ಭ್ರಷ್ಟಾಚಾರ ಆರೋಪ: ಬಿಬಿಎಂಪಿಯ 27 ಕಚೇರಿಗಳ ಮೇಲೆ ಎಸಿಬಿ ದಾಳಿ

Update: 2022-02-25 15:43 GMT

ಬೆಂಗಳೂರು, ಫೆ.25: ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಪಾಲಿಕೆಯ 27 ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ(ಎಸಿಬಿ) ಶುಕ್ರವಾರದಂದು ಏಕಕಾಲದಲ್ಲಿ ದಾಳಿ ನಡೆಸಿದೆ. ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ನಾಲ್ವರು ಎಸ್‍ಪಿಗಳು, ಡಿವೈಎಸ್‍ಪಿಗಳು, ಇನ್‍ಸ್ಪೆಕ್ಟರ್‍ಗಳು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ಸಾರ್ವಜನಿಕರ ಸೋಗಿನಲ್ಲಿ ಬಿಬಿಎಂಪಿಯ ಕಂದಾಯ ವಿಭಾಗ, ಆಸ್ತಿ ಹಕ್ಕುಗಳ ವರ್ಗಾವಣೆ(ಟಿಡಿಆರ್) ವಿಭಾಗ, ಜಾಹೀರಾತು ವಿಭಾಗ, ನಗರ ಯೋಜನಾ ವಿಭಾಗ, ರಸ್ತೆ ಮತ್ತು ಮೂಲಸೌಕಾರ್ಯ ವಿಭಾಗ(ರಾಜಕಾಲುವೆ) ಸೇರಿದಂತೆ ವಿವಿಧ ವಿಭಾಗಗಳ ಮೇಲೆ ದಾಳಿ ಮಾಡಿದೆ.

ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಧ್ಯವರ್ತಿಗಳ ಜೊತೆಗೂಡಿ ವ್ಯವಹಾರ ನಡೆಸುತ್ತಿದ್ದರು. ಅಲ್ಲದೆ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಫಲಾನುಭವಿಗಳ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಅಲ್ಲದೆ, ಸರಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದರು ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಅವುಗಳನ್ನು ಆಧರಿಸಿ ಪ್ರಕರಣ ದಾಖಲಿಸಿ, ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸತತ ಮೂರು ಘಂಟೆಗಳ ಕಾಲ ತನಿಖೆ ನಡೆಸಿ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News