×
Ad

ರಥಬೀದಿ ಕಾಲೇಜು ಹಿಜಾಬ್ ವಿವಾದ: ಉನ್ನತ ಮಟ್ಟದ ತನಿಖೆಗೆ ಯು.ಟಿ. ಖಾದರ್ ಆಗ್ರಹ

Update: 2022-03-05 15:58 IST

ಮಂಗಳೂರು, ಮಾ.6: ರಥ ಬೀದಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಜಿಲ್ಲಾಧಿಕಾರಿಯವರು ಉನ್ನತ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ಕ್ರಮ ವಹಿಸಬೇಕು. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ದಬ್ಬಾಳಿಕೆಗೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶದ ವರದಿ ನೀಡಬೇಕು ಎಂದು ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

 ಕಾಲೇಜಿನಲ್ಲಿ ಮಕ್ಕಳ ಗಲಾಟೆಯನ್ನು ಜಿಲ್ಲಾಡಳಿತ ಸುಮ್ಮನೆ ಕುಳಿತು ನೋಡುವುದೇ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ವಿದ್ಯಾರ್ಥಿನಿಯರಿಗೆ ಈ ರೀತಿ ಅಗೌರವ ತೋರುವುದು ಸರಿಯೇ ಎಂದು ಪ್ರಶ್ನಿಸಿದರು.

ಮೀನಿನ ವ್ಯಾಪಾರಿ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದಾಗ ಇಂತಹ ಗೂಂಡಾ ಪ್ರವೃತ್ತಿ, ದರೋಡೆ ಕಾರ್ಯ ಹೆಚ್ಚಾಗುತ್ತದೆ. ಇದನ್ನು ಪೊಲೀಸರು ಮಟ್ಟ ಹಾಕಬೇಕು. ಗೂಂಡಾಗಳು, ದರೋಡೆಕೋರರು ಯಾರೇ ಆಗಿದ್ದರೂ ಅವರನ್ನು ಬಂಧಿಸಿ ಶಿಕ್ಷೆ ನೀಡುವಾಗ ಯಾರೂ ಮಧ್ಯ ಪ್ರವೇಶಿಸುವುದಿಲ್ಲ. ಈ ಕಾರ್ಯ ಮಾಡುವುದು ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.

ನವೀನ್ ಕುಟುಂಬಕ್ಕೆ ಶುಲ್ಕವನ್ನು ಸರಕಾರ ಹಿಂಪಾವತಿಸಲಿ

ಯುಕ್ರೇನ್‌ನಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗುವ ಮುಂಚಿತವಾಗಿಯೇ ಅಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾದ ಕಾರಣವೇ ವಿದ್ಯಾರ್ಥಿ ನವೀನ್‌ನನ್ನು ನಾವು ಕಳೆದುಕೊಳ್ಳಬೇಕಾಯಿತು ಎಂದು ಯು.ಟಿ.ಖಾದರ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನೆರೆ ರಾಷ್ಟ್ರಗಳ ಜತೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವ ರಾಜತಾಂತ್ರಿಕ ಮತ್ತು ವಿದೇಶಾಂಗ ವ್ಯವಸ್ಥೆಯಲ್ಲಿ ಕೇಂದ್ರದ ಸರಕಾರ ವಿಫಲವಾಗಿದ್ದು, ಕೇವಲ ಪ್ರಚಾರದಲ್ಲೇ ಕಾಲ ಕಳೆಯುತ್ತಿರುವುದು ಯುಕ್ರೇನ್ ಘಟನೆಯಿಂದ ಸಾಬೀತಾಗಿದೆ. ಶಿಕ್ಷಣಕ್ಕಾಗಿ ಅಲ್ಲಿ ಹೋಗಿರುವ ಮಕ್ಕಳನ್ನು ರಕ್ಷಿಸುವುದನ್ನು ಬಿಟ್ಟು ಆ ಮಕ್ಕಳ ಪೋಷಕರು ನೊಂದುಕೊಳ್ಳುವ ರೀತಿಯಲ್ಲಿ ಜನಪ್ರತಿನಿಧಿಗಳು ಹೇಳಿಕೆಗಳನ್ನು ನೀಡುತ್ತಾರೆಂದರೆ ಏನರ್ಥ ಎಂದು ಬೇಸರಿಸಿದರು.

ಕಾಂಗ್ರೆಸ್ ಸರಕಾರ ಇದ್ದಾಗ ಎಂಬಿಬಿಎಸ್ ಪೇಮೆಂಟ್ ಮೆರಿಟ್ ಸೀಟ್ ಶುಲ್ಕ ಎಷ್ಟಿತ್ತು ಹಾಗೂ ಇದೀಗ ಎಷ್ಟು ಹೆಚ್ಚಾಗಿದೆ ಎಂಬ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಲಿ. ನಾವು ಇದಕ್ಕೆ ಉತ್ತರಿಸಲು ಸಿದ್ಧರಿದ್ದೇವೆ. ಅದಕ್ಕೂ ಮೊದಲು ಎಲ್ಲರನ್ನೂ ಅಲ್ಲಿಂದ ಸುರಕ್ಷಿತವಾಗಿ ತರುವ ಕೆಲಸ ಮಾಡಲಿ. ಅದ ಬಿಟ್ಟು ಯುದ್ಧ ಭೂಮಿಯಿಂದ ಗಡಿ ಪ್ರದೇಶದ ಪಕ್ಕದ ರಾಷ್ಟ್ರಗಳಿಗೆ ಜೀವದ ಹಂಗನ್ನು ತೊರೆದು ತಮ್ಮದೇ ಖರ್ಚಿನಲ್ಲಿ ಆಗಮಿಸಿದ ವಿದ್ಯಾರ್ಥಿಗಳೆದೆರು ತಾವೇ ಕರೆದು ತಂದಿರುವುದಾಗಿ ಬಿಂಬಿಸುವುದು ಹಾಸ್ಯಾಸ್ಪದ ಎಂದು ಯು.ಟಿ.ಖಾದರ್ ಹೇಳಿದರು.

ಯುಕ್ರೇನ್‌ನಲ್ಲಿ ಮೃತಪಟ್ಟಿರುವ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಆತನ ಶಿಕ್ಷಣಕ್ಕಾಗಿ ಪಾವತಿಸಲಾದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News