×
Ad

ಕುಂಟುತ್ತಾ ಸಾಗಿದ ಆರ್ಥಿಕತೆ, ರಾಜ್ಯದಲ್ಲಿ 83 ಸಾವಿರ ಉದ್ಯೋಗ ನಷ್ಟ!

Update: 2022-02-22 07:54 IST

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 1258 ಉದ್ಯಮಗಳು ಮುಚ್ಚಿದ್ದು, ಸುಮಾರು 83 ಸಾವಿರ ಉದ್ಯೋಗ ನಷ್ಟ ಸಂಭವಿಸಿದೆ ಎನ್ನುವುದು ಸರ್ಕಾರಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಸಣ್ಣ ಉದ್ದಿಮೆಗಳು ಕೋವಿಡ್-19 ಸಾಂಕ್ರಾಮಿಕದ ಆರ್ಥಿಕ ಪರಿಣಾಮಕ್ಕೆ ಮುನ್ನವೇ ಸಮಸ್ಯೆ ಎದುರಿಸುತ್ತಿದ್ದವು ಹಾಗೂ ಸಾಂಕ್ರಾಮಿಕ ಸ್ಥಿತಿ ಸಮಸ್ಯೆ ಉಲ್ಬಣಕ್ಕೆ ಪೂರಕವಾಯಿತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ವಿಧಾನಸಭೆಯಲ್ಲಿ ನೀಡಲಾದ ಅಂಕಿ ಅಂಶಗಳ ಪ್ರಕಾರ 2020, ರಾಜ್ಯದ ಕೈಗಾರಿಕೆಗಳ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. 16 ದೊಡ್ಡ ಕೈಗಾರಿಕೆಗಳು ಕೂಡಾ ಈ ಅವಧಿಯಲ್ಲಿ ಹಣಕಾಸು ಸಮಸ್ಯೆಯಿಂದಾಗಿ ಮುಚ್ಚಲ್ಪಟ್ಟಿವೆ. 2020ರಲ್ಲಿ 562 ಸಣ್ಣ ಕೈಗಾರಿಕೆಗಳು ಮುಚ್ಚಿದ್ದು, 31722 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಾಂಕ್ರಾಮಿಕ ಬರುವ ಮುನ್ನ 2019ರಲ್ಲಿ 504 ಸಣ್ಣ ಘಟಕಗಳು ಮುಚ್ಚಿದ್ದು, 36605 ಮಂದಿಗೆ ಉದ್ಯೋಗ ನಷ್ಟವಾಗಿದೆ.

ಸಾಂಕ್ರಾಮಿಕದಿಂದ ಜರ್ಜರಿತವಾದ ಕೈಗಾರಿಕೆಗಳ ಸ್ಥಿತಿ ಆರ್ಥಿಕತೆಯ ಪುನಶ್ಚೇತನ ಪ್ರಯತ್ನಗಳ ಹೊರತಾಗಿಯೂ ಸುಧಾರಿಸಿಲ್ಲ. 2021ರಲ್ಲಿ ಒಟ್ಟು 192 ಸಣ್ಣ ಕೈಗಾರಿಕೆಗಳು ಮುಚ್ಚಿದ್ದು, 14863 ಮಂದಿಯ ಉದ್ಯೋಗಕ್ಕೆ ಸಂಚಕಾರ ತಂದಿದೆ. ಮೂರು ವರ್ಷಗಳ ಅವಧಿಯಲ್ಲಿ 49946 ಮಂದಿ ಪುರುಷರು ಮತ್ತು 33244 ಮಂದಿ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಈ ಅಂಕಿ ಅಂಶಗಳನ್ನು ನೀಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಮುಚ್ಚಿದ 17 ದೊಡ್ಡ ಕೈಗಾರಿಕೆಗಳ ಪೈಕಿ 7 ಬೆಂಗಳೂರು ಗ್ರಾಮೀಣ ಜಿಲ್ಲೆಗೆ ಸೇರಿವೆ. ಬಾಗಲಕೋಟೆಯಲ್ಲಿ 3, ಗದಗದಲ್ಲಿ 2, ರಾಮನಗರ, ಕೋಲಾರ, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ತಲಾ ಒಂದು ಕೈಗಾರಿಕೆಗಳು ಮುಚ್ಚಿವೆ. ಹಣಕಾಸು ಸಮಸ್ಯೆ ಮತ್ತು ಕಚ್ಚಾ ವಸ್ತುಗಳ ಪೂರೈಕೆ ಕೊರತೆ ಉದ್ಯಮಗಳು ಮುಚ್ಚಲು ಪ್ರಮುಖ ಕಾರಣ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News