×
Ad

ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು: ಮುಸ್ಲಿಂ ಮುತ್ತಹಿದ ಮಹಾಝ್

Update: 2022-02-24 00:05 IST

ಬೆಂಗಳೂರು, ಫೆ.23: ಶಿವಮೊಗ್ಗದಲ್ಲಿ ನಡೆದಿರುವ ಘಟನೆಗಳು ಅತ್ಯಂತ ದುರದೃಷ್ಟಕರ. ಹರ್ಷ ಅಥವಾ ಇನ್ನಾವುದೆ ವ್ಯಕ್ತಿಯ ಹತ್ಯೆ ಖಂಡನೀಯ. ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ವ್ಯಕ್ತಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಪ್ರಕರಣವು ತನಿಖೆಯಲ್ಲಿದೆ ಮತ್ತು ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಪೊಲೀಸರು ನ್ಯಾಯಯುತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ. ಹತ್ಯೆಯು ಅಹಿತಕರ ಘಟನೆಗಳ ಸರಣಿಗೆ ಕಾರಣವಾಗಿದೆ ಎಂದು ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಝ್ ತಿಳಿಸಿದೆ.

ಕೆಲವು ವ್ಯಕ್ತಿಗಳು ದ್ವೇಷದ ಭಾಷಣದಲ್ಲಿ ತೊಡಗಿರುವುದು ವಿಷಾದನೀಯ ಮತ್ತು ಎರಡು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಕ್ರಿಮಿನಲ್ ಅಪರಾಧವಾಗಿದೆ. ದ್ವೇಷಪೂರಿತ ಭಾಷಣ ಮಾಡಿದ ಎಲ್ಲ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಈ ಬೆಳವಣಿಗೆ ರಾಜ್ಯದ ಬಹುತ್ವ ಸಂಸ್ಕೃತಿಗೆ ಮಾರಕ. ರಾಜ್ಯದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಸರಕಾರದ ಕರ್ತವ್ಯ ಎಂದು ಮಹಾಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಶಿವಮೊಗ್ಗದ ಬಗ್ಗೆ ಬರುತ್ತಿರುವ ವಿಡಿಯೋಗಳು ಮತ್ತು ವರದಿಗಳು ಆತಂಕಕಾರಿಯಾಗಿದ್ದು, ಪೊಲೀಸ್ ಆದೇಶವನ್ನು ಬಹಿರಂಗವಾಗಿ ಧಿಕ್ಕರಿಸಲಾಗಿದೆ ಮತ್ತು ನಿಷೇಧಾಜ್ಞೆ ನಡುವೆಯೂ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಿಷೇಧಾಜ್ಞೆ ಉಲ್ಲಂಘಿಸಿ ಎಲ್ಲ ವ್ಯಕ್ತಿಗಳ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಎಫ್‍ಐಆರ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಮಾಯಕರ ಆಸ್ತಿ ಪಾಸ್ತಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ವಾಹನಗಳಿಗೆ ಮತ್ತು ಅಂಗಡಿಗಳಿಗೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಲಾಗಿದೆ. ಹಾನಿಯ ಬಗ್ಗೆ ಸರಕಾರ ಕೂಡಲೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಹಾಗೂ ಆಸ್ತಿ ಪಾಸ್ತಿಗೆ ಹಾನಿ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಲಭೆಕೋರರ ವಿರುದ್ಧ ಎಫ್‍ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಮಸೂದ್ ಅಬ್ದುಲ್ ಖಾದರ್ ಒತ್ತಾಯಿಸಿದ್ದಾರೆ.

ಸರಕಾರ ಮತ್ತು ಪೊಲೀಸ್ ಇಲಾಖೆ ಶೀಘ್ರವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಮತ್ತು ನ್ಯಾಯಯುತ ತನಿಖೆಯನ್ನು ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಕೆಲವು ಕೊಳೆತ ಮನಸ್ಥಿತಿಗಳು ಶತಮಾನಗಳ ಶಾಂತಿಯನ್ನು ನಾಶಮಾಡಲು ಪ್ರಯತ್ನಿಸಿದ್ದು, ಶಾಂತಿ ಪ್ರಿಯ ಸಮಾಜವು ಇದನ್ನು ವಿಫಲಗೊಳಿಸಲು ಮುಂದಾಗಬೇಕು ಎಂದು ಅವರು ಕೋರಿದ್ದಾರೆ.

ಶಿವಮೊಗ್ಗದ ಜನತೆಯಲ್ಲಿ ಶಾಂತಿ ಹಾಗೂ ಕೊಮು ಸೌಹಾರ್ದತೆಯನ್ನು ಕಾಪಾಡುವಂತೆ ಮುಸ್ಲಿಂ ಮುತ್ತಹಿದ ಮಹಾಝ್ ಪರವಾಗಿ ಮೌಲಾನ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಶಾಫಿ ಅಹ್ಮದ್ ಸಾಹಿಬ್, ಸೈಯದ್ ಇಕ್ಬಾಲ್, ಉಸ್ಮಾನ್ ಶರೀಫ್, ಮೌಲಾನ ಝುಲ್ಫಿಖಾರ್ ನೂರಿ, ಮೌಲಾನ ವಹಿದುದ್ದೀನ್ ಖಾನ್ ಉಮ್ರಿ ಮದನಿ, ಮೌಲಾನ ಏಜಾಝ್ ಅಹ್ಮದ್ ನದ್ವಿ, ಹಾಫಿಝ್ ಮುಹೀಬುಲ್ಲಾ ಅಮೀನ್, ಅಬ್ದುಲ್ ಹಸೀಬ್, ಅಮೀನ್ ಮುದಸ್ಸರ್ ಹಾಗೂ ವಕೀಲ ಅಕ್ಮಲ್ ರಿಝ್ವಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News