ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಆಗ್ರಹಿಸಿ ಫೆ.24ಕ್ಕೆ ಸಚಿವಾಲಯದ ನೌಕರರ ಸಂಘ ಮೌನ ಹೋರಾಟ
ಬೆಂಗಳೂರು, ಫೆ. 23: ‘ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ನಿವೃತ್ತ ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಪುನರ್ ನೇಮಕ ಕೈಬಿಟ್ಟು, ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಬೇಕು' ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಳೆ(ಫೆ.24) ಸಚಿವಾಲಯ ನೌಕರರ ಸಂಘ ಮೌನ ಪ್ರತಿಭಟನೆ ಹಮ್ಮಿಕೊಂಡಿದೆ.
ಬುಧವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ‘ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ವಿಧಾನಸೌಧ ಆವರಣದಲ್ಲಿನ ಗಾಂಧಿ ಪ್ರತಿಮೆ ಬಳಿ ಮೌನ ಚಳವಳಿ ನಡೆಸುತ್ತಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ನೌಕರರ ಬಹುದಿನಗಳ ಬೇಡಿಕೆಯನ್ನು ಕಂಡು ಕಾಣದಂತಿರುವ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವು ನಮ್ಮ ಪ್ರತಿಭಟನೆ' ಎಂದರು.
‘ಆಡಳಿತ ಸುಧಾರಣೆ ನೆಪದಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳ ಕಡಿತ, ಮರುಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು. ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು. ಹೊರ ಗುತ್ತಿಗೆಯಲ್ಲಿ ಒಂದೇ ವರ್ಗದವರನ್ನು ನೇಮಕ ತಪ್ಪಿಸಿ ಸಾಮಾಜಿಕ ನ್ಯಾಯ ಕಾಪಾಡಬೇಕು. ನೌಕರರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಚಿವಾಲಯ ಬಂದ್ ಮಾಡಬೇಕಾಗುತ್ತದೆ' ಎಂದು ಗುರುಸ್ವಾಮಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳಾದ ಬಿ.ಆರ್.ಕುಮಾರಸ್ವಾಮಿ, ಎ.ಎಸ್. ಹರ್ಷ, ಶಾಂತರಾಮ್, ಬಿ.ಎ.ಸತೀಶ್ ಕುಮಾರ್, ಮಂಜುಳಾ, ಮಾರುತಿ, ಜಗದೀಶ್, ವಿದ್ಯಾಶ್ರೀ ಸೇರಿದಂತೆ ಇನ್ನಿತರರು ಹಾಜರಿದ್ದರು.