×
Ad

ಶಿವಮೊಗ್ಗದಲ್ಲಾದ ನಾಶ ನಷ್ಟವನ್ನು ಸಚಿವ ಈಶ್ವರಪ್ಪ ಭರಿಸಲಿ

Update: 2022-02-23 00:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಯುವಕರೇ ದೇಶದ ಶಕ್ತಿ’ ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದರು. ಅಂತಹ ಯುವಕರನ್ನು ಬಳಸಿಕೊಂಡು ಇಂದು ನಮ್ಮ ರಾಜಕಾರಣಿಗಳು ದೇಶವನ್ನು ವಿಚ್ಛಿದ್ರಗೊಳಿಸುವ ಕಾರ್ಯಕ್ಕಿಳಿದಿದ್ದಾರೆ. ಯುವಕರು ಮನೆಗಾಗಲಿ, ದೇಶಕ್ಕಾಗಲಿ ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರದೇ ಯಾರ್ಯಾರದೋ ರಾಜಕೀಯ ವ್ಯಕ್ತಿಗಳ ದಾಳಗಳಾಗಿ ಬೀದಿ ಹೆಣವಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬನ ಹತ್ಯೆ ಬರೇ ಶಿವಮೊಗ್ಗದ ಶಾಂತಿಯನ್ನು ಮಾತ್ರವಲ್ಲ, ಇಡೀ ರಾಜ್ಯದ ಶಾಂತಿಯನ್ನು ಕೆಡಿಸಿದೆ ಮತ್ತು ಈ ರಾಜ್ಯವನ್ನು ಆಳುವ ಪಕ್ಷದ ಸಚಿವರೇ ಈ ಅಶಾಂತಿಯ ನೇತೃತ್ವವನ್ನು ವಹಿಸಿರುವುದು ವಿಪರ್ಯಾಸವಾಗಿದೆ. ಸರಕಾರದೊಳಗಿರುವ ಸಚಿವರೇ ಶಾಂತಿಯನ್ನು ಕೆಡಿಸುವುದಕ್ಕೆ ಮುಂದಾದರೆ,ರಾಜ್ಯದ ಶಾಂತಿಯನ್ನು ಕಾಪಾಡಬೇಕು ಎಂದು ಜನರು ಯಾರಲ್ಲಿ ಮೊರೆಯಿಡಬೇಕು? ಯುವಕರನ್ನು ಹಿಂದೂ-ಮುಸ್ಲಿಮ್ ಎಂದು ಒಡೆದು ಬಡ ಶೂದ್ರ, ದಲಿತ, ಮುಸ್ಲಿಮ್ ಯುವಕರನ್ನು ಬಲಿಕೊಡುವ ರಾಜಕಾರಣದ ವಿರುದ್ಧ ಜನಸಾಮಾನ್ಯರು ಒಂದಾಗಲೇ ಬೇಕಾದ ಸಮಯ ಹತ್ತಿರವಾಗಿದೆ.

 ರಾಜ್ಯದಲ್ಲಿ ಅಶಾಂತಿಯನ್ನು ಬಿತ್ತುವುದಕ್ಕೆ ಕಳೆದೆರಡು ತಿಂಗಳಲ್ಲಿ ರಾಜಕಾರಣಿಗಳು ಪ್ರಯತ್ನಿಸುತ್ತಿರುವುದು ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದೆ. ಹಿಜಾಬ್‌ನ ಹೆಸರಿನಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ತಂದಿಡುವ ರಾಜಕಾರಣಿಗಳ ಪ್ರಯತ್ನದ ಪರಿಣಾಮವಾಗಿ ರಾಜ್ಯದ ಸಹಸ್ರಾರು ಮುಸ್ಲಿಮ್ ತರುಣಿಯರು ಶಿಕ್ಷಣದ ಹಕ್ಕನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ. ಹಿಜಾಬ್‌ನ ಹೆಸರಲ್ಲಿ ಈಗಾಗಲೇ ರಾಜಕಾರಣಿಗಳು ಸಾಕಷ್ಟು ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಮಾಜಕ್ಕೆ ಬೆಂಕಿ ಹಚ್ಚುವ ಗರಿಷ್ಠ ಪ್ರಯತ್ನ ನಡೆಸಿದ್ದಾರೆ ಮತ್ತು ಇದರ ನೇತೃತ್ವವನ್ನು ಸಚಿವ ಈಶ್ವರಪ್ಪ ಅವರೇ ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚುವುದನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದ ಅವರು, ಕೆಂಪುಕೋಟೆಯಲ್ಲಿ ಕೇಸರಿ ಬಾವುಟ ಹಾರಿಸುವ ಹೇಳಿಕೆ ನೀಡಿ, ಬಿಜೆಪಿ ಮುಖಂಡರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಏಕಾಏಕಿ ಬಜರಂಗದಳ ಕಾರ್ಯಕರ್ತನೊಬ್ಬನ ಕೊಲೆಯಾಗಿದೆ. ಕೊಲೆಯಾದ ಬೆನ್ನಿಗೇ ಮೃತದೇಹದ ಮೇಲೆ ಬಿಜೆಪಿ ರಾಜಕಾರಣಿಗಳು ರಣಹದ್ದುಗಳಂತೆ ಎರಗಿದ್ದಾರೆ. ಮೃತದೇಹವನ್ನು ಬಳಸಿಕೊಂಡು ಶಿವಮೊಗ್ಗಕ್ಕೆ ಬೆಂಕಿ ಹಚ್ಚಿದ್ದಾರೆ. ಈಗಾಗಲೇ ಲಾಕ್‌ಡೌನ್‌ನಿಂದ ಕಂಗೆಟ್ಟು ಹೋಗಿರುವ ಜನಸಾಮಾನ್ಯರ ಅಂಗಡಿ ಮುಂಗ್ಗಟ್ಟುಗಳಿಗೆ ಬೆಂಕಿ ಬಿದ್ದಿದೆ. ಜನರು ಬೀದಿಯಲ್ಲಿ ನಿಂತು ಎದೆ ಬಡಿದುಕೊಂಡು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತನ ಹತ್ಯೆ ಮಾಡಿದವರು ಯಾವ ಸಮುದಾಯಕ್ಕೆ, ಯಾವ ಪಕ್ಷಕ್ಕೇ ಸೇರಿರಲಿ, ಅವರಿಗೆ ಶಿಕ್ಷೆಯಾಗಲೇಬೇಕು. ವಿಪರ್ಯಾಸವೆಂದರೆ, ಪೊಲೀಸರಿನ್ನೂ ಕೊಲೆಗಾರರ ಹೆಸರನ್ನು ಘೋಷಣೆ ಮಾಡುವುದಕ್ಕೆ ಮುಂಚೆಯೇ ಈಶ್ವರಪ್ಪ ಅವರು ಆ ಕೊಲೆಗೆ ಒಂದು ಸಮುದಾಯವನ್ನೇ ಹೊಣೆ ಮಾಡಿ ಹೇಳಿಕೆಗಳನ್ನು ನೀಡ ತೊಡಗಿದರು. ಅತ್ಯಂತ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದರು. ಪೊಲೀಸರು ಇನ್ನೂ ತನಿಖೆ ನಡೆಸುತ್ತಿರುವಾಗ, ಇದು ಒಂದು ನಿರ್ದಿಷ್ಟ ಸಮುದಾಯದ ಜನ ಮಾಡಿದ ಕೊಲೆ ಎನ್ನುವುದು ಇವರಿಗೆ ಹೇಗೆ ಗೊತ್ತಾಯಿತು? ಕೊಲೆಗಾರರಿಗೆ ಧರ್ಮವಿಲ್ಲ. ಸದ್ಯಕ್ಕೆ ಒಂದು ಕೊಲೆ ನಡೆಯಲೇ ಬೇಕಾಗಿರುವ ಅಗತ್ಯ ಯಾರಿಗಿದೆ ಎನ್ನುವುದು ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಗೊತ್ತಿದೆ. ಆದುದರಿಂದಲೇ ಕೊಂದವರು ಯಾವ ಧರ್ಮದವನೇ ಇರಲಿ ಅವನು ‘ಕೊಲೆಗಾರ’ ಧರ್ಮವನ್ನು ಪ್ರತಿನಿಧಿಸುತ್ತಾನೆ. ಸದ್ಯಕ್ಕೆ ಕೊಂದವರು ಯಾರು ಎನ್ನುವುದನ್ನು ಪೊಲೀಸರು ಕಂಡು ಹಿಡಿದಿದ್ದಾರೆ. ಇದು ವೈಯಕ್ತಿಕ ದ್ವೇಷದಿಂದ ನಡೆದಿರುವ ಕೊಲೆಯೋ ಅಥವಾ ಯಾರಾದರೂ ರಾಜಕೀಯ ಕಾರಣಕ್ಕಾಗಿ ಕೊಲ್ಲಿಸಿದರೋ ಎನ್ನುವ ತನಿಖೆ ಗಂಭೀರವಾಗಿ ನಡೆಯಬೇಕಾಗಿದೆ.

‘ಮುಸ್ಲಿಮ್ ಗೂಂಡಾಗಳು ಕೊಂದಿದ್ದಾರೆ’ ಎಂಬ ಹೇಳಿಕೆಯನ್ನು ಈಶ್ವರಪ್ಪ ನೀಡಿದ್ದಾರೆ. ‘ಮುಸ್ಲಿಮ್ ಗೂಂಡಾಗಳು’, ‘ಹಿಂದೂ ಗೂಂಡಾಗಳು’ ನಮ್ಮ ನಡುವೆ ಇಲ್ಲ. ಆದರೆ ಬಿಜೆಪಿಯ ಗೂಂಡಾಗಳು, ಕಾಂಗ್ರೆಸ್‌ನ ಗೂಂಡಾಗಳು, ಎಸ್‌ಡಿಪಿಐ ಗೂಂಡಾಗಳು ಇದ್ದಾರೆ. ಯಾಕೆಂದರೆ ಯಾವುದೇ ಧರ್ಮ ಗೂಂಡಾಗಿರಿಯನ್ನು ಈವರೆಗೆ ಬೋಧಿಸಿದ್ದಿಲ್ಲ. ಧರ್ಮ ಪ್ರಚಾರಕ್ಕೆ ಗೂಂಡಾಗಳ ಅಗತ್ಯವೂ ಇಲ್ಲ. ಆದರೆ ರಾಜಕಾರಣಿಗಳಿಗೆ ರಾಜಕಾರಣ ನಡೆಸುವುದಕ್ಕೆ ಗೂಂಡಾಗಳ ಅಗತ್ಯವಿದೆ. ಗೂಂಡಾಗಳನ್ನು ಸೃಷ್ಟಿಸಿದವರು ರಾಜಕಾರಣಿಗಳು. ಗೂಂಡಾಗಳನ್ನು ಪಕ್ಷದ ನೆಲೆಯಲ್ಲಿ ಗುರುತಿಸಬೇಕಾಗಿದೆ. ಒಬ್ಬ ಬಿಜೆಪಿಯ ಗೂಂಡಾನನ್ನು ಇನ್ನೊಂದು ಯಾವುದೋ ಪಕ್ಷದ ಗೂಂಡಾ ಯಾವುದೋ ರಾಜಕೀಯ ಹಿತಾಸಕ್ತಿಗಾಗಿ ಕೊಂದಿದ್ದರೆ ಆ ರಾಜಕೀಯ ಪಕ್ಷವನ್ನು ಗುರುತಿಸುವ ಕೆಲಸ ನಡೆಯಬೇಕು. ಕೊಲೆಗಾರರನ್ನು ಮುಸ್ಲಿಮ್ ಗೂಂಡಾಗಳು, ಹಿಂದೂ ಗೂಂಡಾ ಎಂದು ಕರೆಯುವ ಅವಿವೇಕಿ ರಾಜಕಾರಣಿಗಳು ನೆಮ್ಮದಿಯಿಂದ ಬದುಕುತ್ತಿರುವ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಉದ್ದೇಶವನ್ನಷ್ಟೇ ಹೊಂದಿರುತ್ತಾರೆ.

ಹೇಗೆ ಕೊಲೆಗಾರರಿಗೆ ಶಿಕ್ಷೆಯಾಗಬೇಕೋ, ಹಾಗೆಯೇ ಶಿವಮೊಗ್ಗಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕಾಗಿದೆ. ಮೃತಪಟ್ಟಿರುವುದು ಕೇವಲ ಬಜರಂಗದಳದ ಕಾರ್ಯಕರ್ತ ಮಾತ್ರವಲ್ಲ, ದುಷ್ಕರ್ಮಿಗಳು ನಾಶ ಮಾಡಿದ ಅಂಗಡಿ ಮುಂಗ್ಗಟ್ಟುಗಳಿಂದಾಗಿ ಹತ್ತು ಹಲವರ ಕನಸುಗಳು ಸತ್ತು ಹೋಗಿವೆ. ಆದುದರಿಂದ ಶಿವಮೊಗ್ಗಕ್ಕೆ ಬೆಂಕಿ ಬೀಳುವುದಕ್ಕೆ ಕಾರಣರಾದ ಕಾರ್ಯಕರ್ತರು, ಅವರನ್ನು ಪ್ರಚೋದಿಸಿದ ರಾಜಕಾರಣಿಗಳು ಮತ್ತು ವಿಫಲವಾದ ಕಾನೂನು ವ್ಯವಸ್ಥೆಯ ಬಗ್ಗೆಯೂ ಜನರು ಪ್ರಶ್ನಿಸಬೇಕಾಗಿದೆ. ಮುಖ್ಯವಾಗಿ ನಿಷೇಧಾಜ್ಞೆ ವಿಧಿಸಿದ ನಗರದಲ್ಲಿ ಮೃತನ ಮೆರವಣಿಗೆ ಮಾಡಲು ಪೊಲೀಸರು ಹೇಗೆ, ಯಾಕೆ ಅನುಮತಿ ನೀಡಿದರು? ರಾಜ್ಯ ಸರಕಾರದ ಒತ್ತಡದಿಂದಾಗಿ ಪೊಲೀಸರು ಅಸಹಾಯಕರಾದರೆ? ಮೆರವಣಿಗೆಯ ನೇತೃತ್ವವನ್ನು ಸ್ವತಃ ಈಶ್ವರಪ್ಪ ಅವರೇ ವಹಿಸಿಕೊಂಡಿದ್ದರು ಎಂದ ಮೇಲೆ, ನಡೆದ ಎಲ್ಲ ದಾಂಧಲೆಗಳ ಹಿಂದೆ ಅವರ ಕೈಯಿದೆ ಎಂದಾಯಿತಲ್ಲವೆ? ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ನಾಶ ನಷ್ಟ ಸಂಭವಿಸಿದರೆ ಅದಕ್ಕೆ ಕಾರಣರಾದವರಿಂದಲೇ ನಷ್ಟ ತುಂಬಿಸಬೇಕು ಎನ್ನುವುದು ಬಿಜೆಪಿಯ ವಾದ. ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಈಬಗ್ಗೆ ನಿಲುವನ್ನು ತಳೆದಿವೆ. ರಾಜ್ಯದಲ್ಲೂ ಆ ಕಾನೂನು ಜಾರಿಗೆ ಬರಬೇಕು ಎಂದು ಬಿಜೆಪಿ ನಾಯಕರು ಆಗಾಗ ಹೇಳುತ್ತಾ ಬಂದಿದ್ದಾರೆ. ಹಾಗಾದರೆ, ಶಿವಮೊಗ್ಗದಲ್ಲಿ ನಡೆದ ನಾಶ, ನಷ್ಟವನ್ನು ಈಶ್ವರಪ್ಪ ಅವರಿಂದ ಸರಕಾರ ತುಂಬಿಸಿಕೊಳ್ಳುತ್ತದೆಯೆ?

ಮೃತನ ಸೋದರಿಯೊಬ್ಬರು ‘ದಯವಿಟ್ಟು ದ್ವೇಷ ರಾಜಕಾರಣಕ್ಕೆ ಬಲಿಯಾಗಬೇಡಿ. ನನ್ನ ತಮ್ಮನಿಗೆ ಒದಗಿದ ಸ್ಥಿತಿ ನಿಮಗೆ ಒದಗದಿರಲಿ. ಹಿಂದೂಗಳಿರಲಿ, ಮುಸ್ಲಿಮರಿರಲಿ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗುವುದಕ್ಕೆ ಪ್ರಯತ್ನಿಸಿ. ಇಂತಹ ರಾಜಕೀಯಕ್ಕೆ ದಾಳಗಳಾಗಿ ಬೀದಿ ಹೆಣ ಆಗಬೇಡಿ’ ಎಂದು ಮನವಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಕಿ ಹಚ್ಚುವ ರಾಜಕಾರಣಿಗಳ ನಡುವೆ ತನ್ನ ಸೋದರನ ಮೃತದೇಹವನ್ನು ತೋರಿಸಿ ‘ದಯವಿಟ್ಟು ಅವ ನಂತೆ ನೀವಾಗಬೇಡಿ’ ಎಂದು ಯುವಕರಿಗೆ ಕರೆ ನೀಡುತ್ತಿರುವ ಆ ಸೋದರಿಯ ಮಾತು ಯುವ ಸಮುದಾಯಕ್ಕೆ ಮಾರ್ಗದರ್ಶನವಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News