×
Ad

ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ: ದಿನೇಶ್ ಗುಂಡೂರಾವ್

Update: 2022-02-23 10:22 IST

ಶಿವಮೊಗ್ಗ, ಫೆ.23: ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ. ಮತಾಂಧ ಶಕ್ತಿಗಳು ಇನ್ನಾದರೂ ಅಮಾಯಕರ ಸಮಾಧಿ ಮೇಲೆ ಸೌಧ ಕಟ್ಟುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್‍ ಮುಖಂಡ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಮೃತ ಯುವಕನ ಸೋದರಿಯ ಸೌಹಾರ್ದ, ಶಾಂತಿಯ ಸಂದೇಶವನ್ನು ಉಲ್ಲೇಖಿಸಿದ್ದಾರೆ.

 ಶಿವಮೊಗ್ಗದಲ್ಲಿ ಹತ್ಯೆಯಾದ ಮೃತ ಹರ್ಷನ ಸೋದರಿ ಅಶ್ವಿನಿಯ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತ ಹರ್ಷನ ಸೋದರಿ ವ್ಯಕ್ತಪಡಿಸಿರುವ ಅಭಿಪ್ರಾಯ ಅತ್ಯಂತ ಪ್ರಸ್ತುತ. ಕೆಲ ಮತಾಂಧ ಶಕ್ತಿಗಳು ಮುಗ್ಧರ ತಲೆಯಲ್ಲಿ ಮತಾಂಧತೆಯನ್ನು ತುಂಬುತ್ತಾ ಕೋಮುದ್ವೇಷ ಹರಡುತ್ತಿದ್ದಾರೆ. ಆದರೆ ಅಮಾಯಕರೇ ಈ ಮತಾಂಧ ಶಕ್ತಿಗಳ ಷಡ್ಯಂತ್ರದ ಬಲಿ.

ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯೆ? ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು. ಅಶ್ವಿನಿಯ ಮಾತನ್ನು ಎಲ್ಲ ಧರ್ಮದ ಮತಾಂಧ ಶಕ್ತಿಗಳು ಅರಿತುಕೊಳ್ಳಬೇಕು. ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ. ಮತಾಂಧ ಶಕ್ತಿಗಳು ಇನ್ನಾದರೂ ಅಮಾಯಕರ ಸಮಾಧಿ ಮೇಲೆ ಸೌಧ ಕಟ್ಟುವುದನ್ನು ನಿಲ್ಲಿಸಲಿ ಎಂದವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News