ಒಗ್ಗೂಡಿದ್ದ ಮಕ್ಕಳನ್ನು ಸರಕಾರವೇ ಬೇರ್ಪಡಿಸಿದೆ: ನ್ಯಾಯವಾದಿ ಎಸ್. ಬಾಲನ್
ಬೆಂಗಳೂರು, ಫೆ.25: ರಾಜ್ಯದಲ್ಲಿ ಶತಮಾನಗಳಿಂದ ಇಲ್ಲದೆ ಇದ್ದ ಹಿಜಾಬ್ ವಿವಾದವು ಇಂದು ಉದ್ಭವವಾಗಿದೆ. ಒಗ್ಗೂಡಿದ್ದ ಮಕ್ಕಳನ್ನು ಸರಕಾರವು ಬೇರ್ಪಡಿಸಿದೆ ಎಂದು ಹಿರಿಯ ವಕೀಲ ಎಸ್. ಬಾಲನ್ ಬೇಸರ ವ್ಯಕ್ತಪಡಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಸೃಷ್ಟಿಸಿ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಯಾರಿಗೂ ತೊಂದರೆ ಆಗದ ಹಿಜಾಬ್ ವಿವಾದವನ್ನು ಸೃಷ್ಟಿಸಿ, ಜಾತಿ-ಮತಗಳನ್ನು ಬಿಟ್ಟು ಶಾಲೆಗಳಲ್ಲಿ ಒಗ್ಗಟ್ಟಾಗಿದ್ದ ಮುಗ್ಧ ಮಕ್ಕಳನ್ನು ಬೇರ್ಪಡಿಸಲಾಗಿದೆ. ಮುಸ್ಲಿಂ ಶಿಕ್ಷಕಿಯರನ್ನು ಅವಮಾನಗೊಳಿಸಿರುವ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದೆ ಎಂದರು.
ಎಸ್‍ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಪ್ರಸಾದ್ ಮಾತನಾಡಿ, ಕೋಮುವಾದಿ ಗೂಂಡಾ ಸರಕಾರ ಎಂದೇ ಹೆಸರುವಾಸಿಯಾಗಿರುವ ಬಿಜೆಪಿ ಸರಕಾರವು ಪ್ರಾಯೋಜಿತ ಹಿಂಸೆಗಳನ್ನು ಪ್ರತಿಪಾದಿಸುತ್ತಿದೆ. ಇಂತಹ ಸರಕಾರದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು. ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವುದು ನಮ್ಮ ಪ್ರಮುಖ ಗುರಿ ಟೀಕಿಸಿದರು.
ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಸಂಚಾಲಕ ಡಾ. ಮೋಹನ್ ರಾಜ್, ಲಲಿತಾ ನಾಯಕ್, ಗೌರಿ ಮತ್ತಿತರರು ಉಪಸ್ಥಿತರಿದ್ದರು.
ಸೆರಗು ಸಂಸ್ಕೃತಿಯ ಪ್ರತೀಕ
ಸೆರಗು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಬಾರತೀಯ ಇತಿಹಾಸದಲ್ಲಿ ಸಾಧನೆಗೈದ ಮಹಿಳೆಯರು ಸೆರಗನ್ನು ಧರಿಸುತ್ತಿದ್ದರು. ಹಿಜಾಬ್ ಸಹ ಸೆರಗಿನಂತೆಯೇ ಒಂದು ವಸ್ತ್ರ ಎಂದು ಭಾವಿಸದೆ, ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಲಾಗಿದೆ. ಹಿಜಾಬ್ ಹಾಗೂ ಸೆರಗಿನ ನಿರಾಕರಣೆಯು ಪುರುಷ ಪ್ರಧಾನ ಸಮಾಜದ ಹಿಂಸೆಯ ಒಂದು ಭಾಗವಾಗಿದೆ.
-ಅಕ್ಬರ್ ಅಲಿ ಉಡುಪಿ, ಜಮಾತ್ ಎ ಇಸ್ಲಾಮಿ ಹಿಂದ್‍ನ ಮುಖಂಡ