ಬೆಂಗಳೂರು: ಅಂಗವಿಕಲ ಪುನರ್ವಸತಿ ಕಾರ್ಯಕರ್ತರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು, ಫೆ.22: ಅಂಗವಿಕಲರ ಪುನರ್ವಸತಿ ಕಾರ್ಯಕರ್ತರ ಕೆಲಸ ಕಾಯಂಗೊಳಿಸಲು, ಕಾಯಂ ಮಾಡುವವರೆಗೂ ಕನಿಷ್ಠ ವೇತನ ನೀಡಲು, ಬಾಕಿ ಇರುವ ಗೌರವಧನ ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಅಂಗವಿಕಲರ ಗ್ರಾಮೀಣ, ನಗರ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ಮಂಗಳವಾರದಂದು ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿ ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, 2007-08ನೇ ಸಾಲಿನಲ್ಲಿ ಸರಕಾರವು ಅಂಗವಿಕಲ ಪುನರ್ವಸತಿ ಯೋಜನೆಯಡಿ ಅಂಗವಿಕಲರಿಗೆ ಗೌರವಧನ ಪಡೆದು ಪುನರ್ವಸತಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲಸವು ಕಾಯಂ ಆಗದ ಕಾರಣ ಕೆಲಸವನ್ನು ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಕಳೆದ ಏಳು ತಿಂಗಳಿನಿಂದ ಸರಿಯಾಗಿ ಗೌರವಧನ ಬಿಡುಗಡೆಯಾಗುತ್ತಿಲ್ಲ. ಕಾಯಂ ಆದರೆ ಇಂತಹ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಮುಖಂಡ ಮಂಜುನಾಥ ಹೆಬ್ಬಾರ್ ಮಾತನಾಡಿ, ಪುನರ್ವಸತಿ ಕಾರ್ಯಕರ್ತರು ಮಾಡುವ ಕೆಲಸಕ್ಕೆ ಕನಿಷ್ಠ ವೇತನ ನೀಡಬೇಕು ಎಂದು ಸರಕಾರದ ಮೇಲೆ ಒತ್ತಡ ತಂದು ಪ್ರತಿಭಟನೆ ಮಾಡಿದಾಗ, ದಾನ ಎಂಬಂತೆ ಆಗಾಗ ಗೌರವಧನವನ್ನು ಹೆಚ್ಚಿಸಿ ಸಮಾಧಾನ ಮಾಡಲಾಗುತ್ತಿದೆ. ಹಾಗಾಗಿ ಕಳೆದ 13 ವರ್ಷಗಳಿಂದ ದುಡಿಯುತ್ತಿರುವ ಪುನರ್ವಸತಿ ಕಾರ್ಯಕರ್ತರ ಆರ್ಥಿಕ ಭದ್ರತೆಗಾಗಿ ಕಾಯಂ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದರು.