ಸಮಸ್ಯೆಗೆ ಸ್ಪಂದಿಸುವ ಕಥೆ ಮನದ ಶಕ್ತಿಯಾಗಿರುತ್ತದೆ: ಎಂ.ಎಸ್.ಆಶಾದೇವಿ
ಬೆಂಗಳೂರು, ಫೆ.27: ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಗುಣವುಳ್ಳ ಕಥೆಯು ಮನದೊಳಗಿನಿಂದ ಹೊರಹೊಮ್ಮುವ ಧ್ವನಿಯ ಶಕ್ತಿಯಾಗಿರುತ್ತದೆ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.
ರವಿವಾರದಂದು ನಗರದ ಶೇಷಾದ್ರಿಪುರ ಸಭಾಂಗಣದಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆಯು ಆಯೋಜಿಸಿದ್ದ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಣ್ಣ ಅವರ ಕಥೆಗಳಲ್ಲಿ ಸಂವೇದನೆ ಇರುತ್ತದೆ. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎಂಬ ಧೋರಣೆ ಕಥೆಗಾರ ಚಿಕ್ಕಣ್ಣ ಅವರಲ್ಲಿದ್ದು, ಸಾಮಕಾಲೀನ ಸಮಸ್ಯೆಗಳಿಗೆ ಅವರ ಸಾಹಿತ್ಯದಲ್ಲಿ ಸ್ಪಂದನೆ ಇರುತ್ತದೆ ಎಂದರು.
ಪತ್ರಕರ್ತ ರಘುನಾಥ ಚ.ಹ. ಮಾತನಾಡಿ, ಕಥಾ ಸಾಹಿತ್ಯವು ವರ್ತಮಾನದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಲೇ, ಯಾರನ್ನು ಸಮಾಜದಲ್ಲಿ ನಿಕೃಷ್ಟರು ಎಂದು ಕಾಣುತ್ತೇವೆಯೋ ಅವರ ಮೇಲೆ ಮಾನವೀಯ ಅಂತಃಕರಣ ಇಲ್ಲಿ ಕಥೆಗಳಾಗಿದೆ. ಸಮಾಕಾಲೀನ ಆಶಯಗಳನ್ನು ಬಿಂಬಿಸುವ ಕಥೆಗಳು ಚಿಕ್ಕಣ್ಣ ಅವರ ಬರವಣಿಗೆಯಲ್ಲಿರುವ ಕಾರಣ ವರ್ತಮಾನದ ತಲ್ಲಣಗಳಿಗೆ ತಳಕು ಹಾಕುವ ಕಥಾಸಂಕಲನದ ವಿಶೇಷತೆ ಎಂದರು.
ಕಾರ್ಯಕ್ರಮದಲ್ಲಿ ಕಾ.ತ. ಚಿಕ್ಕಣ್ಣ ಅವರ ‘ಮಾಗಿ ಕೋಗಿಲೆ ಮೌನ’ ಎಂಬ ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು. ಕೃತಿಕಾರ ಕಾ.ತ. ಚಿಕ್ಕಣ್ಣ, ವಿಮರ್ಶಕ ಎಚ್. ದಂಡಪ್ಪ, ಪಲ್ಲವ ಪ್ರಕಾಶನದ ವೆಂಕಟೇಶ್ ಉಪಸ್ಥಿತರಿದ್ದರು.