×
Ad

ಉಕ್ರೇನ್: ಖಾರ್ಕಿವ್ ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಜಿರೆಯ ಹೀನಾ ಫಾತಿಮಾ

Update: 2022-03-03 10:48 IST
ಹೀನಾ ಫಾತಿಮಾ

ಬೆಳ್ತಂಗಡಿ, ಮಾ.3: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ರಶ್ಯ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಿಗೇ ಅವರಿಗಿಂತ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ.

ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ಸದ್ಯ ಕಟ್ಟಡವೊಂದರ ಬಂಕರ್ ವೊಂದರಲ್ಲಿ  ನೆಲೆಸಿದ್ದು, ಭಯಭೀತರಾಗಿದ್ದಾರೆ ಎಂದು ಮನೆಮಂದಿ ತಿಳಿಸಿದ್ದಾರೆ.

ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ಸೋಮವಾರ ರಶ್ಯ ದಾಳಿಯಿಂದ ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಮಾಹಿತಿ ನೀಡಿದ್ದಾರೆ.

ನವೀನ್ ಸಾವಿಗೆ ಕಾರಣವಾದ ರಶ್ಯದ ಶೆಲ್ ದಾಳಿ ಹೀನಾ ನೆಲೆಸಿರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಿ ಆಗಿತ್ತಂತೆ.  ಕಟ್ಟಡವೊಂದರ ತಳಹಂತದ ಬಂಕರ್‌ನಲ್ಲಿ‌ ಹೀನಾ ಫಾತಿಮಾ ಜೊತೆ ಚಿಕ್ಕಮಗಳೂರು, ಬೆಂಗಳೂರಿನ ಇತರ ಆರು ಮಂದಿ ವಿದ್ಯಾರ್ಥಿಗಳು ಆತಂಕದ ಕ್ಷಣಗಳೊಂದಿಗೆ ಕಳೆಯುತ್ತಿದ್ದಾರೆ. 

ಈ ವಿದ್ಯಾರ್ಥಿಗಳ ಜೊತೆ ವಿದೇಶಾಂಗ ಇಲಾಖೆ ಸಂಪರ್ಕ ಸಾಧಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಇವರನ್ನು ಸ್ಥಳಾಂತರಿಸಲು ಮುಂದಾಗಿದ್ದು, ರೈಲು ಮಾರ್ಗದ ಮೂಲಕ 1,000 ಕಿ‌.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ ಎಂಬ ಮಾಹಿತಿ ಇದೆ. ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಎಂಬೆಸ್ಸಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.


ಮನೆ ತಲುಪುವವರೆಗೆ ಭಯ ಇದೆ
ಹೀನಾ ಫಾತಿಮಾ  ನನ್ನ ತಂಗಿಯ ಮಗಳು. ಇದೀಗ 1000 ಕಿ.‌ಮೀ ನಷ್ಟು ಅವರು ರೈಲಿನ ಮೂಲಕ ಪ್ರಯಾಣ ಮಾಡಿ ಗಡಿ ತಲುಪಬೇಕಿದೆ. ಪ್ರಯಾಣದ ವೇಳೆ ಅವರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಪ್ರಯಾಣದ ದಾರಿ ಬಗ್ಗೆ ಸರಕಾರ  ಕೂಡ ಖಾತ್ರಿ ನೀಡಿಲ್ಲ. ಯುದ್ಧಪೀಡಿತ ಪ್ರದೇಶಗಳ ಮೂಲಕ ರೈಲು ಹಾದು ಬರಲಿರುವುದರಿಂದ ಏನಾಗುತ್ತದೋ ಏನೋ ಎಂದು‌ ಕ್ಷಣ ಕ್ಷಣ ಭಯ ಇದೆ. ಆದರೂ ದೃತಿಗೆಡದೆ ಮನೆಯವರಿಗೆ ಧೈರ್ಯ ತುಂಬುತ್ತಿದ್ದೇವೆ.

-ಆಬಿದ್ ಅಲಿ (ಉದ್ಯಮಿ), ಹೀನಾ ಫಾತಿಮಾ ಅವರ  ಮಾವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News