×
Ad

ಆಸ್ಟರ್ ಆಸ್ಪತ್ರೆಯ ವೈದ್ಯರ ಪರಿಶ್ರಮ: ಆಶ್ಚರ್ಯಕರ ರೀತಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೋವಿಡ್‌ ಪೀಡಿತ ಮಹಿಳೆ

Update: 2022-02-24 19:49 IST

ಬೆಂಗಳೂರು: ಕೋವಿಡ್‌ ಪೀಡಿತರಾಗಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಆಸ್ಟರ್‌ ಆಸ್ಪತ್ರೆಯ ವೈದ್ಯರ ಕಠಿಣ ಪರಿಶ್ರಮದಿಂದ ಮಗುವಿಗೆ ಜನ್ಮ ನೀಡಿದ್ದಾರೆ.

ರೇಖಾ ರಮೇಶ್‌ಗೆ ತಾನು ಗರ್ಭಿಣಿ ಎಂದು ತಿಳಿದಾಗ ಆದ ಖುಷಿಗೆ ಪಾರವೇ ಇರಲಿಲ್ಲ. ತಾಯಿಯಾಗಲು ಸುಮಾರು ಒಂದು ದಶಕದ ನಿರಂತರ ಕಾಯುವಿಕೆಗೆ ಕೊನೆಗೂ ಫಲ ಕೂಡಿಬಂದಿತ್ತು. ಈ ನಡುವೆ IVF ಮೂಲಕ 10 ಕ್ಕೂ ಹೆಚ್ಚು ಬಾರಿ ಗರ್ಭಾಧಾರಣೆಗೆ ಪ್ರಯತ್ನಿಸಿದಾಗ್ಯೂ, ಪ್ರತಿ ಬಾರಿ ಗರ್ಭಾಪಾತವಾಗಿತ್ತು. ಕೊನೆಗೂ ಗರ್ಭಿಣಿ ಆದ ರೇಖಾ ರಮೇಶ್‌ ತನ್ನ ಗರ್ಭಾವಸ್ಥೆಯ ಅವಧಿಯಲ್ಲಿ ತನ್ನನ್ನು ಹಾಗೂ ತನ್ನ ಮಗುವನ್ನು ಅತ್ಯಂತ ಸುರಕ್ಷಿತವಾಗಿಡಲು ಜತನದಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದ್ದರು. 

ಆದರೆ, ಕೋವಿಡ್‌ ಎರಡನೇ ಅಲೆಯು ಅವರಿಗೆ ಹೊಸ ಸವಾಲುಗಳನ್ನು ನೀಡಿತು. ಗರ್ಭಿಣಿ ರೇಖಾ ಕೋವಿಡ್‌ ಸೋಂಕಿಗೆ ತುತ್ತಾದರು. ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಒಂದು ಹಂತಕ್ಕೆ, ಗರ್ಭಕ್ಕೆ ಅಪಾಯವನ್ನುಂಟು ಮಾಡುವಷ್ಟರ ಮಟ್ಟಿಗೆ ಕೋವಿಡ್‌ನಿಂದ ಅವರು ಬಳಲಿದರು. ತಕ್ಷಣವೇ ಅವರನ್ನು ಆಸ್ಟರ್‌ ಸಿಎಮ್‌ಐ (Aster CMI) ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಐಸಿಯುಗೆ ಸ್ಥಳಾಂತರಿಸಿ ತೀವ್ರ ನಿಗಾ ಇಡಲಾಯಿತು. 24 ವಾರಗಳ ಗರ್ಭಿಣಿಯಾಗಿದ್ದ ರೇಖಾಗೆ ತುರ್ತು ಸಿಸೇರಿಯನ್‌ ಮಾಡಬೇಕಾದಷ್ಟು ಪರಿಸ್ಥಿತಿ ಬಿಗಡಾಯಿಸಿತು. ಈ ಶಸ್ತ್ರಚಿಕಿತ್ಸೆಯ ಕುರಿತು ವಿವರಿಸಿದ ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಚೇತನ, ಸಿಸೇರಿಯನ್‌ ಸಂದರ್ಭದಲ್ಲಿ ಎದುರಾದ ಸವಾಲುಗಳ ಕುರಿತು ಮಾಹಿತಿ ನೀಡಿದ್ದಾರೆ. 

“ಶ್ರೀಮತಿ ರೇಖಾ ರಮೇಶ್ ಅವರು ಆಸ್ಪತ್ರೆಗೆ ದಾಖಲಾದಾಗ, ಕೋವಿಡ್ ಸೋಂಕಿನಿಂದ ಅವರ ಆರೋಗ್ಯವು ತೀವ್ರ ಹದಗೆಟ್ಟಿತ್ತು. ನಾವು ಅವರನ್ನು ಐಸಿಯುಗೆ ಸೇರಿಸಿದೆವು. ಅರಿವಳಿಕೆ ತಜ್ಞರು ಮತ್ತು ನವಜಾತ ಶಿಶು ಶಾಸ್ತ್ರಜ್ಞರೊಂದಿಗೆ ನಡೆಸಿದ ದೀರ್ಘ ಸಮಾಲೋಚನೆಯ ನಂತರ, ನಾವು ತುರ್ತು ಸಿಸೇರಿಯನ್ ಮಾಡಲು ನಿರ್ಧರಿಸಿದೆವು.  ಸೋಂಕಿನಿಂದ ಆಕೆಯ ಶ್ವಾಸಕೋಶಗಳು ಹಾನಿಗೊಳಗಾಗಿದ್ದರಿಂದ ನಾವು ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಬೇಕಾಯಿತು. ತಕ್ಷಣವೇ ಸಿಸೇರಿಯನ್ ಹೆರಿಗೆ ಮಾಡಿಸಿದೆವು. ನಾವು ಆಕೆಯನ್ನು ದೀರ್ಘಕಾಲದವರೆಗೆ ಅರಿವಳಿಕೆಗೆ ಒಡ್ಡಲು ಸಾಧ್ಯವಾಗದ ಕಾರಣ ಇದನ್ನು ವೇಗವಾಗಿ ನಿರ್ವಹಿಸಬೇಕಾಗಿತ್ತು, ಆಕೆಯನ್ನು ಒರಗಿ ಕುಳಿತುಕೊಳ್ಳುವ ಭಂಗಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕೋವಿಡ್ ಐಸಿಯು ತಂಡದ ಸಹಯೋಗದೊಂದಿಗೆ ನಾವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಬಳಿಕ ಹೆಚ್ಚಿನ ವೀಕ್ಷಣೆಗಾಗಿ ಆಕೆಯನ್ನು ಐಸಿಯುನಲ್ಲಿ ಇರಿಸಿದೆವು. ಆಕೆ ಸುಮಾರು 500 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ” ಎಂದು ಡಾ. ಚೇತನಾ ತಿಳಿಸಿದ್ದಾರೆ. 

ಮಗುವಿನ ಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಆಸ್ಟರ್ ಸಿಎಂಐ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್‌ನ ಸಲಹೆಗಾರ ಡಾ. ಸುಧೀರ್ ಕೆ ಎ, "ಗರ್ಭಧಾರಣೆಯ 37 ವಾರಗಳ ಮೊದಲು ಜನಿಸಿದ ಶಿಶುಗಳನ್ನು ʼಪೂರ್ವಭಾವಿʼ ಅಥವಾ ʼಅಕಾಲಿಕʼ ಎಂದು ಕರೆಯಲಾಗುತ್ತದೆ. ಗರ್ಭಧಾರಣೆಯ 28 ವಾರಗಳ ಮೊದಲು ಜನಿಸಿದ ಶಿಶುಗಳನ್ನು ʼಅತ್ಯಂತ ಪ್ರಸವಪೂರ್ವʼ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ತಾಯಿ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ಗರ್ಭಧಾರಣೆಯ 24 ವಾರಗಳ ಅವಧಿಯಲ್ಲಿ ಹೆರಿಗೆಯನ್ನು ಮಾಡಲಾಯಿತು. ಆದಾಗ್ಯೂ, Aster CMI ನಲ್ಲಿನ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಬೆಂಬಲದೊಂದಿಗೆ ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಲಾಯಿತು”

“ಅತ್ಯಂತ ಅವಧಿ ಪೂರ್ವ ಹೆರಿಗೆ ಆಗಿದ್ದರಿಂದ ಶಿಶುವಿನ ಪರಿಸ್ಥಿತಿ ಗಂಭೀರವಾಗಿತ್ತು. ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಇಟ್ಟು ಪರಿಶೀಲಿಸಲಾಯಿತು.  ಫೀಡಿಂಗ್‌ಗೆ ಒಗ್ಗಿಕೊಳ್ಳದ ಸಮಸ್ಯೆಯಿತ್ತು. ಉಸಿರಾಟದ ಸಮಸ್ಯೆಗೆ ವೆಂಟಿಲೇಟರ್‌ ಬೆಂಬಲ ಪಡೆಯಲಾಯಿತು. ಎರಡೂ ಕಣ್ಣುಗಳು ಪ್ರಿಮೆಚ್ಯೂರಿಟಿಯ ರೆಟಿನೋಪತಿಯಿಂದ ಸಮಸ್ಯೆಯಾಗಿತ್ತು, ಇದಕ್ಕಾಗಿ NICU ನಲ್ಲಿ ಲೇಸರ್ ಚಿಕಿತ್ಸೆಯನ್ನು ನಡೆಸಲಾಯಿತು. ಶುಶ್ರೂಷಾ ತಂಡದ ಅತ್ಯುತ್ತಮ ಪ್ರಯತ್ನಗಳು ಮತ್ತು ಅನುಭವಿ ನಿಯೋನಾಟಾಲಜಿಸ್ಟ್‌ಗಳ ಮೇಲ್ವಿಚಾರಣೆಯೊಂದಿಗೆ, ಮಗು ಚಿಕಿತ್ಸೆ ಮತ್ತು ಆರೈಕೆಗೆ ಉತ್ತಮವಾಗಿ ಪ್ರತಿಕ್ರಿಯಿಸಿತು. NICU ನಲ್ಲಿ 100 ದಿನಗಳ ನಿರಂತರ ಮೇಲ್ವಿಚಾರಣೆಯ ನಂತರ, ಮಗುವಿನ ಸ್ಥಿತಿ ಸುಧಾರಿಸಿತು. ಬಳಿಕ ಎದೆಹಾಲು ನೀಡುವುದರೊಂದಿಗೆ ಮಗುವಿನ ತೂಕ ಸಾಕಷ್ಟು ಹೆಚ್ಚಿತು. ಈಗ ಸ್ಥಿರ ಆರೋಗ್ಯ ಸ್ಥಿತಿಗೆ ಮಗು ತಲುಪಿದ್ದು ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
 
ತಮ್ಮ ನಿರಂತರ ಪ್ರಯತ್ನದಿಂದಾಗಿ ತನ್ನನ್ನೂ, ತನ್ನ ಮಗುವನ್ನು ಉಳಿಸಿದ ವೈದ್ಯರ ತಂಡಕ್ಕೆ ರೇಖಾ ರಮೇಶ್‌ ಧನ್ಯವಾದ ತಿಳಿಸಿದ್ದಾರೆ. 

ನನಗೆ ತಾಯಿ ಆಗಬೇಕೆಂಬ ಬಯಕೆ ಕಳೆದ 10 ವರ್ಷಗಳಿಂದ ಇತ್ತು. ಕೊನೆಗೂ ಗರ್ಭಿಣಿ ಆದಾಗ ಕೋವಿಡ್‌ ಎರಡನೇ ಅಲೆಯಲ್ಲಿ ನಾನು ಸೋಂಕಿಗೆ ತುತ್ತಾದೆ. ಸೋಂಕು ನನ್ನನ್ನು ಆರೋಗ್ಯ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿತು. ಅವಧಿಗೂ ಮುನ್ನವೇ ಸಿಸೇರಿಯನ್‌ ಮಾಡಬೇಕಾದ ಕಠಿಣ ಪರಿಸ್ಥಿತಿಗೆ ನನ್ನನ್ನು ತಳ್ಳಿತು. ನನ್ನ ಮಗಳು ಜನಿಸಿದಾಗ ಕೇವಲ 500 ಗ್ರಾಂ ತೂಕ ಹೊಂದಿದ್ದಳು. ಈಗ ಅವಳಿಗೆ 3.5 ತಿಂಗಳು ಆಗಿದೆ. ಅವಳ ತೂಕ 1 ಕೆಜಿಯಷ್ಟು ಆಗಿದೆ. ನನ್ನ ಅತ್ಯಂತ ಕಷ್ಟಕರ ಪ್ರಸವವನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರಿಗೆ,  ಮತ್ತು ನನ್ನ ಮಗುವಿನ ಆರೈಕೆ ಮಾಡಿದ ದಾದಿಯರಿಗೆ ಹಾಗೂ ಆಸ್ಟರ್‌ ಸಿಎಮ್‌ಐಯ ಇತರೆ ಸಿಬ್ಬಂದಿಗೆ ನಾನು ಅಭಾರಿಯಾಗಿದ್ದೇನೆ ಎಂದು ರೇಖಾ ತಿಳಿಸಿದ್ದಾರೆ.

(ಮಗು ಮತ್ತು ಪತಿಯೊಂದಿಗೆ ರೇಖಾ ರಮೇಶ್‌)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News