ಬೆಂಗಳೂರು: ಪ್ಲಾಸ್ಟಿಕ್ ಉತ್ಪಾದಕ ಘಟಕಗಳಿಂದ 6 ಲಕ್ಷಕ್ಕೂ ಅಧಿಕ ದಂಡ ವಸೂಲಿ

Update: 2022-02-22 14:25 GMT

ಬೆಂಗಳೂರು, ಫೆ.22: ಬಿಬಿಎಂಪಿಯ ದಕ್ಷಿಣ ವಲಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಉತ್ಪಾದಿಸುವ ಎರಡು ಘಟಕಗಳಿಗೆ ಪಾಲಿಕೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, 200 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ 6,25,000 ರೂ.ಗಳು ದಂಡ ವಿಧಿಸಿದ್ದಾರೆ. 

ಪದ್ಮನಾಭನಗರ ವಾರ್ಡ್‍ನ ಸುಬ್ರಮಣ್ಯಪುರ ಮುಖ್ಯ ರಸ್ತೆಯಲ್ಲಿರುವ ಅಗ್ರಿ ಎಂಟರ್‍ಪ್ರೈಸೆಸ್ ಘಟಕದಿಂದ ಹಳೆಯ ದಂಡ 5 ಲಕ್ಷ ರೂ. ಹಾಗೂ ಹೊಸದಾಗಿ 1 ಲಕ್ಷ ರೂ. ಸೇರಿದಂತೆ ಒಟ್ಟು 6 ಲಕ್ಷ ರೂ. ದಂಡವನ್ನು ಚೆಕ್ ಮೂಲಕ ಪಡೆದು 200 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಜೊತೆಗೆ ಪದ್ಮನಾಭನಗರ ವಾರ್ಡ್‍ನ ಗೌಡನಪಾಳ್ಯ ಬಳಿಯಿರುವ ಗ್ರೇಸ್ ಪಾಲಿಮರ್ಸ್ ಘಟಕದಿಂದ 25 ಸಾವಿರ ರೂ. ದಂಡ ವಿಧಿಸಿ ಚೆಕ್ ಮೂಲಕ ಹಣ ಪಡೆಯಲಾಗಿದೆ. 

ನಗರದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್‍ಅನ್ನು ಬಳಸಲು ಅವಕಾಶವಿರುವುದಿಲ್ಲ. ಹಾಗಾಗಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಕಾರ್ಯವನ್ನು ಆಯಾ ವಲಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾಗೊಳಿಸಲು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ವಲಯವಾರು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News