ್ರಣಕ್ಕೊಳಪಡಲಿದೆ.

     ಐಎಎಸ್ ಅಧಿಕಾರಶಾಹಿಯು ಕಾನೂನುಗಳನ್ನು ಜಾರಿಗೊಳಿಸುವಲ್ಲಿ, ಆದೇಶಗಳನ್ನು ನೀಡುವಲ್ಲಿ ಹಾಗೂ ಶ್ರೇಣಿಕೃತ ಅಧಿಕಾರ ವ್ಯವಸ್ಥೆಯ ಬಗ್ಗೆ ಮುತುವರ್ಜಿ ವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವಂತದ್ದೇ. ಇದರಿಂದಾಗಿಯೇ ಅವರು ತಾವು ಕೇವಲ ತಮ್ಮ ರಾಜಕೀಯ ಧಣಿಗಳ ಆದೇಶಗಳನ್ನು ರಾಜ್ಯಕ್ಕೆ ತಲುಪಿಸುವ ‘ ಅಂಚೆ ಪೇದೆಗಳಂತಾಗಿದ್ದೆವೆ’ ಎಂದು ತಮ್ಮನ್ನು ತಾವೇ ಹೇಳಿಕೊಳ್ಳುತ್ತಿರುತ್ತಾರೆ.

      ಆದೇಶ (ಕಮಾಂಡ್) ಹಾಗೂ ನಿಯಂತ್ರಣ(ಕಂಟ್ರೋಲ್) ಕೇಂದ್ರಗಳು ಈಗ ರಾಜ್ಯಗಳು ಹಾಗೂ ಕೇಂದ್ರ ಸರಕಾರದ ಆಡಳಿತಾತ್ಮಕ ಇಲಾಖೆಗಳ ಕಾನೂನುಬದ್ಧ ಭಾಗಗಳಾಗಿ ಬಿಟ್ಟಿವೆ. 21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವುಗಳ ಮೂಲಕ ಐಎಎಸ್ ಅಧಿಕಾರಿಗಳ ಮೇಲೆ ಕಣ್ಣಿಡುವ ಹಾಗೂ ಅವರ ಕೆಲಸ ನಿರ್ವಹಣೆಯ ಮೇಲೆ ನಿಗಾವಿರಿಸುವ ಹೊಣೆಗಾರಿಕೆಯನ್ನು ಈ ಆದೇಶ ಹಾಗೂ ನಿಯಂತ್ರಣ ಕೇಂದ್ರಗಳಿಗೆ ನೀಡಲಾಗಿದೆ.ಕರ್ತವ್ಯದಲ್ಲಿ ದಕ್ಷತೆ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ಮತ್ತು ಉತ್ತರದಾಯಿತ್ವಕ್ಕಾಗಿ ಐಎಎಸ್ ಅಧಿಕಾರ ಶಾಹಿ ವ್ಯವಸ್ಥೆಯ ಕೇಂದ್ರೀಕರಣವು ನ್ಯಾಯಸಮ್ಮತವವಾದುದೆಂದು ವಾದಿಸಲಾಗುತ್ತಿದೆ. ಸ್ಥಳೀಯ ಸರಕಾರಗಳಿಗೆ ಅಧಿಕಾರವನ್ನು ವಿಕೇಂದ್ರೀಕರಿಸುವ ಯೋಜನೆಯನ್ನು ಅಧಿಕಾರಶಾಹಿ ವರ್ಗ ಅಡ್ಡಗಾಲು ಹಾಕುತ್ತಲೇ ಬಂದಿದೆ.

  

ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಐಎಎಸ್ ಅಧಿಕಾರಿ ವರ್ಗವು ತಳಮಟ್ಟದ ಅಧಿಕಾರಿ ಸಿಬ್ಬಂದಿ ಜೊತೆ ನೇರವಾದ ಸಂವಹನದಲ್ಲಿ ತೊಡಗುವುದು ಅತ್ಯಂತ ಉತ್ತಮವಾದುದಾಗಿದೆ. ಆದರೆ ಆಡಳಿತಾರೂಢ ಭಾರತೀಯ ಜನತಾಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಐಎಎಸ್ ಅಧಿಕಾರಿಗಳ ಉತ್ತರದಾಯಿತ್ವವನ್ನು ಪರಿಣಾಮಕಾರಿಯಾಗಿ ಕೇಂದ್ರದ ನಿಯಂತ್ರಣಕ್ಕೊಳಪಡಿಸುತ್ತಿದೆ.

   ಐಎಎಸ್ ಅಧಿಕಾರಿವರ್ಗವು ದಿನನಿತ್ಯದ ಆಡಳಿತ ವ್ಯವಹಾರಗಳಲ್ಲಿ ರಾಜ್ಯಗಳ ಹಿತಾಸಕ್ತಿ ಪರವಾಗಿ ಹೋರಾಡುವುದು ತೀರಾ ಅಪರೂಪವಾಗಿದೆ. ಇದರಿಂದಾಗಿ ಅವರು ತಮಗೆ ತಿಳಿಯದಂತೆಯೇ ಪರೋಕ್ಷವಾಗಿ ರಾಜಕಾರಣದ ಕೇಂದ್ರೀಕರಣಕ್ಕೆ ಬೇಕಾದ ಪರಿಸ್ಥಿತಿಯನ್ನು ನಿರ್ಮಿಸುತ್ತಿದ್ದಾರೆ. ಕೇಂದ್ರ ಸರಕಾರ ಪ್ರಾಯೋಜಿತ ಕಾರ್ಯಕ್ರಮಗಳ ಕುರಿತಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟವು ಇದಕ್ಕೆ ಸಾಕ್ಷಿಯಾಗಿದೆ. ಈ ಕಲ್ಯಾಣ ಯೋಜನಾ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು ಆರ್ಥಿಕ ನೆರವು ನೀಡುತ್ತಿರುವುದರಿಂದ, ಅದು ಅವುಗಳ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸಲು ಬಯಸುತ್ತಿದೆ.

  ಕೇಂದ್ರ ಹಾಗೂ ರಾಜ್ಯಗಳ ನಡುವೆ ರಾಜಕೀಯ ವಿವಾದಕ್ಕೆ ಗ್ರಾಸವಾಗುತ್ತಿರುವ ಈ ಕಲ್ಯಾಣ ಯೋಜನೆಗಳನ್ನು ಕೇಂದ್ರ ಸರಕಾರದ ಅಧಿಕಾರಿಗಳು ರೂಪಿಸುತ್ತಾರೆ. ಕೇಂದ್ರದಲ್ಲಿರುವ ಧಣಿಗಳ ಜಾರಿಗೊಳಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸುವುದಷ್ಟೇ ರಾಜ್ಯ ಸರಕಾರದ ಕೆಲಸವೆಂಬ ಭಾವನೆಯೊಂದಿಗೆ ಈ ಅಧಿಕಾರಿಗಳು ಕೆಲಸ ಮಾಡುತ್ತಿರುತ್ತಾರೆ.

ರಾಜ್ಯ ಸರಕಾರದ ಮೂಲಭೂತ ವೆಚ್ಚಗಳನ್ನು ಕೂಡಾ ಕೇಂದ್ರ ಸರಕಾರವೇ ಜಾಗರೂಕತೆಯಿಂದ ನಿಯಂತ್ರಿಸುತ್ತದೆ. ರಾಜ್ಯ ಸರಕಾರಗಳಿಗೆ ತಮ್ಮದೇ ಯೋಜನೆಗಳಿಗೆ ಹೂಡಿಕೆ ಮಾಡುವುದಕ್ಕೆ ಅಲ್ಪಸ್ವಲ್ಪ ಉತ್ತೇಜನಾತ್ಮಕ ಧನಸಹಾಯವನ್ನಷ್ಟೇ ಕೇಂದ್ರ ನೀಡುತ್ತಿದೆ. ವಿಶೇಷವಾಗಿ ಉತ್ತರ ಭಾರತದ ಬಡರಾಜ್ಯಗಳಲ್ಲಿ ಸಾಂಸ್ಥಿಕ ಸಾಮರ್ಥ್ಯದ ಕೊರತೆಯು, ರಾಜ್ಯಗಳ ಚಟುವಟಿಕೆಗಳನ್ನು ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ಸೂಕ್ಷ್ಮವಟ್ಟದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಿದೆ.

    ರಾಜ್ಯ ಮಟ್ಟದಲ್ಲಿ ಬಲವಾದ ಆರ್ಥಿಕ ಸ್ವಾಯತ್ತತೆಯನ್ನು ನೀಡಬೇಕೆಂಬ ಒತ್ತಾಯ ಅಧಿಕಾರಿವಲಯದಿಂದ ವ್ಯಕ್ತವಾಗದೆ ಇರುವುದರಿಂದಲೇ ರಾಜ್ಯಗಳಿಗೆ ದೊಡ್ಡ ಮಟ್ಟದ ವಿತ್ತೀಯ ಹಂಚಿಕೆಯನ್ನು ನೀಡಬೇಕೆಂಬ ರಾಜಕೀಯ ಬೇಡಿಕೆ ಸಾಕಾರಗೊಂಡಿಲ್ಲ. ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸಬೇಕೆಂದು ಸತತವಾಗಿ ಎರಡು ಹಣಕಾಸು ಆಯೋಗಗಳು ಶಿಫಾರಸು ಮಾಡಿದ ಹೊರತಾಗಿಯೂ ಹಾಗೂ ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ರಾಜ್ಯಗಳಿಗೆ ನೇರವೆಚ್ಚಕ್ಕಾಗಿ ಹೆಚ್ಚಿನ ಆರ್ಥಿಕ ಅನುದಾನ ನೀಡಬೇಕೆಂಬ ಬೇಡಿಕೆಗಳ ಹೊರತಾಗಿಯೂ ಕೇಂದ್ರ ಸರಕಾರ ಪ್ರಾಯೋಜಿತ ಕಲ್ಯಾಣ ಯೋಜನೆಗಳಿಗೆ ಅಧಿಕ ಪ್ರಮಾಣದ ಹಣವನ್ನು ಮೀಸಲಿಡಲಾಗುತ್ತಿದೆ. ರಾಜ್ಯ ಸರಕಾರದ ಯೋಜನೆಗಳಿಗಿಂತ ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ.

( ಲೇಖಕಿ ಯಾಮಿನಿ ಅಯ್ಯರ್ ಅವರು ಹೊಸದಿಲ್ಲಿಯ ನೀತಿ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.)

Writer - ಯಾಮಿನಿ ಅಯ್ಯರ್

contributor

Editor - ಯಾಮಿನಿ ಅಯ್ಯರ್

contributor

Similar News