ಬೆಂಗಳೂರು: ಕೆಲಸದಲ್ಲಿದ್ದ ಅಂಗಡಿಯಿಂದ ಚಿನ್ನದ ಗಟ್ಟಿ ದೋಚಿದ್ದ ಆರೋಪಿ ಬಂಧನ, 50 ಲಕ್ಷ ರೂ. ಮೌಲ್ಯದ ಆಭರಣ ವಶ

Update: 2022-02-25 13:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.25: ಜ್ಯುವೆಲರ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಇದ್ದುಕೊಂಡೇ 1 ಕೆಜಿ 300 ಗ್ರಾಂ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ಅಮರ್ ಮೊಹಂತ್(33) ಎಂದು ಗುರುತಿಸಲಾಗಿದೆ. ಜಯನಗರದ 3ನೆ ಬ್ಲಾಕ್‍ನ 8ನೆ ಎಫ್ ಮುಖ್ಯರಸ್ತೆಯ ತಿರುಮಲ ಜ್ಯುವೆಲರ್ಸ್‍ನಲ್ಲಿ ಆಭರಣಗಳ ತಯಾರಿಕೆ ಕೆಲಸ ಮಾಡುತ್ತಿದ್ದ ಆರೋಪಿಯು ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಾ ಮಾಲಕ ಮನೀಶ್ ಕುಮಾರ್ ವಿಶ್ವಾಸ ಗಳಿಸಿದ್ದ.

ಚಿನ್ನದ ಗಟ್ಟಿಗಳನ್ನು ಪಡೆದುಕೊಂಡು ಆಭರಣಗಳನ್ನು ಮಾಡಿಕೊಡುತ್ತಿದ್ದ ಆರೋಪಿಯನ್ನು ನಂಬಿ ತಿರುಮಲ ಜ್ಯುವೆಲರ್ಸ್‍ನ ಮಾಲಕರು 1ಕೆಜಿ 300ಗ್ರಾಂ ಚಿನ್ನದ ಗಟ್ಟಿ ನೀಡಿ ವಿವಿಧ ವಿನ್ಯಾಸದ ಆಭರಣಗಳನ್ನು ಮಾಡಿಕೊಡುವಂತೆ ತಿಳಿಸಿದ್ದರು.

ಚಿನ್ನದ ಗಟ್ಟಿಯನ್ನು ನೋಡಿ ದುರಾಸೆಗೆ ಬಿದ್ದ ಆರೋಪಿಯು ಅದನ್ನು ದೋಚಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ ಕೆಲ ದಿನಗಳು ಕಳೆದರೂ ಅಮರ್ ಮೊಹಂತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಜಯನಗರ ಪೊಸರಿಗೆ ಮನೀಶ್ ಕುಮಾರ್ ದೂರು ನೀಡಿದ್ದರು. ಈ ಮೊಕದ್ದಮೆ ದಾಖಲಿಸಿಕೊಂಡಿದ್ದ ಜಯನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News