×
Ad

ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ 91 ವಿದ್ಯಾರ್ಥಿಗಳು

Update: 2022-02-25 10:24 IST

ಬೆಂಗಳೂರು, ಫೆ.25: ಉಕ್ರೇನ್ ವಿರುದ್ಧ ರಶ್ಯ ಯುದ್ಧ ಘೋಷಿಸಿರುವುದರಿಂದ ಅಲ್ಲಿ ಕರ್ನಾಟಕದ 91 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ನೀಡಿದೆ. ಈ ನಡುವೆ ಉಕ್ರೇನ್‍ನಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್‍.ಜೈಶಂಕರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಕೇಂದ್ರ ವಿದೇಶಾಂಗ ಸಚಿವರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಭಾರತೀಯರ ವಾಪಸಾತಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಭೂ ಸಾರಿಗೆ ಮೂಲಕ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಉಕ್ರೇನ್ ನ  ಪಶ್ಚಿಮ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಬಹುದಾಗಿದೆ ಎಂಬ ಮಾಹಿತಿಯಿದ್ದು, ಭಾರತೀಯ ರಾಯಭಾರಿ ಕಚೇರಿಯೂ ಎಲ್ಲ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಊಟೋಪಚಾರದ ವ್ಯವಸ್ಥೆಗೂ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಲು ವಿದೇಶಾಂಗ ಸಚಿವರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

 ಸಹಾಯವಾಣಿ ಆರಂಭ

ಉಕ್ರೇನ್‌ನಲ್ಲಿ ಸಿಲುಕಿರುವ ನಮ್ಮ ಜನರ ಸುರಕ್ಷಿತ ಸ್ಥಳಾಂತರ  ಮತ್ತು ಸುಗಮವಾಗಿ ಮನೆಗೆ ವಾಪಸ್ಸಾಗಲು ಅನುಕೂಲವಾಗುವಂತೆ ರಾಜ್ಯ ಸರಕಾರವು ಉಚಿತ ಸಹಾಯವಾಣಿ 080-22340676 ಅನ್ನು  ಆರಂಭಿಸಿದೆ.  ಅಲ್ಲದೆ ತನ್ನ ಕಚೇರಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಉಕ್ರೇನ್‌ನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ 91 ವಿದ್ಯಾರ್ಥಿಗಳು:
ರಾಜ್ಯದ ಸುಮಾರು 91 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಬೆಂಗಳೂರು 28, ಮೈಸೂರು 10, ಹಾಸನ 6, ಬಳ್ಳಾರಿ 5, ಬಾಗಲಕೋಟೆ 4, ಚಾಮರಾಜನಗರದ 4 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನ ತಲಾ 3 ಸ್ಟೂಡೆಂಟ್ಸ್ ದಕ್ಷಿಣ ಕನ್ನಡ, ಹಾವೇರಿ, ಕೊಡಗಿನ ತಲಾ 3 ವಿದ್ಯಾರ್ಥಿಗಳು ರಾಯಚೂರು, ಚಿತ್ರದುರ್ಗ, ದಾವಣಗೆರೆಯ ತಲಾ ಇಬ್ಬರು, ಧಾರವಾಡ, ಮಂಡ್ಯ, ಉಡುಪಿಯ ತಲಾ ಇಬ್ಬರು, ವಿಜಯಪುರದ ಇಬ್ಬರು ವಿದ್ಯಾರ್ಥಿಗಳು, ಕೋಲಾರದ ಒಬ್ಬರು, ಶಿವಮೊಗ್ಗ, ಉತ್ತರ ಕನ್ನಡದ ತಲಾ ಒಬ್ಬ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News