2002ರ ಗುಜರಾತ್ ಹತ್ಯಾಕಾಂಡ ಎಂದೂ ಮರೆಯದ ದುಃಸ್ವಪ್ನ

Update: 2022-03-02 06:36 GMT

ಇಲ್ಲಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದು ಹಿಂಸಾಚಾರದ ಹರಡಿದ ರೀತಿ ಮಾತ್ರವಾಗಿರಲಿಲ್ಲ. ಅದು ದಾಳಿಗಳನ್ನು ನಡೆಸಿದ್ದ ಗುಂಪುಗಳ ಕ್ರಿಯೆಗಳಲ್ಲಿ ಸ್ಪಷ್ಟವಾಗಿದ್ದಂತೆ ಪ್ರತಿಯೊಂದು ಘಟನೆಯ ಹಿಂದಿನ ನಿಖರತೆ ಮತ್ತು ಯೋಜನೆಯಾಗಿರಲಿಲ್ಲ. ದಂಗೆಗಳಲ್ಲಿ ಬಳಕೆಯಾಗಿದ್ದ ಸುಧಾರಿತ ಬಾಂಬ್ ಗಳಂತೆ ಗ್ಯಾಸ್ ಸಿಲಿಂಡರ್ ಗಳು, ಮಾನವ ಮಾಂಸವನ್ನು ದಹಿಸಿದ್ದ ಬಿಳಿಯ ಹುಡಿ, ತ್ರಿಶೂಲಗಳು, ಕೃಷಿ ಉಪಕರಣಗಳು, ಅಷ್ಟೇ ಏಕೆ... ಬಂದೂಕುಗಳು ಕೂಡ ಆಗಿರಲಿಲ್ಲ.

ಅದು ಮಾನವ ಶರೀರಗಳನ್ನು ಛಿದ್ರವಿಚ್ಛಿದ್ರಗೊಳಿಸಿ ಮಾಂಸದ ಚೂರುಗಳನ್ನಾಗಿಸಿದ್ದ ಲೆಕ್ಕಾಚಾರದ ಕ್ರೌರ್ಯವಾಗಿತ್ತು. ಅಲ್ಲಿ ಶಿಶುಗಳು ಮೃತ ಶಿಶುಗಳಂತೆ, ಮಹಿಳೆಯರು ಮೃತ ಮಹಿಳೆಯರಂತೆ, ಪುರುಷರು ಮೃತ ಪುರುಷರಂತೆ ಕಾಣುತ್ತಿರಲಿಲ್ಲ. ಅವರನ್ನು ಸುಟ್ಟು ಭಸ್ಮಗೊಳಿಸಲು ಸಾಧ್ಯವಾಗಾದಾಗದೇ ಇರುವಾಗಲೆಲ್ಲಾ ಅದು ವಿಕೃತ ಮತ್ತು ದಯನೀಯ ನೋಟವಾಗಿತ್ತು. ರಾಜಕೀಯದಿಂದ ಸೃಷ್ಟಿಯಾಗಿದ್ದ ಈ ದಂಗೆ ಈಗಲೂ ಎಲ್ಲರ ನೆನಪಿನಲ್ಲುಳಿಯಬೇಕು.

ಸರಿಸುಮಾರು 20 ವರ್ಷಗಳ ಬಳಿಕ ಇದೀಗ 2021 ಡಿಸೆಂಬರ್ ನಲ್ಲಿ ಭಾರತೀಯರ ಮುಸ್ಲಿಮರ ನರಮೇಧಕ್ಕೆ ರಾಜಾರೋಷವಾಗಿ ಕರೆಗಳು ನೀಡಲ್ಪಟ್ಟಾಗ ಮತ್ತು ಈ ಬಗ್ಗೆ ಭಾರತದ ಆಡಳಿತ ರಾಜಕೀಯ ನಾಯಕತ್ವವು ಗಾಢ ಮೌನವನ್ನು ವಹಿಸಿರುವಾಗ ಈ ರಕ್ತಸಿಕ್ತ ಸಾರ್ವಜನಿಕ ಪರಂಪರೆಯ ವಂಶಾವಳಿಯನ್ನು 2002ರ ಮತ್ತು ಅದಕ್ಕೂ ಹಿಂದಿನ ಗುಜರಾತಿನೊಂದಿಗೆ ಗುರುತಿಸುವುದು ಉತ್ತಮವೆನಿಸುತ್ತದೆ.
                       
ಅದು ಶುರುವಾಗಿದ್ದು ಹೀಗೆ...

20 ವರ್ಷಗಳ ಹಿಂದೆ 2002, ಫೆಬ್ರವರಿ 27ರಂದು ಬೆಳಗ್ಗೆ 7:50ರ ಸುಮಾರಿಗೆ ಸಾಬರಮತಿ ಎಕ್ಸ್ ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ಐದು ಗಂಟೆ ವಿಳಂಬವಾಗಿ ಗೋಧ್ರಾ ನಿಲ್ದಾಣಕ್ಕೆ ಆಗಮಿಸಿದಾಗ ಎಸ್-6 ಬೋಗಿಯಲ್ಲಿನ 58 ಜನರನ್ನು ಜೀವಂತ ಸುಟ್ಟುಹಾಕಿದ್ದು ದ್ವೇಷಕ್ಕೆ ಬಹಿರಂಗ ಪ್ರಚೋದನೆಯನ್ನು ನೀಡಿತ್ತು. ಆದರೆ 2002ರ ಮೊದಲು ವರ್ಷಗಳ ಕಾಲ ಸಾಂಪ್ರದಾಯಿಕ ಕರಪತ್ರಗಳು, ಕಿರುಪುಸ್ತಿಕೆಗಳನ್ನು ಜನರಿಗೆ ತಲುಪಿಸುವ ಮೂಲಕ ಎಲ್ಲ ರೀತಿಯಲ್ಲಿ ದ್ವೇಷ ಅಭಿಯಾನವನ್ನು ನಡೆಸಲಾಗಿತ್ತು.

ಶಾಲಾ ಕಾಲೇಜುಗಳ ತರಗತಿ ಕೋಣೆಗಳೂ ಇದರಿಂದ ಹೊರತಾಗಿರಲಿಲ್ಲ. ರಾಜ್ಯ ಶಿಕ್ಷಣ ಮಂಡಳಿಯ ಸಮಾಜ ವಿಜ್ಞಾನ ಪಠ್ಯಗಳು ಸಮುದಾಯಗಳಲ್ಲಿ ಬಿರುಕು ಹುಟ್ಟಿಸುವಂತೆ ರಚನೆಗೊಂಡಿದ್ದವು. ಗುಜರಾತಿ ಸಮಾಜ ಮತ್ತು ಸರಕಾರದಲ್ಲಿ, ಮನೆಗಳಲ್ಲಿ, ಸಿಬ್ಬಂದಿ ಕೋಣೆಗಳಲ್ಲಿ, ವಕೀಲರ ಕೊಠಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಶಾಪಿಂಗ್ ಮಾಲ್ ಗಳಲ್ಲಿ ಗಡಿಗಳು ಮತ್ತು ವಿಭಜನೆಗಳು ಗುರುತಿಸಲ್ಪಟ್ಟಿದ್ದವು. ಭಿನ್ನಾಭಿಪ್ರಾಯದ ಧ್ವನಿಗಳನ್ನು ಎತ್ತುವವರಿಗೆ ಕುಟುಂಬಗಳು ಮತ್ತು ಸರಕಾರ ಹೊರಗಿನವರೆಂದು ಹಣೆಪಟ್ಟಿ ಅಂಟಿಸಿದ್ದವು.

ಗೋಧ್ರಾದಲ್ಲಿ ಸಂಭವಿಸಿದ್ದ ಘೋರ ಸಾವುಗಳು ಅದಾಗಲೇ ರಾಜ್ಯಾದ್ಯಂತ ಹೊಗೆಯಾಡುತ್ತಿದ್ದ ದ್ವೇಷ ಭಾವನೆಗಳಿಗೆ ಪ್ರಚೋದನೆ ನೀಡಿತ್ತು. 

ಇದರ ಮೊದಲ ಭಾಗವಾಗಿ, ಕಾನೂನು ಮತ್ತು ನಡೆದುಕೊಂಡು ಬಂದಿದ್ದ ಪದ್ಧತಿಗೆ ವ್ಯತಿರಿಕ್ತವಾಗಿ ತೆರೆದ ಸ್ಥಳದಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಿದ್ದರಿಂದ ಮಹಿಳೆಯರು, ಮಕ್ಕಳು ಮತ್ತು ಪುರುಷರ ಸುಟ್ಟು ಕರಕಲಾಗಿದ್ದ ಮತ್ತು ಕೊಳೆತಿದ್ದ ಶವಗಳನ್ನು ಗಂಟೆಗಟ್ಟಲೆ ಕಾಲ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿರಿಸಲಾಗಿತ್ತು.

ಗುಜರಾತ್ ಪೊಲೀಸ್ ಕೈಪಿಡಿಯಲ್ಲಿನ ಹೆಚ್ಚು ಗೊತ್ತಿರದ, ಆದರೆ ನಿಸ್ಸಂದಿಗ್ಧವಾದ ನಿಯಮವೊಂದು, "ಕೊಳೆತ,‌ ಸುಟ್ಟು ಕರಕಲಾದ ಅಥವಾ ತೀವ್ರವಾಗಿ ಹಾನಿಗೀಡಾಗಿರುವ ಶವಗಳ ಚಿತ್ರಗಳನ್ನು ತೆಗೆಯುವುದನ್ನು ಅಥವಾ ಅವುಗಳನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವುದನ್ನು ನಿಷೇಧಿಸುತ್ತದೆ ಮತ್ತು ನಿಯಮದ ಉಲ್ಲಂಘನೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹೊಣೆಗಾರರಾಗಿರುತ್ತಾರೆ". ಈ ನಿಯಮ ಮತ್ತು ಇತರ ಹಲವು ಕಾನೂನುಗಳನ್ನು ರಾಜಾರೋಷ ಉಲ್ಲಂಘಿಸಲಾಗಿತ್ತು ಮತ್ತು ಗೋಧ್ರಾ ದುರಂತದಲ್ಲಿ ಮಡಿದವರ ಚಿತ್ರಗಳು ಸೇಡನ್ನು ಸಮರ್ಥಿಸಿಕೊಳ್ಳಲು ಸಿದ್ಧ ಆಯುಧಗಳಾಗಿ ಪರಿವರ್ತನೆಗೊಂಡಿದ್ದವು.

ಗೋಧ್ರಾ ರೈಲು ದಹನದ ಪರಿಣಾಮವಾಗಿ ಸ್ಪಷ್ಟವಾದ ಮತ್ತು ನಿರೀಕ್ಷಿತ ಕೋಮು ಅಥವಾ ಪಂಥೀಯ ದಳ್ಳುರಿಯನ್ನು ನಿವಾರಿಸಲು ಅಧಿಕಾರಿಗಳು ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ ಮಾತ್ರವಲ್ಲ, ಕೆಲವು ಶವಗಳನ್ನು ವಾಹನಗಳ ಸಾಲಿನೊಂದಿಗೆ ಅಹ್ಮದಾಬಾದ್ ಗೆ ಸಾಗಿಸಲು ವಿಶ್ವ ಹಿಂದು ಪರಿಷದ್ ಗೆ ಸೇರಿದ ವ್ಯಕ್ತಿಗೆ ಆಡಳಿತವು ಅನುಮತಿ ನೀಡಿದ್ದು ನಿಯಮವನ್ನು ಉಲ್ಲಂಘಿಸಿದ್ದು,ಅದು ಉರಿಯುತ್ತಿದ್ದ ಕೋಮು ಜ್ವಾಲೆಗಳನ್ನು ಇನ್ನಷ್ಟು ಹೆಚ್ಚುವಂತೆ ಮಾಡಿತ್ತು.
                               
ರಕ್ತಕ್ಕೆ ರಕ್ತ:

ಮೊದಲು ದಾಖಲಾದ ಪ್ರತೀಕಾರ ಹಿಂಸಾಚಾರದ ಘಟನೆಯು ಗೋಧ್ರಾ ಸಾವುಗಳು ನಡೆದ ಕೆಲವೇ ಗಂಟೆಗಳಲ್ಲಿ ಸಂಭವಿಸಿತ್ತು. ವಡೋದರಾ ರೈಲು ನಿಲ್ದಾಣದಲ್ಲಿ ಮುಸ್ಲಿಂ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಆತನನ್ನು ಕೊಲ್ಲಲಾಗಿತ್ತು, ಆನಂದ್ ನಲ್ಲಿ ಇನ್ನೋರ್ವ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ನಡೆದಿತ್ತು. ಸಾಬರಮತಿ ಎಕ್ಸ್ ಪ್ರೆಸ್ ಸುಟ್ಟು ಹೋಗಿದ್ದ ಬೋಗಿಗಳನ್ನು ಗೋಧ್ರಾ ನಿಲ್ದಾಣದಲ್ಲಿಯೇ ಬಿಟ್ಟು ವಡೋದರಾ ಮತ್ತು ಆನಂದ್ ಮೂಲಕ ತನ್ನ ಗಮ್ಯವಾದ ಅಹ್ಮದಾಬಾದ್ನ ಕಾಲುಪುರ ರೈಲ್ವೆ ನಿಲ್ದಾಣಕ್ಕೆ ತನ್ನ ಪಯಣವನ್ನು ಮುಂದುವರಿಸಿದಾಗ ಈ ಹಿಂಸಾಚಾರದ ಕೃತ್ಯಗಳು ಅದರೊಂದಿಗೇ ಸಾಗಿದ್ದವು.

ರೈಲು ಅಹ್ಮದಾಬಾದ್ ಗೆ ಆಗಮಿಸಿದಾಗ ‘ಖೂನ್ ಕಾ ಬದ್ಲಾ ಖೂನ್ ಸೆ ಲೇಂಗೆ (ರಕ್ತದ ಸೇಡನ್ನು ರಕ್ತದಿಂದ ತೀರಿಸುತ್ತೇವೆ)’ ಎಂಬ ಜೋರಾದ ಘೋಷಣೆಗಳು ರಾಜ್ಯ ಗುಪ್ತಚರ ಘಟಕದ ಅಧಿಕಾರಿಗಳಿಗೆ ಕೇಳಿಸಿತ್ತು. ಅದಾಗಲೇ ಫೆ.27ರಂದು ಅಹ್ಮದಾಬಾದ್ನಲ್ಲಿ ಮುಸ್ಲಿಮರ ಮೇಲೆ ಕ್ರಿಮಿನಲ್ ಹಲ್ಲೆಗಳ 14 ಘಟನೆಗಳು ನಡೆದಿದ್ದವು.

ಅಂತಿಮವಾಗಿ ಗೋಧ್ರಾಕ್ಕಿಂತ ಮೊದಲು ವರ್ಷಗಳ ಕಾಲ ಬಿತ್ತಲಾಗಿದ್ದ ದ್ವೇಷದ ಬೀಜಗಳು ಫಲ ನೀಡತೊಡಗಿದ್ದವು, ಗುಜರಾತಿನ 25 ಜಿಲ್ಲೆಗಳ ಪೈಕಿ 19ನ್ನು ಆವರಿಸಿಕೊಂಡಿದ್ದ ಹಿಂಸಾಚಾರವು 2002ರ ಮಾರ್ಚ್ ಆರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಕೆಪಿಎಸ್ ಗಿಲ್ ಅವರನ್ನು ಅದನ್ನು ಶಮನಿಸಲು ರಾಜ್ಯ ಸರಕಾರಕ್ಕೆ ಸಲಹೆಗಾರರನ್ನಾಗಿ ಕೇಂದ್ರವು ರವಾನಿಸುವವರೆಗೂ ಅರೆ ತೀವ್ರ ಸ್ಥಿತಿಯಲ್ಲಿ ಮುಂದುವರಿದಿತ್ತು ಮತ್ತು ಅಂದಾಜು 2,000 ಜೀವಗಳನ್ನು ಬಲಿ ತೆಗೆದುಕೊಂಡಿತ್ತು (ಅಧಿಕೃತ ಸಂಖ್ಯೆ ಇದರ ಅರ್ಧಕ್ಕಿಂತ ಕಡಿಮೆಯಾಗಿತ್ತು).

ಹತ್ಯೆಗಳ ಹೊರತಾಗಿ ನಿರ್ದೇಶಿತ ಮತ್ತು  ಆರ್ಥಿಕ ವಿನಾಶವೂ ನಡೆದಿತ್ತು. 18,924 ಜನರು ಗಂಭೀರವಾಗಿ ಗಾಯಗೊಂಡಿದ್ದರು, 4,954 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದವು, 10,429 ಅಂಗಡಿಗಳನ್ನು ಸುಟ್ಟು ಹಾಕಲಾಗಿತ್ತು ಮತ್ತು 1,278 ಅಂಗಡಿಗಳನ್ನು ದೋಚಲಾಗಿತ್ತು. ಬೀದಿಬದಿ ವ್ಯಾಪಾರಿಗಳಿಗೆ ಸೇರಿದ್ದ 2,623 ಕೈಗಾಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಮುಸ್ಲಿಮರ ಮನೆಗಳು, ಆಸ್ತಿಗಳು ಮತ್ತು ವ್ಯವಹಾರಗಳಿಗೆ 4,000 ಕೋ.ರೂ.ಗಳ ನಷ್ಟ ಉಂಟಾಗಿತ್ತು.

ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು ದಂಗೆಕೋರರ ವಿಶೇಷ ಗುರಿಗಳಾಗಿದ್ದವು:

285 ದರ್ಗಾಗಳು, 240 ಮಸೀದಿಗಳು, 36 ಮದ್ರಸಾಗಳು, 21 ದೇವಸ್ಥಾನಗಳು ಮತ್ತು ಮೂರು ಚರ್ಚ್ಗಳು ಹಾನಿಗೀಡಾಗಿದ್ದವು/ಧ್ವಂಸಗೊಂಡಿದ್ದವು. ಈ ಪೈಕಿ 412ನ್ನು ಸಮುದಾಯಗಳೇ ದುರಸ್ತಿಗೊಳಿಸಿದ್ದವು, 167 ಹಲವಾರು ವರ್ಷಗಳ ಕಾಲ ಹಾನಿಗೀಡಾದ ಸ್ಥಿತಿಯಲ್ಲಿಯೇ ಉಳಿದಿದ್ದವು.

ರಾಜ್ಯದಲ್ಲಿ ಅತ್ಯಂತ ಹೆಚ್ಚು ಪ್ರಸಾರದಲ್ಲಿದ್ದ ಎರಡು ದೈನಿಕಗಳು ದ್ವೇಷದ ಬೆಂಕಿಗೆ ತುಪ್ಪವನ್ನು ಸುರಿದಿದ್ದವು. ಈ ಪೈಕಿ ‘ಸಂದೇಶ’ ಮುಂಚೂಣಿಯಲ್ಲಿತ್ತು. ರಾಷ್ಟ್ರೀಯ ಮಾನವ‌ ಹಕ್ಕುಗಳ ಅಯೋಗ, ಗುಜರಾತ್ ಸರಕಾರದ ಅಧಿಕಾರಿಗಳೂ (ಭಾವನಗರದ ಮಾಜಿ ಎಸ್ಪಿ ರಾಹುಲ್ ಶರ್ಮಾ ಮತ್ತು ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್) ಪತ್ರಿಕೆಯ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದ್ದರು.‌

ದೈನಿಕದ 2002, ಫೆ.28ರ ಸಂಚಿಕೆಯಲ್ಲಿ ಗೋಧ್ರಾ ದುರಂತದಲ್ಲಿ ಸತ್ತವರ ಸುಟ್ಟು ಕರಕಲಾಗಿದ್ದ ಶವಗಳ ವರ್ಣರಂಜಿತ ಚಿತ್ರಗಳ ಮೇಲೆ ಮುದ್ರಿಸಿದ್ದ ಬ್ಯಾನರ್ ತಲೆಬರಹ ‘ಮತಾಂಧರ ಗುಂಪೊಂದು ರೈಲಿನ ಬೋಗಿಯಿಂದ 15 ಹಿಂದು ಮಹಿಳೆಯರನ್ನು ಎಳೆದೊಯ್ದಿದೆ’ಎಂದು ಕೂಗಿ ಹೇಳಿತ್ತು. ಆದರೆ ಇಂತಹ ಘಟನೆ ನಡೆದಿದ್ದನ್ನು ಗುಜರಾತ್ ಪೊಲೀಸರು ನಿರಾಕರಿಸಿದ್ದರು.

ಇನ್ನೂ ಕೆಟ್ಟದ್ದೆಂದರೆ ಗುಂಪು ದಾಳಿಗಳು ವರದಿಯಾದಾಗ ಈ ದೈನಿಕವು ಬಲಿಪಶುವು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಗ ಅದನ್ನು ಉಲ್ಲೇಖಿಸುತ್ತಲೇ ಇರಲಿಲ್ಲ. ‌

2002, ಮಾ.1ರಂದು ‘ಸಾಬರಮತಿ ಎಕ್ಸ್ ಪ್ರೆಸ್ ರೈಲಿನಿಂದ ಅಪಹರಿಸಲಾಗಿದ್ದ ಯುವತಿಯರ ಶವಗಳು ಸ್ತನಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ’ ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಸುಳ್ಳುವರದಿಯನ್ನು 'ಸಂದೇಶ' ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆದರೆ ವಾಸ್ತವದಲ್ಲಿ ಅಂತಹ ಘಟನೆ ನಡೆದೇ ಇರಲಿಲ್ಲ. ಇಂತಹ ಘಟನೆಯ ಬಗ್ಗೆ ಪೊಲೀಸರ ನಿರಾಕರಣೆಯು ವರದಿಯಲ್ಲಿ ಉಲ್ಲೇಖಗೊಂಡಿರಲಿಲ್ಲ.

ದಿಲೀಪ್ ಪಡಗಾಂವಕರ್, ಬಿ.ಜಿ.ವರ್ಗೀಸ್ ಮತ್ತು ಆಕರ್ ಪಟೇಲ್ ಅವರು ಸಿದ್ಧಗೊಳಿಸಿದ ಗುಜರಾತ್ ದಂಗೆಗಳ ಕುರಿತು ಎಡಿಟರ್ಸ್ ಗಿಲ್ಡ್ ವರದಿಯಲ್ಲಿಯ ಗಮನಾರ್ಹ ಭಾಗವು ಸಂದೇಶ ದೈನಿಕದ ಪ್ರಚೋದನಾತ್ಮಕ ತಲೆಬರಹಗಳನ್ನು ಪಟ್ಟಿ ಮಾಡಿದೆ.

ಜ್ವಾಲೆಗಳನ್ನು ಇನ್ನಷ್ಟು ಭುಗಿಲೆಬ್ಬಿಸಿದ್ದು ಅಧಿಕೃತ ಮಾಧ್ಯಮ ವಾಹಿನಿಗಳು, ಮುದ್ರಣ ಮತ್ತು ಟಿವಿ ಮಾಧ್ಯಮಗಳು ವಿಹಿಂಪ ಮತ್ತು ಕೆಲವು ಅನಾಮಿಕರು ಹೊರಡಿಸಿದ್ದ ಕನಿಷ್ಠ ಮೂರು ಡಝನ್ ಗಳಷ್ಟು ಕರಪತ್ರಗಳನ್ನು ಪ್ರದರ್ಶಿಸಿದ್ದವು ಮತ್ತು ಇವು ಗುಂಪುಗಳಿಗೆ ಅಗತ್ಯವಾಗಿದ್ದ ಪ್ರಚೋದನಾತ್ಮಕ ಸಮರ್ಥ ನೆಯನ್ನು ಒದಗಿಸಿದ್ದವು.

ನಾನು ‘ಕಮ್ಯುನಲಿಸಂ ಕೊಂಬ್ಯಾಟ್’ನ ಮಾರ್ಚ್-ಎಪ್ರಿಲ್ 2002ರ ಸಂಚಿಕೆಯಲ್ಲಿ ‘ಕರಪತ್ರ ವಿಷ’ ಶೀರ್ಷಿಕೆಯಡಿ ಇಂತಹ ಡಝನ್ ಗೂ ಅಧಿಕ ದ್ವೇಷ ಕರಪತ್ರಗಳನ್ನು ಹೆಕ್ಕಿ ಪ್ರಕಟಿಸಿದ್ದೆ. ವಿಹಿಂಪನ ಕರಪತ್ರಗಳೂ ಇದರಲ್ಲಿ ಸೇರಿದ್ದು, ಭಗವದ್ಗೀತೆಯ ಉಕ್ತಿಯೊಂದಿಗೆ ಮುಸ್ಲಿಮರು ಮತ್ತು ಕೈಸ್ತರ ವಿರುದ್ಧ ಹಿಂಸಾಚಾರಕ್ಕೆ ಬಹಿರಂಗ ಕರೆಗಳನ್ನು ನೀಡಲಾಗಿತ್ತು. ಇವೆಲ್ಲ ಕರಪತ್ರಗಳು 20 ವರ್ಷಗಳಷ್ಟು ಹಿಂದೆಯೇ ಪ್ರಕಟಗೊಂಡಿದ್ದವು. ಮುಸ್ಲಿಂ ಮಹಿಳೆಯರ ವಿರುದ್ಧ ಕ್ರೂರ ಲಿಂಗತ್ವ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಅವು ಪ್ರಚೋದಿಸಿದ್ದವು. ಇವೆಲ್ಲ ಉಪದೇಶಗಳು 2002 ರಲ್ಲಿ ಸ್ಫೋಟಗೊಂಡಿದ್ದ ಹಿಂಸಾಚಾರದಲ್ಲಿ ಫಲ ನೀಡಿದ್ದವು.

ಅದಕ್ಕೂ ಹಿಂದೆ ಗುಜರಾತಿನಲ್ಲಿ ಇಂತಹ ಕರಪತ್ರಗಳು ವ್ಯಾಪಕ ಪ್ರಚಾರದಲ್ಲಿದ್ದವು. ‘ಕಮ್ಯುನಲಿಸಂ ಕೊಂಬ್ಯಾಟ್’ನಲ್ಲಿ ನಾನು ಬರೆದಿದ್ದ ಐದು ಕವರ್ ಸ್ಟೋರಿಗಳಲ್ಲಿ ಗುಜರಾತಿ ವರ್ಗಗಳ ಇಂತಹ ಕಪಟಗಳನ್ನು ನಾನು ಸೂಕ್ಷ್ಮವಾಗಿ ದಾಖಲಿಸಿದ್ದೇನೆ.                     

ಬಲವಂತದ ಒಕ್ಕಲೆಬ್ಬಿಸುವಿಕೆ

ನಾಲ್ಕು ವರ್ಷಗಳ ಬಳಿಕ ಬಿಲ್ಕಿಸ್ ಬಾನು ಅವರ ಕ್ರೂರ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದ ಪಂಚಮಹಲ್ ಜಿಲ್ಲೆಯಲ್ಲಿ 1998ರ ಜೂನ್ ನಲ್ಲಿ 300 ಮುಸ್ಲಿಂ ಕುಟುಂಬಗಳನ್ನು ಅವರ ಗ್ರಾಮದಿಂದ ಬಲವಂತದಿಂದ ಹೊರಕ್ಕೆ ದಬ್ಬಲಾಗಿತ್ತು ಮತ್ತು ಕೆಲವು ಹಸ್ತಕ್ಷೇಪಗಳು ಅವರ ವಾಪಸಾತಿಯ ಭರವಸೆ ನೀಡುವವರೆಗೂ ಅವು ತಾತ್ಕಾಲಿಕ ಟೆಂಟ್ ಗಳಲ್ಲಿ ಮಳೆಗಾಲವನ್ನು ಕಳೆದಿದ್ದವು.

1,200 ಗ್ರಾಮಗಳಲ್ಲಿ ಮತ್ತು ನಗರಗಳ 350 ಪ್ರದೇಶಗಳಲ್ಲಿ ‘ಹಿಂದೂ ರಾಷ್ಟ್ರಕ್ಕೆ ಸುಸ್ವಾಗತ’ ಎಂಬ ಫಲಕಗಳನ್ನು ನಾವು ಕಂಡಿದ್ದೆವು.

ರಾಜಕೋಟ್ ನಲ್ಲಿಯ 103 ವರ್ಷಗಳಷ್ಟು ಹಳೆಯ ಕ್ರೈಸ್ತ ಶಿಕ್ಷಣಸಂಸ್ಥೆ ಐಪಿ ಗರ್ಲ್ಸ್ ಸೆಕೆಂಡರಿ ಸ್ಕೂಲ್ ನಲ್ಲಿ ‘ನ್ಯೂ ಟೆಸ್ಟಾಮೆಂಟ್’ನ 300 ಪ್ರತಿಗಳನ್ನು ಸುಟ್ಟುಹಾಕಲಾಗಿತ್ತು ಮತ್ತು ಅಖಿಲ ಭಾರತ ಕ್ರೈಸ್ತ ಒಕ್ಕೂಟವು ರಾಜ್ಯಾದ್ಯಂತ ಕ್ರೈಸ್ತರ ಮೇಲಿನ ಮೂರು ಡಝನ್ಗೂ ಅಧಿಕ ದಾಳಿಗಳನ್ನು ದಾಖಲಿಸಿತ್ತು.

ತಥಾಕಥಿತ ‘ಲವ್ ಜಿಹಾದ್’ ಪಿತೂರಿಯ ವಿರುದ್ಧ ಸಿಟ್ಟಿನ ಮೊದಲ ಭಾಗವಾಗಿ ಹಿಂದು -ಮುಸ್ಲಿಂ ಅಂತರಧರ್ಮೀಯ ವಿವಾಹವಾಗುವ ಯುವಜೋಡಿಗಳನ್ನು ಗುರಿಯಾಗಿಸಲಾಗಿತ್ತು ಮತ್ತು ಸೂರತ್ ನಲ್ಲಿ ಮುಸ್ಲಿಂ ರಿಕ್ಷಾ ಚಾಲಕರ ಮೇಲೆ ದಾಳಿಗಳು ನಡೆದಿದ್ದವು. ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ತನಿಖೆಗಾಗಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ತಂಡವೊಂದನ್ನೂ ರವಾನಿಸಿತ್ತು. ಇವೆಲ್ಲವೂ 2002, ಫೆಬ್ರವರಿಗೆ ಮೊದಲಿನ ವರ್ಷಗಳಲ್ಲಿ ನಡೆದಿದ್ದ ದ್ವೇಷ ಅಭಿಯಾನಗಳ ಕೆಲವು ಸ್ಯಾಂಪಲ್ ಗಳು ಮಾತ್ರ.

ಇಂದಿನ ಭಾರತದಲ್ಲಿ ಗುಜರಾತ್ ನರಮೇಧಕ್ಕೆ ಬುನಾದಿ ಹಾಕಿದ್ದ ಇವೆಲ್ಲ ಅಂಶಗಳನ್ನು ನೆನಪಿಸಿಕೊಳ್ಳುವುದು ಮುಖ್ಯ ಮತ್ತು ಸುಸಂಗತವಾಗಿದೆ. ದ್ವೇಷವು ಈಗ ಸರಕಾರಿ ಪ್ರಾಯೋಜಿತ ಯೋಜನೆಯಾಗಿದ್ದು, ಅಧಿಕಾರದಲ್ಲಿರುವ ರಾಜಕೀಯ ವ್ಯವಸ್ಥೆ,ಅದರ ಸಂಘಟನೆಗಳು ಮತ್ತು ಕಾರ್ಯಕರ್ತರು ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರ ವಿರುದ್ಧ ಹಿಂಸಾಚಾರವನ್ನೆಸಗಲು ದ್ವೇಷ ಅಭಿಯಾನದ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸನ್ನದ್ಧರಾಗಿದ್ದಾರೆ.

ಪೂರ್ವಾಗ್ರಹಪೀಡಿತ ಆಲೋಚನೆಗಳು, ಪೂರ್ವಾಗ್ರಹದ ಕೃತ್ಯಗಳು, ತಾರತಮ್ಯ ಮತ್ತು ಹಿಂಸೆ ಇವು ನರಮೇಧಕ್ಕೆ ಮೊದಲಿನ ನಾಲ್ಕು ಹಂತಗಳಾಗಿವೆ. ಆರಂಭಿಕ ಎಚ್ಚರಿಕೆಯ ಸಂಕೇತಗಳು ನಿರ್ದೇಶಿತ ಹಿಂಸಾಚಾರ, ನರಮೇಧದ ಬಗ್ಗೆ ಸರಕಾರ ಮತ್ತು ಸಮಾಜಕ್ಕೆ ಎಚ್ಚರಿಕೆ ನೀಡುತ್ತಿದ್ದರೆ ಇವುಗಳಲ್ಲಿ ಹೆಚ್ಚಿನವು ದಶಕಗಳಿಂದಲೂ ಗುಜರಾತಿನಿಂದ ಬರುತ್ತಿವೆ.

- ಟೀಸ್ಟಾ ಸೆಟಲ್ವಾಡ್ ಹಿರಿಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ.

ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಶ್ರಮಿಸುತ್ತಿರುವ ಸಿಟಿಝನ್ಸ್ ಆಫ್ ಜಸ್ಟಿಸ್ ಅಂಡ್ ಪೀಸ್ (CJP.org.in) ಕಾರ್ಯದರ್ಶಿ. 

Writer - ಟೀಸ್ಟಾ ಸೆಟಲ್ವಾಡ್ - scroll.in

contributor

Editor - ಟೀಸ್ಟಾ ಸೆಟಲ್ವಾಡ್ - scroll.in

contributor

Similar News