×
Ad

ಕೊರೋನ ಯುದ್ಧದ ಸಂಕಟಗಳಿಂದ ಪಾಠ ಕಲಿಯದ ಜಗತ್ತು

Update: 2022-02-25 00:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎರಡು ಮಹಾಯುದ್ಧಗಳು ಈ ವಿಶ್ವವನ್ನು ಯಾವ ದಿಕ್ಕಿಗೆ ಕೊಂಡೊಯ್ಯಿತು ಎನ್ನುವುದನ್ನು ನಾವು ಕಂಡಿದ್ದೇವೆ. ಇನ್ನೂ ಹಸಿರು ಚಿಗುರೊಡೆಯದ ಹಿರೋಶಿಮಾ ಮತ್ತು ನಾಗಸಾಕಿ ಯುದ್ಧದ ಅಂತಿಮ ಪರಿಣಾಮಗಳನ್ನು ಮನುಕುಲಕ್ಕೆ ನೆನಪಿಸುತ್ತಲೇ ಇವೆೆ. ಇದೇ ಸಂದರ್ಭದಲ್ಲಿ ಭಯೋತ್ಪಾದನೆ ಮಟ್ಟ ಹಾಕುವ ನೆಪದಲ್ಲಿ ಅಮೆರಿಕವು ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಸಿಕೊಂಡು ಬರುತ್ತಿರುವ ಯುದ್ಧ ಆ ನೆಲವನ್ನು ನರಕವಾಗಿಸಿದೆ. ಲಕ್ಷಾಂತರ ಜನರು ಹಸಿವು, ಅನಕ್ಷರತೆಯಿಂದ ನರಳುತ್ತಿದ್ದಾರೆ. ಮೂರನೆಯ ಮಹಾಯುದ್ಧ ಮುಗಿದ ಬಳಿಕ ನಾಲ್ಕನೆಯ ಮಹಾಯುದ್ಧವನ್ನು ಮನುಷ್ಯರು ಶಿಲೆಗಳನ್ನು ಆಯುಧಗಳಾಗಿ ಬಳಸಿ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಈಗಾಗಲೇ ಚಿಂತಕರು ನೀಡಿದ್ದಾರೆ. ಅಂದರೆ ಮೂರನೆ ಮಹಾಯುದ್ಧ ವಿಶ್ವವನ್ನು ಸಂಪೂರ್ಣ ಸರ್ವನಾಶದೆಡೆಗೆ ಒಯ್ಯುತ್ತದೆ ಎನ್ನುವುದೇ ಅವರ ಆತಂಕ. ಹಾಗೆ ನೋಡಿದರೆ ವಿಶ್ವ ಈಗಾಗಲೇ ಮೂರನೇ ಮಹಾಯುದ್ಧವನ್ನು ಮುಗಿಸಿ ತತ್ತರಿಸಿ ಕೂತಿದೆ. ಹೌದು, ಕೊರೋನ ಮತ್ತು ಲಾಕ್‌ಡೌನ್ ವಿಶ್ವದ ಪಾಲಿಗೆ ಇನ್ನೊಂದು ಯುದ್ಧವೇ ಆಗಿತ್ತು. ಯುದ್ಧದಿಂದ ಸಂಭವಿಸುವಷ್ಟೇ ಸಾವುಗಳು ಇಲ್ಲೂ ಸಂಭವಿಸಿವೆ. ಹಾಗೆಯೇ ಒಂದು ಯುದ್ಧದಿಂದ ಏನೆಲ್ಲ ಆರ್ಥಿಕ ದುಷ್ಪರಿಣಾಮಗಳಾಗಬಹುದೋ ಅದಕ್ಕಿಂತಲೂ ಹೆಚ್ಚಿನ ಆರ್ಥಿಕ ದುಷ್ಪರಿಣಾಮ ಕೊರೋನ ಮತ್ತು ಲಾಕ್‌ಡೌನ್‌ನಿಂದ ಆಗಿದೆ. ಹಲವು ಮುಂದುವರಿದ ರಾಷ್ಟ್ರಗಳು ಏಕಾಏಕಿ ಬಡ ರಾಷ್ಟ್ರಗಳಾಗಿ ಬದಲಾಗಿವೆ. ರಾಷ್ಟ್ರಗಳ ಮೇಲಿನ ಸಾಲಗಳು ಹೆಚ್ಚಿವೆ. ಬಡತನ, ಹಣದುಬ್ಬರ ಕೂಡ ಅಧಿಕವಾಗಿವೆ. ಲಕ್ಷಾಂತರ ಬಡವರು ಹಸಿವಿನಿಂದ ಸತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಆರೋಗ್ಯ ವ್ಯವಸ್ಥೆ ಅಸ್ತವ್ಯಸ್ತವಾಗಿವೆ. ಈಗಾಗಲೇ ಸರ್ವನಾಶವಾಗಿರುವುದನ್ನು ಸರಿಪಡಿಸುವುದಕ್ಕೆ ಕನಿಷ್ಠ ಕಾಲು ಶತಮಾನವಾದರೂ ಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ ವಿಶ್ವ ಇನ್ನೊಂದು ಯುದ್ಧದ ಬಗ್ಗೆ ಆಸಕ್ತವಾಗಿರುವುದು ಮನುಕುಲದ ಪಾಲಿನ ದುರಂತವೇ ಸರಿ. ಕೊರೋನದಿಂದ ನಾವು ಪಾಠ ಕಲಿತಿಲ್ಲ ಎನ್ನುವುದನ್ನು ಈ ಮೂಲಕ ಸ್ಪಷ್ಟವಾಗಿ ಘೋಷಿಸಿಕೊಂಡಂತಾಗಿದೆ.

ಕೊನೆಗೂ ರಶ್ಯ ಉಕ್ರೇನ್ ಮೇಲೆ ಎರಗಿಯೇ ಬಿಟ್ಟಿದೆ. ಈ ಯುದ್ಧಕ್ಕೆ ರಶ್ಯದ ಅಧ್ಯಕ್ಷರ ಪ್ರತಿಷ್ಠೆ ಎಷ್ಟು ಕಾರಣವೋ, ಅಮೆರಿಕದಂತಹ ದೇಶಗಳು ಉಕ್ರೇನ್‌ನಲ್ಲಿ ನಡೆಸುತ್ತಾ ಬಂದಿರುವ ಹಸ್ತಕ್ಷೇಪವೂ ಅಷ್ಟೇ ಕಾರಣ. ಆದರೆ ಕೊರೋನದ ಈ ಸಂಕಟದ ಕಾಲದಲ್ಲಿ ಕಾಪಾಡಿಕೊಳ್ಳಬೇಕಾದ ಸಂಯಮವನ್ನು ರಶ್ಯ ಕಳೆದು ಕೊಂಡಿರುವುದು ಬೇಜವಾಬ್ದಾರಿ ಮತ್ತು ಮೂರ್ಖತನದ ಪರಮಾವಧಿ. ಹಾಗೆ ನೋಡಿದರೆ ಒಂದು ಕಾಲದಲ್ಲಿ ಉಕ್ರೇನ್ ಸೋವಿಯತ್ ರಶ್ಯದ ಜೊತೆಗೆ ಕರುಳಸಂಬಂಧವನ್ನು ಹೊಂದಿತ್ತು. ಅಲ್ಲಿಂದ ಬೇರೆಯಾಗಿಯೂ ಉಕ್ರೇನ್ ರಶ್ಯದ ಜೊತೆಗಿನ ಸಂಬಂಧವನ್ನು ಕಳಚಿಕೊಂಡಿರಲಿಲ್ಲ. ರಷ್ಯನ್ ಮಾತನಾಡುವ ದೊಡ್ಡ ಸಂಖ್ಯೆಯ ಜನರು ಉಕ್ರೇನ್‌ನಲ್ಲಿದ್ದಾರೆ. ಸಾಮಾಜಿಕ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳೂ ಉಭಯ ದೇಶಗಳ ನಡುವೆ ಇದ್ದವು. ಉಕ್ರೇನ್‌ನ ಮೇಲೆ ತನ್ನ ಯಂತ್ರಣವನ್ನು ರಶ್ಯ ಸದಾ ಬಯಸುತ್ತಿತ್ತು. 2014ರ ಆಕ್ರಮಣದ ಬಳಿಕ ಉಕ್ರೇನ್ ಸರಕಾರ ರಶ್ಯದೊಂದಿಗೆ ತೀವ್ರ ಭಿನ್ನಾಭಿಪ್ರಾಯವನ್ನು ತಳೆಯಿತು. ಇದರಿಂದ ಸೃಷ್ಟಿಯಾದ ಅಭದ್ರತೆ ಅಮೆರಿಕ, ಯುರೋಪಿಯನ್ ಒಕ್ಕೂಟದ ಜೊತೆಗೆ ಹೆಚ್ಚು ಹತ್ತಿರವಾಗುವಂತೆ ಮಾಡಿತು. ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕ ಕೂಡ ಇದನ್ನು ತಮ್ಮ ಮಹತ್ವಾಕಾಂಕ್ಷೆಗೆ ಮತ್ತು ರಶ್ಯದ ಜೊತೆಗಿರುವ ಭಿನ್ನಾಭಿಪ್ರಾಯಕ್ಕೆ ಪೂರಕವಾಗಿ ಬಳಸಿಕೊಳ್ಳಲು ಯತ್ನಿಸಿತು. ಯಾವಾಗ ಉಕ್ರೇನ್‌ನ್ನು ನ್ಯಾಟೋ ಜೊತೆಗೆ ಸೇರಿಸಲು ಅವುಗಳು ಪ್ರಯತ್ನಿಸಿದವೋ ಆಗ, ರಶ್ಯ ನೇರವಾಗಿ ಕಾರ್ಯಾಚರಣೆಗೆ ಇಳಿಯಿತು. ಮತ್ತು ಅದು ಈಗ ಯುದ್ಧದ ಮಟ್ಟಕ್ಕೆ ಬಂದು ತಲುಪಿದೆ. ಇಲ್ಲಿ ಈ ಯುದ್ಧ ಉಕ್ರೇನ್-ರಶ್ಯದ ನಡುವಿನದ್ದಾಗಿದ್ದರೆ ಜಗತ್ತು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಇದನ್ನು ಯುದ್ಧ ಎನ್ನುವುದಕ್ಕಿಂತ ರಶ್ಯದ ದಬ್ಬಾಳಿಕೆ ಎಂದು ಕರೆಯುವುದೇ ಲೇಸು. ಇದೊಂದು ರೀತಿಯಲ್ಲಿ ಏಕಮುಖ ದಾಳಿ. ಆದರೆ ಉಕ್ರೇನ್ ಪರವಾಗಿ ನಿಂತಿರುವ ನ್ಯಾಟೋ ಪಡೆಗಳಿಂದಾಗಿ ಈ ಯುದ್ಧ ಮಹಾಯುದ್ಧವಾಗಿ ಬದಲಾಗುವ ಸಾಧ್ಯತೆಗಳಿವೆ.

ಈ ಯುದ್ಧ ಮೊತ್ತ ಮೊದಲು ರಶ್ಯದ ಮೇಲೆಯೇ ತೀವ್ರ ಪರಿಣಾಮವನ್ನು ಬೀರಲಿದೆ. ಜಾಗತಿಕ ದಿಗ್ಬಂಧನಗಳಿಂದಾಗಿ ರಶ್ಯದೊಳಗಿರುವ ಆರ್ಥಿಕ ಅರಾಜಕತೆ ಇನ್ನಷ್ಟು ಹೆಚ್ಚಲಿದೆ. ಹಾಗೆಯೇ ಇದು ಭಾರತದಂತಹ ದೇಶಗಳೂ ಯುದ್ಧದ ನಷ್ಟಗಳಲ್ಲಿ ಪಾಲುದಾರರು ಎನ್ನುವ ಎಚ್ಚರಿಕೆ ನಮಗಿರಬೇಕಾಗಿದೆ. ಲಾಕ್‌ಡೌನ್‌ನಿಂದಾಗಿ ತತ್ತರಿಸಿ ಕೂತಿರುವ ಭಾರತಕ್ಕೆ ಈ ಯುದ್ಧ ಹಲವು ನೆಲೆಗಳಲ್ಲಿ ಹಾನಿ ಮಾಡಲಿದೆ. ಶೇ. 80ರಷ್ಟು ಕಚ್ಚಾ ತೈಲಕ್ಕಾಗಿ ವಿದೇಶವನ್ನೇ ನೆಚ್ಚಿಕೊಂಡಿರುವ ಭಾರತಕ್ಕೆ ಮೊದಲ ಆಘಾತ ಪೆಟ್ಟು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ಮೂಲಕ ಎರಗಲಿದೆ. ಈಗಾಗಲೇ ತೈಲ ಬೆಲೆ ಹೆಚ್ಚಳವನ್ನು ಅತ್ಯಂತ ಕಷ್ಟದಿಂದ ನಿಭಾಯಿಸುತ್ತಿರುವ ಸರಕಾರಕ್ಕೆ ಈ ಯುದ್ಧ ಬಹುದೊಡ್ಡ ಸವಾಲಾಗಿದೆ. ಅಡುಗೆ ತೈಲದ ಮೇಲೂ ಇದು ತೀವ್ರ ಪರಿಣಾಮಗಳನ್ನು ಉಂಟು ಮಾಡಲಿದೆ. ಯುದ್ಧ ಘೋಷಣೆಯಾದ ಬೆನ್ನಿಗೇ ಶೇರು ಪೇಟೆಯಲ್ಲಿ ರಕ್ತಪಾತ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಘೋರ ಸ್ಥಿತಿಯನ್ನು ತಲುಪುವ ಸಾಧ್ಯತೆಯಿದೆ.
 
ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತಕ್ಕೊಂದು ಸ್ಪಷ್ಟ ವಿದೇಶಾಂಗ ನೀತಿಯೇ ಇಲ್ಲವಾಗಿದೆ. ವಿದೇಶಾಂಗ ಸಚಿವರು ಮಾಡಬೇಕಾದ ಪ್ರವಾಸವನ್ನೆಲ್ಲ ಮೋದಿಯವರೇ ಮಾಡಿ ಮುಗಿಸಿದರು. ಪಾಕಿಸ್ತಾನವು ಅಮೆರಿಕದ ಜೊತೆಗೆ ಆಸಕ್ತಿ ಕಳೆದುಕೊಳ್ಳುತ್ತಿರುವಂತೆಯೇ ಭಾರತ ಆತುರಾತುರವಾಗಿ ಅಮೆರಿಕದ ಜೀತಕ್ಕೆ ಹಂಬಲಿಸಿತು. ‘ನಮಸ್ತೆ ಟ್ರಂಪ್’ ಮೊದಲಾದ ಹಾಸ್ಯಾಸ್ಪದ ಕಾರ್ಯಕ್ರಮಗಳ ಮೂಲಕ ಅಮೆರಿಕವೆಂದರೆ ಟ್ರಂಪ್ ಎಂದು ಬಾವಿಸಿ ಮಾತುಕತೆಗಳನ್ನು ಕುದುರಿಸಲು ಪ್ರಯತ್ನಿಸಿತು. ಅಮೆರಿಕ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಪರವಾಗಿ ಚುನಾವಣಾ ಪ್ರಚಾರ ಮಾಡಿ, ಭಾರತದ ಪ್ರಧಾನಿ ಹುದ್ದೆಯ ಘನತೆಯನ್ನು ಮೋದಿ ಕಳೆದರು. ಮುಂದೆ ಬೈಡನ್ ಅಧ್ಯಕ್ಷರಾದರು. ಭಾರತ ಮುಜುಗರ ಅನುಭವಿಸಬೇಕಾಯಿತು. ಇಂದು ಭಾರತವನ್ನು ಅಮೆರಿಕ ಮತ್ತು ರಶ್ಯ ಎರಡೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಒಂದೆಡೆ ಅಮೆರಿಕ ಬೆಂಬಲಕ್ಕಾಗಿ ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ‘ಇದ್ದಲ್ಲೇ ಮರ್ಯಾದೆಯಲ್ಲಿದ್ದರೆ ಒಳಿತು’ ಎಂದು ರಶ್ಯ ಪರೋಕ್ಷವಾಗಿ ಸೂಚನೆಗಳನ್ನು ನೀಡುತ್ತಿದೆ. ಅತ್ತ ಧರಿ-ಇತ್ತ ಪುಲಿ ಎನ್ನುವ ಸ್ಥಿತಿ ಭಾರತದ್ದು. ಒಂದು ವೇಳೆ ಅಮೆರಿಕದ ಪರವಾಗಿ ಮಾತನಾಡಿದರೆ, ಅದನ್ನು ನೆರೆಯ ಚೀನಾ ತನಗೆ ಪೂರಕವಾಗಿ ಬಳಸಿಕೊಳ್ಳಬಹುದು. ಪಾಕಿಸ್ತಾನ ಕೂಡ ಚೀನಾ ಮತ್ತು ರಶ್ಯದ ಜೊತೆಗೆ ಮೃದು ನಿಲುವನ್ನು ತಳೆದಿದೆ. ಪ್ರಧಾನಿ ಮೋದಿಯ ಅತಿ ವಾಚಾಳಿತನವೇ ಇಂದು ಭಾರತಕ್ಕೆ ಹತ್ತು ಹಲವು ಸಮಸ್ಯೆಗಳನ್ನು ತಂದೊಡ್ಡಿದೆ.

ಸದ್ಯಕ್ಕೆ ಪ್ರಧಾನಿ ಮೋದಿಯವರು ಬಾಯಿ ಮುಚ್ಚಿ ಕುಳಿತುಕೊಳ್ಳುವುದೇ ಭಾರತಕ್ಕೆ ಮಾಡಬಹುದಾದ ಅತಿ ದೊಡ್ಡ ಉಪಕಾರ. ಉಕ್ರೇನ್‌ನಲ್ಲಿರುವ ಸಾವಿರಾರು ಭಾರತೀಯರಿಗೆ ಸಹಾಯ ಹಸ್ತ ನೀಡಲು ಭಾರತ ಕೊನೆಗೂ ವಿಫಲವಾಗಿದೆ. ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ ‘‘ನಮ್ಮನ್ನು ಕೇಳುವವರೇ ಇಲ್ಲ’ ಎಂದು ಮಾಧ್ಯಮಗಳ ಜೊತೆಗೆ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಯುದ್ಧ ಘೋಷಣೆಯಾದ ಬಳಿಕ ಸರಕಾರ ಎಚ್ಚೆತ್ತುಕೊಂಡಿದೆ. ಇದು ನಿಜಕ್ಕೂ ಭಾರತದ ಪಾಲಿಗೆ ಅವಮಾನಕಾರಿ. ಯುದ್ಧದಿಂದ ಒಬ್ಬನೇ ಒಬ್ಬ ಭಾರತೀಯ ವಿದ್ಯಾರ್ಥಿ ಸತ್ತರೂ ಅದಕ್ಕೆ ಕೇಂದ್ರ ಸರಕಾರ ಹೊಣೆಯಾಗಬೇಕಾಗುತ್ತದೆ. ಕುವೈಟ್‌ನ ಮೇಲೆ ದಾಳಿ ಮಾಡಿದ ಸದ್ದಾಮನ್ನು ಪುಟಿನ್ ಹೋಲುತ್ತಿದ್ದಾರೆ. ಆದರೆ ಸದ್ದಾಂ ಸೀಮಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ಆದುದರಿಂದ ಪುಟಿನ್ ಸದ್ದಾಂಗಿಂತಲೂ ಅಪಾಯಕಾರಿಯಾಗಬಲ್ಲರು. ನ್ಯಾಟೋ ಪಡೆಗಳು ಗರಿಷ್ಠ ಸಂಯಮವನ್ನು ಕಾಪಾಡಬೇಕಾಗಿದೆ. ಇಲ್ಲವಾದರೆ, ನಿಧಾನಕ್ಕೆ ಈ ಯುದ್ಧವೇ ಮೂರನೇ ಮಹಾಯುದ್ಧವಾಗಿ ಪರಿವರ್ತನೆ ಹೊಂದಬಹುದು. ಈ ಯುದ್ಧದಲ್ಲಿ ಯಾರು ಗೆದ್ದರೂ, ಭಾರತದ ಮೇಲೆ ಅದರ ದುಷ್ಪರಿಣಾಮ ಇದ್ದೇ ಇದೆ. ಆದುದರಿಂದಲೇ, ಯುದ್ಧ ಬೇಡ ಎನ್ನುವುದು ಭಾರತೀಯರ ಒಕ್ಕೊರಲ ಆಗ್ರಹವಾಗಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News