×
Ad

ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಬಿಜೆಪಿಗಿಲ್ಲವೇ: ಶಾಸಕ ರಿಝ್ವಾನ್ ಅರ್ಶದ್ ಪ್ರಶ್ನೆ

Update: 2022-02-22 18:01 IST

ಬೆಂಗಳೂರು, ಫೆ.22: ರಾಷ್ಟ್ರದ್ರೋಹದ ಕೆಲಸ ಮಾಡಿರುವ ಸಚಿವ ಈಶ್ವರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೇವಲ ಛೀಮಾರಿ ಹಾಕಿದರೆ ಸಾಕೇ? ಅವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಬಿಜೆಪಿ ಹೈಕಮಾಂಡ್‍ಗಾಗಲಿ, ರಾಜ್ಯ ನಾಯಕರಿಗಾಗಲಿ ಇಲ್ಲವೇ? ಅಥವಾ ಮನಸ್ಸಿಲ್ಲವೇ ಎಂದು ಶಾಸಕ ರಿಝ್ವಾನ್ ಅರ್ಶದ್ ಪ್ರಶ್ನಿಸಿದರು.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈಶ್ವರಪ್ಪಗೆ ಛೀಮಾರಿ ಹಾಕಿದ್ದಾರೆ ಎಂದು ಖಾಸಗಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಕೇವಲ ಛೀಮಾರಿ ಹಾಕಿದರೆ ಸಾಕೇ? ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ? ಎಂದರು.

ದೇಶದ ಗಡಿಯಲ್ಲಿ ನಮ್ಮ ಸೈನಿಕರು ರಾಷ್ಟ್ರಧ್ವಜದ ಗೌರವ ಕಾಪಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆ. ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಈ ಧ್ವಜ ನಮಗೆ ಸಿಕ್ಕಿದೆಯೇ ಹೊರತು, ಪುಕ್ಕಟೆಯಾಗಲ್ಲ. ಇಡೀ ದೇಶದ ಎಲ್ಲ ನಾಗರಿಕರ ಹೆಮ್ಮೆಯ ಪ್ರತೀಕವಾಗಿರುವ ಈ ಧ್ವಜದ ಬಗ್ಗೆ ರಾಜ್ಯದ ಸಚಿವ, ಬಿಜೆಪಿ ನಾಯಕ ಅವಮಾನಕರವಾಗಿ ಹೇಳಿಕೆ ನೀಡಿದ್ದಾರೆ ಎಂದು ಅವರು ಕಿಡಿಗಾರಿದರು.

ಬಿಜೆಪಿಯವರು ತಮ್ಮನ್ನು ದೇಶಭಕ್ತರು ಎಂದು ಬಿಂಬಿಸಿಕೊಳ್ಳುತ್ತಾರೆ. ರಾಷ್ಟ್ರದ್ರೋಹದ ಕೆಲಸ ಮಾಡಿರುವ ಸಚಿವನಿಗೆ ಜೆ.ಪಿ.ನಡ್ಡಾ ಛೀಮಾರಿ ಹಾಕಿದರೆ ಸಾಕೆ? ಏನೂ ಮಾಡದೆ ಇರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೀರಾ. ಆದರೆ, ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಿ ದೇಶದ್ರೋಹದ ಪ್ರಕರಣ ಯಾಕೆ ದಾಖಲು ಮಾಡಲಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.

ಆರೆಸ್ಸೆಸ್‍ನವರು ಏನಾದರೂ ಇದಕ್ಕೆ ತಡೆ ಹಿಡಿಸಿದ್ದಾರಾ? ಈಶ್ವರಪ್ಪ ನೀಡಿರುವ ಹೇಳಿಕೆಯು ಆರೆಸ್ಸೆಸ್, ಸಂಘಪರಿವಾರದ ಅಜೆಂಡಾದಂತೆ ಹೇಳಿಕೆ ನೀಡಿದ್ದಾರೆ. ಅವರ ಕನಸು ಸಹ ಇದೇ ಆಗಿದೆ. ಆದರೆ, ಇವತ್ತಲ್ಲ ಇನ್ನೂ ಐದು ಸಾವಿರ ವರ್ಷಗಳಾದರೂ ಯಾರೊಬ್ಬರೂ ಕೂಡ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ಸದನ ನಡೆಸಲೇಬೇಕು ಎಂಬ ಮನಸ್ಸು ಸರಕಾರಕ್ಕೆ ಇದ್ದಿದ್ದರೆ ಈಶ್ವರಪ್ಪ ರಾಜೀನಾಮೆಯನ್ನು ಯಾಕೆ ಪಡೆದಿಲ್ಲ. ಸಂಪುಟ ಸಚಿವರೊಬ್ಬರಿಂದ ರಾಷ್ಟ್ರ ಧ್ವಜಕ್ಕೆ ಅಪಮಾನ ಆದಾಗ ಸದನದಲ್ಲಿ ನಾವು ಹೋರಾಟವನ್ನು ಮಾಡಬಾರದು ಎಂದರೆ ಯಾವ ನ್ಯಾಯ? ಸದನ ಮುಂದೂಡಿದ್ದಾರೆ. ಇನ್ನೂ ನಾವು ಜನರ ಮುಂದೆ ಹೋಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈಶ್ವರಪ್ಪ ರಾಜೀನಾಮೆ ನೀಡಬೇಕು, ಬಿಜೆಪಿಯವರು ಎಂತಹ ದೇಶದ್ರೋಹಿಗಳೆಂದು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ರಿಝ್ವಾನ್ ಅರ್ಶದ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News