ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಬೆಂಗಳೂರಿನ ಕಾಲೇಜು
ಬೆಂಗಳೂರು: ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದ ವಿವಾದದ ಬೆನ್ನಲ್ಲೇ ಇದೀಗ ನಗರದ ಕಾಲೇಜೊಂದರಲ್ಲಿ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆದು ಬರಲು ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪೆ.10ರಂದು ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಪಾಲಿಸಬೇಕಾಗಿರುವುದರಿಂದ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ಅಮೃತಧಾರಿ ( ದೀಕ್ಷೆ ಪಡೆದ ) ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆದು ಬರುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಕಾಲೇಜು ನಮ್ಮ ಜೊತೆ ಯಾವುದೇ ರೀತಿ ತಾರತಮ್ಯ ಮಾಡಿಲ್ಲ ಎಂದು ಹೇಳಿರುವ ವಿದ್ಯಾರ್ಥಿನಿಯ ಪೋಷಕರು ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಹೈಕೋರ್ಟ್ ಹಾಗು ಸರಕಾರ ಜನರಿಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ವಿದ್ಯಾರ್ಥಿನಿಯು ಪೇಟ ತೊಟ್ಟಿರುವ ವಿಚಾರದಲ್ಲಿ ನಮಗೆ ಯಾವುದೇ ಸಮಸ್ಯೆಯಿಲ್ಲ. ಫೆ.16ರಂದು ಕಾಲೇಜು ಪುನರಾರಂಭವಾದಾಗ ಹೈಕೋರ್ಟ್ ಆದೇಶದ ಕುರಿತು ಎಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸಾಮಾನ್ಯ ಚಟುವಟಿಕೆಯಲ್ಲಿ ತೊಡಗಿದ್ದೆವು. ಮಂಗಳವಾರ ಡಿಡಿಪಿಯು (ಉತ್ತರ) ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಂಡು ಅವರನ್ನು ಕಚೇರಿಗೆ ಬರಲು ಹೇಳಿದರು ಮತ್ತು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದ್ದರು. ಆ ಬಳಿಕ ವಿದ್ಯಾರ್ಥಿನಿಯರು ಕಾಲೇಜಿನ ಇತರರಿಗೂ ತಮ್ಮ ಧಾರ್ಮಿಕ ಗುರುತುಗಳನ್ನು ಧರಿಸಲು ಅನುಮತಿಸಬಾರದು, ಆದ್ದರಿಂದ ಸಿಖ್ ವಿದ್ಯಾರ್ಥಿನಿಯೂ ಟರ್ಬನ್ ಧರಿಸಲು ಅವಕಾಶ ಬಿಡಬಾರದು ಎಂದು ಒತ್ತಾಯಿಸಿದರು. ಹಾಗಾಗಿ ನಾವು ವಿದ್ಯಾರ್ಥಿನಿಯ ತಂದೆಯೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದೇವೆ. ಆದೇಶದ ಬಗ್ಗೆ ಅವರಿಗೆ ತಿಳಿಸಿ ಅದನ್ನು ಪಾಲಿಸುವಂತೆ ತಿಳಿಸಿದ್ದೇವೆ ಎಂದು ಪಿಯು ಕಾಲೇಜಿನ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ನಾವು ಆಕೆಯನ್ನು ಹೊರಗೆ ಕಳಿಸಿಲ್ಲ . ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾಗಿದೆ ಎಂದಷ್ಟೇ ಹೇಳಿದ್ದೇವೆ. ಆಕೆಯ ತಂದೆಗೆ ಬರೆದ ಪತ್ರದಲ್ಲೂ ನಾವು ಕಾಲೇಜಿನಲ್ಲಿ ಸರ್ವಧರ್ಮ ಸಮನ್ವಯ ನೀತಿ ಅನುಸರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಕಾಲೇಜು ಹೇಳಿದೆ.
ಈ ಬಗ್ಗೆ ಪಿಯು ಇಲಾಖೆಯ ಉಪ ನಿರ್ದೇಶಕ ಜಿ ಶ್ರೀರಾಮ್ ಅವರಲ್ಲಿ ಕೇಳಿದಾಗ " ಹೈಕೋರ್ಟ್ ಟರ್ಬನ್ ಬಗ್ಗೆ ಏನೂ ಹೇಳಿಲ್ಲ. ನಾವೀಗ ಸುಮ್ಮನೆ ಹೊಸ ಹೊಸ ವಿಷಯ ಸೇರಿಸುತ್ತ ಹೋಗಬಾರದು. ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ನಾನು ಪ್ರಾಂಶುಪಾಲರಲ್ಲಿ ಮಾತಾಡಿದ್ದು ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ." ಎಂದು ಪ್ರತಿಕ್ರಿಯಿಸಿದರು.
ವಿದ್ಯಾರ್ಥಿನಿಯ ತಂದೆ ಗುರುಚರಣ್ ಸಿಂಗ್ ಅವರು ಕಾಲೇಜು ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ. ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಅವರು ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ನಾವು ನಮ್ಮ ಸಮುದಾಯದ ವಕೀಲರಲ್ಲಿ ಈ ಬಗ್ಗೆ ಮಾತಾಡಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಟರ್ಬನ್ ಬಗ್ಗೆ ಉಲ್ಲೇಖವಿಲ್ಲ ಎಂದು ಕಾಲೇಜಿಗೆ ತಿಳಿಸಿದ್ದೇವೆ. ಹಿರಿಯ ನ್ಯಾಯವಾದಿ ಎಚ್ ಎಸ್ ಪೂಲ್ಕ ಅವರಲ್ಲಿ ನಾವು ಸಲಹೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರಿನ ಸಿಖ್ ಧಾರ್ಮಿಕ ಕೇಂದ್ರಕ್ಕೂ ವಿದ್ಯಾರ್ಥಿನಿಯ ತಂದೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ಆದೇಶ ಟರ್ಬನ್ ಬಗ್ಗೆ ಏನೂ ಹೇಳಿಲ್ಲ ಎಂದು ನಾನು ಮಾಹಿತಿ ನೀಡಿದ್ದೇನೆ ಎಂದು ಎಚ್ ಎಸ್ ಪೂಲ್ಕ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಒಬ್ಬ ಸಿಖ್ ವಿದ್ಯಾರ್ಥಿಗೆ ಟರ್ಬನ್ ತೆಗೆಯುವಂತೆ ಹೇಳುವುದು ಇಡೀ ಸಿಖ್ ಸಮುದಾಯಕ್ಕೆ ಬಹಳ ದೊಡ್ಡ ಅವಮಾನವಾಗಿದೆ. ನಾವು ಆ ಶಿರವಸ್ತ್ರ ಕೇಳುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೂ ಬೆಂಬಲ ಸೂಚಿಸುತ್ತೇವೆ.ಸಮವಸ್ತ್ರದ ಬಣ್ಣದ ಶಿರವಸ್ತ್ರ ಧರಿಸಿದರೆ ಆಯಿತು. ಅದರಿಂದ ಯಾರಿಗೂ ಯಾವುದೇ ಸಮಸ್ಯೆಯಿಲ್ಲ. ಇದು ಈ ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಮುಂದುವರಿಯಲು ಬಿಡಬೇಕು ಎಂದು ಗುರುಚರಣ್ ಸಿಂಗ್ ಕಾಲೇಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.