ರಶ್ಯಾ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳ ಸಾವು: ಉಕ್ರೇನ್

Update: 2022-02-26 17:18 GMT
photo courtesy:twitter

ಕೀವ್, ಫೆ.26: ಇದುವರೆಗೆ ರಶ್ಯಾದ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳು ಮೃತಪಟ್ಟಿರುವುದಾಗಿ ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲ್ಯಶೊಕೊ ಹೇಳಿದ್ದಾರೆ.ಇದುವರೆಗಿನ ಲಭ್ಯ ಮಾಹಿತಿಯಂತೆ ದುರದೃಷ್ಟವಶಾತ್, ಆಕ್ರಮಣಕಾರರ ಕೈಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳನ್ನು ನಾವು ಕಳೆದುಕೊಂಡಿದ್ದೇವೆ. 33 ಮಕ್ಕಳ ಸಹಿತ 1,115 ಮಂದಿ ಗಾಯಗೊಂಡಿದ್ದಾರೆ ಎಂದವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
 
ಈ ಮಧ್ಯೆ, ರಶ್ಯಾದ ಕ್ಷಿಪಣಿಯೊಂದು ರಾಜಧಾನಿ ಕೀವ್‌ನಲ್ಲಿನ ಬಹುಮಹಡಿ ಕಟ್ಟಡವೊಂದಕ್ಕೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತರ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ದಾಳಿ ನಡೆದ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸುವ ಪ್ರಕ್ರಿಗೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ಕಟ್ಟಡದ ಒಂದು ಪಾರ್ಶ್ವ ಕ್ಷಿಪಣಿ ದಾಳಿಗೆ ಜಖಂಗೊಂಡು ಕುಸಿದು ಬಿದ್ದಿರುವ ಫೋಟೋವನ್ನು ಕೀವ್‌ನ ಮೇಯರ್ ವಿಟಾಲಿ ಕ್ಲಿಶ್ಕೊ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೀವ್‌ನಲ್ಲಿ ರಶ್ಯಾದ ವಿಧ್ವಂಸಕ ಗುಂಪುಗಳಿಂದಾಗಿ ಸಮಸ್ಯೆಯಾಗುತ್ತಿದೆ. ರಾಜಧಾನಿಯಲ್ಲಿ ಇದುವರೆಗೆ ರಶ್ಯಾದ ಪಡೆಗಳಿಲ್ಲ, ಆದರೆ ಹಲವು ದಿಕ್ಕುಗಳಿಂದ ದಾಳಿ ನಡೆಸಿ ರಾಜಧಾನಿಯೊಳಗೆ ನುಗ್ಗುವ ಪ್ರಯತ್ನದಲ್ಲಿದ್ದಾರೆ ಎಂದವರು ಹೇಳಿದ್ದಾರೆ.
 ನಮ್ಮ ಭವ್ಯ, ಶಾಂತಿಯುತ ನಗರ ಕೀವ್ ರಶ್ಯಾದ ಸೇನೆ, ಕ್ಷಿಪಣಿ ದಾಳಿಯನ್ನು ಮತ್ತೊಂದು ರಾತ್ರಿ ಎದುರಿಸಿ ಉಳಿದುಕೊಂಡಿದೆ. ಒಂದು ಕ್ಷಿಪಣಿಯು ಕೀವ್‌ನಲ್ಲಿನ ಜನವಸತಿ ಕಟ್ಟಡಕ್ಕೆ ಬಡಿದಿದೆ ಎಂದು ಉಕ್ರೇನ್‌ನ ವಿದೇಶ ಸಚಿವ ಡಿಮಿಟ್ರೊ ಕುಲೆಬಾ, ಕ್ಷಿಪಣಿ ದಾಳಿಯಿಂದ ಹಾನಿಗೊಂಡ ಕಟ್ಟಡದ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ರಶ್ಯಾದ ಯುದ್ಧಾಪರಾಧಿಗಳನ್ನು ತಡೆಯಬೇಕು. ರಶ್ಯಾವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ, ರಾಯಭಾರಿಗಳನ್ನು ಉಚ್ಛಾಟಿಸಿ, ತೈಲ ನಿರ್ಬಂಧ ಜಾರಿಗೊಳಿಸಿ ಅದರ ಆರ್ಥಿಕತೆಯನ್ನು ಹಾಳುಗೆಡವುವಂತೆ ಅವರು ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.

ಉಕ್ರೇನ್ ಗೆ 200 ವಾಯುರಕ್ಷಣಾ ರಾಕೆಟ್ ಪೂರೈಕೆ: ನೆದರ್ಲ್ಯಾಂಡ್

ಉಕ್ರೇನ್‌ನ ಕೋರಿಕೆ ಮೇರೆಗೆ ಸಾಧ್ಯವಾದಷ್ಟು ಬೇಗ ಉಕ್ರೇನ್‌ಗೆ 200 ಸ್ಟಿಂಜರ್ ವಾಯುರಕ್ಷಣಾ ರಾಕೆಟ್‌ಗಳನ್ನು ಪೂರೈಸಲಾಗುವುದು ಎಂದು ನೆದರ್ಲ್ಯಾಂಡ್ ಸರಕಾರ ಶನಿವಾರ ಸಂಸತ್ತಿಗೆ ಬರೆದ ಪತ್ರದಲ್ಲಿ ಹೇಳಿದೆ.

ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನಿಸಿ, ಪಶ್ಚಿಮ ಉಕ್ರೇನ್‌ನ ಲಿವಿವ್ ನಗರದಲ್ಲಿನ ತನ್ನ ರಾಯಭಾರ ಕಚೇರಿಯ ಸಿಬಂದಿಗಳನ್ನು ಪೋಲಂಡ್‌ನ ಜರೋಸ್ಲಾವ್‌ಗೆ ಸ್ಥಳಾಂತರಿಸಲಾಗುವುದು. ಉಕ್ರೇನ್‌ನ ಕೋರಿಕೆಯಂತೆ 200 ಸ್ಟಿಂಜರ್ ಕ್ಷಿಪಣಿಯನ್ನು ನಮ್ಮ ಮಿತ್ರರಾಷ್ಟ್ರಗಳ ನೆರವಿನಿಂದ ಒದಗಿಸಲಾಗುವುದು. ಈ ತಿಂಗಳ ಆರಂಭದಲ್ಲಿ ಉಕ್ರೇನ್‌ಗೆ ವಾಗ್ದಾನ ನೀಡಿದ ಪ್ರಕಾರ ರೈಫಲ್‌ಗಳು, ಮದ್ದುಗುಂಡು, ರೇಡಾರ್ ವ್ಯವಸ್ಥೆ ಹಾಗೂ ನೆಲಬಾಂಬ್ ಪತ್ತೆಹಚ್ಚುವ ರೊಬೊಟ್‌ಗಳ ಜತೆ ಸ್ಟಿಂಜರ್ ರಾಕೆಟ್‌ಗಳನ್ನು ಅತ್ಯಂತ ಶೀಘ್ರ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಇದು ಶಾಶ್ವತ ಯುದ್ಧವಾಗಲಿದೆ: ಫ್ರಾನ್ಸ್ ಅಧ್ಯಕ್ಷರ ಎಚ್ಚರಿಕೆ

ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸುದೀರ್ಘ ಯುದ್ಧಕ್ಕೆ ಜಗತ್ತು ಸಿದ್ಧವಾಗಬೇಕಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಶನಿವಾರ ಎಚ್ಚರಿಸಿದ್ದಾರೆ.

ಫ್ರಾನ್ಸ್‌ ನಲ್ಲಿ ನಡೆಯುತ್ತಿರುವ ವಾರ್ಷಿಕ ಕೃಷಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಶ್ಯಾ-ಉಕ್ರೇನ್ ನಡುವಿನ ಯುದ್ಧ ದೀರ್ಘ ಕಾಲ ಮುಂದುವರಿಯಲಿದೆ. ಈ ಬಿಕ್ಕಟ್ಟು, ಯುದ್ಧ ಸುದೀರ್ಘಾವಧಿಯದ್ದಾಗಲಿದೆ ಮತ್ತು ಇದರಿಂದ ಉಂಟಾಗುವ ಶಾಶ್ವತ ಪರಿಣಾಮಕ್ಕೆ ನಾವು ಸಿದ್ಧರಾಗಬೇಕಿದೆ ಎಂದು ಎಚ್ಚರಿಸಿದ್ದಾರೆ.

ಯುರೋಪ್‌ಗೆ ಮತ್ತೊಮ್ಮೆ ಯುದ್ಧ ಮರುಕಳಿಸಿದೆ. ರಶ್ಯಾ ಅಧ್ಯಕ್ಷ ಪುಟಿನ್ ಏಕಪಕ್ಷೀಯವಾಗಿ ಆಯ್ಕೆ ಮಾಡಿಕೊಂಡ, ಉಕ್ರೇನ್‌ನ ಜನತೆ ಮತ್ತು ಅವರೊಂದಿಗೆ ಯುರೋಪ್ ವಿರೋಧಿಸುತ್ತಿರುವ ಈ ಯುದ್ಧ ದುರಂತ ಮಾನವೀಯ ಪರಿಸ್ಥಿತಿಗೆ ಕಾರಣವಾಗಲಿದೆ ಎಂದವರು ಹೇಳಿದ್ದಾರೆ.

ಯುದ್ಧದ ಹಿನ್ನೆಲೆಯಲ್ಲಿ ರಶ್ಯಾ ವಿರುದ್ಧ ಜಾರಿಗೊಳಿಸಲು ನಿರ್ಧರಿಸಿದ ನಿರ್ಬಂಧವು ಫ್ರಾನ್ಸ್‌ನ ಹಲವು ಕ್ಷೇತ್ರಗಳ ಮೇಲೆ, ವಿಶೇಷವಾಗಿ ವೈನ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿದೆ. ಈ ಸಾಧ್ಯತೆಯನ್ನು ಮನಗಂಡು, ಇಂತಹ ಕ್ಷೇತ್ರಗಳಿಗೆ ಪುನರುಜ್ಜೀವನ ನೀಡುವ ಪರ್ಯಾಯ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಮಾಕ್ರನ್ ಹೇಳಿದ್ದಾರೆ.

ರಶ್ಯಾ-ಉಕ್ರೇನ್ ಬಿಕ್ಕಟ್ಟನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಇತ್ಯರ್ಥಪಡಿಸಲು ಮಾಕ್ರನ್ ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದ್ದರು. ಫ್ರಾನ್ಸ್ ನಲ್ಲಿ ಎಪ್ರಿಲ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆಯೇ ಉಕ್ರೇನ್ ಯುದ್ಧ ಸ್ಫೋಟಿಸಿದೆ. 2ನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿರುವ ಮಾಕ್ರನ್ ಮುಂದಿನ ವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News