ಪುನೀತ್ ನಡವಳಿಕೆ ಯುವ ಸಮುದಾಯಕ್ಕೆ ಮಾದರಿ: ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಫೆ.24: ಚಿತ್ರನಟರ ಸಾಮಾಜಿಕ ನಡವಳಿಕೆಯು ಯುವ ಸಮುದಾಯಕ್ಕೆ ಮಾದರಿಯಾಗಿರಬೇಕು. ಪುನೀತ್ ರಾಜಕುಮಾರ್ ಈ ನಿಟ್ಟಿನಲ್ಲಿಯೇ ಅನ್ಯರಿಗೆ ಮಾದರಿಯಾಗುವಂತೆ ಜೀವನ ಸಾಗಿಸಿದವರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡದ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ಏರ್ಪಡಿಸಿದ್ದ ಅಮರಶ್ರೀ ಅಪ್ಪು ಕೃತಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಾವಿದರಿಂದ ಪ್ರೇಕ್ಷಕರು ಅಭಿನಯ, ಸಂದೇಶ, ಮನೋವಿಕಾಸ ಪಾತ್ರಗಳನ್ನು ನಿರೀಕ್ಷಿಸುತ್ತೇವೆ. ಸಮಾಜಮುಖಿ ಕೆಲಸವು ಒಬ್ಬ ಕಲಾವಿದ ಮಾಡುವ ಹೆಚ್ಚುವರಿ ಕೆಲಸವಾಗಿದೆ. ಇದು ಸಮಾಜಕ್ಕೆ ಮಾದರಿಯಾಗುತ್ತದೆ. ರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ರಾಜ್ ಕುಟುಂಬ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕೃತಿಯ ಸಂಪಾದಕ ವಿನಯ್ ರಾಮೇಗೌಡ ಪುನೀತ್ ಕುರಿತು ಅಪೂರ್ವ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಕೃತಿ ಶೀರ್ಷಿಕೆಯು ಅರ್ಥಪೂರ್ಣವಾಗಿದೆ. ಎರಡನೆಯ ಮುದ್ರಣದಲ್ಲಿ ಇನ್ನು ವಿಸ್ಕøತವಾಗಿರಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ನಟ, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಕನ್ನಡ ಜನಶಕ್ತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.