×
Ad

ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಜೆಟ್‍ನಲ್ಲಿ ಅನುದಾನ ಕೊಡಿ: ಶಾಸಕ ಹರ್ಷವರ್ಧನ್ ಮನವಿ

Update: 2022-02-24 09:14 IST

ಬೆಂಗಳೂರು, ಫೆ. 23: ‘ನಂಜನಗೂಡು-ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಾಗೂ ಸಂಗಮದಲ್ಲಿ ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ತಲಾ 30ಕೋಟಿ ರೂ.ಗಳನ್ನು ಪ್ರಸಕ್ತ ಆಯವ್ಯಯದಲ್ಲಿ ಮಂಜೂರು ಮಾಡಬೇಕು' ಎಂದು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಮನವಿ ಮಾಡಿದ್ದಾರೆ.

‘ಕಾಡಂಚಿನ ಪ್ರದೇಶದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಂಜನಗೂಡು ತಾಲೂಕಿನ 12 ಮತ್ತು ಎಚ್.ಡಿ.ಕೋಟೆಯ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಇದರಿಂದ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಅಂದಾಜು 30ಕೋಟಿ ರೂ.ಯೋಜನೆ ಇದಾಗಿದೆ. ನುಗು ನದಿಯಿಂದ ನೀರೆತ್ತುವ ಯೋಜನೆ ಇದಾಗಿದ್ದು, ಹಣ ಬಿಡುಗಡೆಯಾದರೆ ಕೇವಲ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ' ಎಂದು ಅವರು ತಿಳಿಸಿದ್ದಾರೆ.

‘ಈ ಯೋಜನೆ ವಿ.ಶ್ರೀನಿವಾಸ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದ ವೇಳೆ ಮಂಜೂರಾಗಿದೆ. ಆದರೆ, ಹಣದ ಕೊರತೆಯಿಂದಾಗಿ ಜಾರಿಯಾಗಿಲ್ಲ. ಈಗ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಸಾಕಾರಗೊಳಿಸಬೇಕು. ಹಾಗೆಯೇ, ಸಂಗಮದಲ್ಲಿ ‘ಶ್ರೀ ಸದ್ಗುರು ಮಹದೇವ ತಾತಾರವರ ಗದ್ದುಗೆ’ ಹತ್ತಿರ ತಡೆಗೋಡೆ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಾಗಿ ಅಂದಾಜು 30 ಕೋಟಿ ರೂ.ಅನುದಾನವನ್ನು ಈ ಆಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆಗೊಳಿಸಬೇಕೆಂದು ಸಚಿವ ಗೋವಿಂದ ಕಾರಜೋಳರಿಗೆ, ಶಾಸಕ ಹರ್ಷವರ್ಧನ್ ಪತ್ರ ಬರೆದು ಕೋರಿದ್ದಾರೆ.

‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ‘ನುಗು ನದಿ'ಯು ಕೇರಳದ ಮಲಬಾರ್‍ನಲ್ಲಿ ಹುಟ್ಟಿ ಕರ್ನಾಟಕದ ಎಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲೂಕಿನಲ್ಲಿ ಉಗಮ ಸ್ಥಾನದಿಂದ ಒಟ್ಟು 130 ಕಿ.ಮೀನಷ್ಟು ಹರಿದು ನಂಜನಗೂಡು ಸಂಗಮ ಕ್ಷೇತ್ರದ ಬಳಿ ಕಬಿನಿ ನದಿಗೆ ಸೇರುತ್ತದೆ. ನುಗು ಜಲಾಶಯದ ಜಲಾನಯನ ಪ್ರದೇಶವು ನುಗು ಮೇಲ್ದಂಡೆ ನಾಲೆ ಇದ್ದು ಇದರ ಅಚ್ಚುಕಟ್ಟು 13 ಸಾವಿರ ಎಕರೆ ಪ್ರದೇಶವಿದೆ. ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಒತ್ತುವರಿಯಾಗಿದ್ದು ಪ್ರವಾಹದ ಸಂದರ್ಭದಲ್ಲಿ ಹಾನಿಯ ಪ್ರಮಾಣ ಜಾಸ್ತಿ. ಹೀಗಾಗಿ ತಡೆಗೋಡೆ ನಿರ್ಮಾಣ ಹಾಗೂ ಪುನಶ್ವೇತನ ಕಾಮಗಾರಿಗಾಗಿ 30 ಕೋಟಿ ರೂ.ಗಳನ್ನು ಆಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆ ಮಾಡಬೇಕು'

-ಬಿ.ಹರ್ಷವರ್ಧನ್ ನಂಜನಗೂಡು ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News