ಮಿಷನರಿಗಳ ಅಧ್ಯಯನ, ಸಂಶೋಧನೆ, ಭಾಷಾ ಬೆಳೆಸುವಿಕೆ ಅಭಿನಂದನೀಯ: ಡಾ.ಅಜಕ್ಕಳ
ಪುತ್ತೂರು, ಮಾ.5: ಮಿಷನರಿಗಳು ಈ ಭಾಗದಲ್ಲಿ ನಡೆಸಿದ ಹಲವಾರು ಅಧ್ಯಯನ, ಸಂಶೋಧನೆಗಳು, ಭಾಷಾ ಬೆಳೆಸುವಿಕೆ ಅಭಿನಂದನೀಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಿಟ್ಟೆಲ್ ಸಾಹಿತ್ಯ ಸಂಸ್ಮರಣೆ ಔಚಿತ್ಯಪೂರ್ಣವಾಗಿದೆ ಎಂದು ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜೆಕ್ಕಳ ಗಿರೀಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಸ್ತಪ್ರತಿ ವಿಭಾಗ ಹಾಗೂ ಸುಧಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಪುತ್ತೂರು ಸಹಯೋಗದಲ್ಲಿ ಪುತ್ತೂರಿನ ಸುಧಾನ ವಸತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಅಖಿಲ ಕರ್ನಾಟಕ 18ನೆಯ ಹಸ್ತಪ್ರತಿ ಸಮ್ಮೇಳನ ಮತ್ತು ರೆವೆ.ಜಿಎಫ್ ಕಿಟ್ಟೆಲ್ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಂಪಿ ವಿಶ್ವವಿದ್ಯಾನಿಲಯವು ಹಸ್ತಪ್ರತಿ ಶಾಸ್ತ್ರಕ್ಕೆ ಗಟ್ಟಿ ಅಡಿಪಾಯವನ್ನು ಹಾಕಿದೆ. ಸುಮಾರು 14 ವರ್ಷಗಳ ಹಿಂದೆ ಸರಕಾರವು ಹಸ್ತಪ್ರತಿ ಸಂಗ್ರಹ ಅಭಿಯಾನ ನಡೆಸಿದ್ದ ಸಂದರ್ಭದಲ್ಲಿ ಈ ಭಾಗದ ವಿಟ್ಲ ಹಾಗೂ ಸುತ್ತಮುತ್ತಲಿನಲ್ಲಿ ಸಾಕಷ್ಟು ಮನೆಗಳಿಗೆ ಸುತ್ತಾಡಿ ಹಸ್ತಪ್ರತಿಗಳ ಸಂಗ್ರಹ ಹಾಗೂ ಜಾಗೃತಿ ಮೂಡಿಸಿದ ಅನುಭವ ನನಗಿದೆ ಎಂದು ನೆನಪಿಸಿಕೊಂಡರು.
ಹಸ್ತಪ್ರತಿ ಅಧ್ಯಯನವು ಅಷ್ಟೊಂದು ಆಕರ್ಷಣೀಯ ಕ್ಷೇತ್ರವಲ್ಲ. ಇತರ ಕ್ಷೇತ್ರಗಳಂತೆ ಗ್ಲಾಮರ್ ಈ ಕ್ಷೇತ್ರಕ್ಕಿಲ್ಲ. ಆದರೆ ಇದೊಂದು ವಿದ್ವತ್, ಶ್ರಮ ಮತ್ತು ಸಮಯಗಳನ್ನು ಬೇಡುವ ಕೆಲಸವಾಗಿದೆ. ಇತ್ತೀಚೆಗಿನ ಅಧ್ಯಯನದ ದಿಕ್ಕುಗಳನ್ನು ನೋಡಿದರೆ ಹಸ್ತಪ್ರತಿ ವರ್ತಮಾನಕ್ಕೆ ತಳಕು ಹಾಕುತ್ತಿದೆ. ನಮ್ಮಲ್ಲಿನ ಸಾಕಷ್ಟು ಧಾರ್ಮಿಕ ಕೇಂದ್ರಗಳು ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸಿ ಪೋಷಿಸುತ್ತಿದೆ. ಹಸ್ತಪ್ರತಿಯಿಂದ ಲಿಪಿಯ ವಿಕಾಸದ ಚರಿತ್ರೆ ತಿಳಿಯಲು ಸಾಧ್ಯವಿದೆ ಎಂದರು.
ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮೌಖಿಕ ಸಾಹಿತ್ಯಗಳನ್ನು ಸಂಗ್ರಹಿಸುವ ಸಾಕಷ್ಟು ಕೆಲಸಗಳು ನಡೆದಿದೆ. ಅವು ಲಿಪಿ ಸಂಕೇತವಾಗಿ ಸಮಗ್ರವಾಗಿ ವ್ಯಾಪಿಸಿದೆ. ಸಾಹಿತ್ಯ ವಿಭಾಗದಲ್ಲಿ ಹಳೆಗನ್ನಡಕ್ಕೆ ಬೆಲೆ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ಅದಕ್ಕೂ ಹಳೆಯದಾದ ಹಸ್ತಪ್ರತಿಯು ಕಡೆಗಣನೆಗೆ ಒಳಗಾಗಿದೆ. ಈ ನಡುವೆ ತಂತ್ರಜ್ಞಾನಗಳು ಸಾಕಷ್ಟು ಮುಂದುವರಿದಿದ್ದು, ಮುಂದಿನ ಮೂರ್ನಾಕು ವರ್ಷಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯದೆ ಪಾಸಾಗುವ ವ್ಯವಸ್ಥೆಯೂ ಬರಲು ಸಾಧ್ಯವಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ.ಎ.ವಿ.ನಾವಡ ಸಂಪಾದಿಸಿದ ಕಿಟ್ಟೆಲ್ ವಾಚಿಕೆ, ಸಿಲೆಕ್ಟಡ್ ರೈಟಿಂಗ್ ಆಫ್ ರೆವೆ. ಕಿಟ್ಟೆಲ್ ಇನ್ ಕನ್ನಡ ಲಾಂಗ್ವೇಜ್ ಲಿಟಿರೇಚರ್ ಆ್ಯಂಡ್ ಕಲ್ಚರ್ ಮತ್ತು ಕಿಟ್ಟೆಲ್ ಅವರ ಕ್ರೀಸ್ತೀಯ ಕಾವ್ಯ: ಕಥಾಮಾಲೆಯನ್ನು ಹಾಗೂ ಡಾ. ವೀರೇಶ್ ಬಡಿಗೇರ ಸಂಪಾದಿಸಿದ ಹಸ್ತಪ್ರತಿ ವ್ಯಾಸಂಗ-21, ಹಸ್ತಪ್ರತಿ ಅಧ್ಯಯನ 10-1, 2, ಮತ್ತು ಹಸ್ತಪ್ರತಿ ಅಧ್ಯಯನ 11-1, 2 ಎಂಬ 6 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಮುಂಬೈನ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಸುದಾನ ವಸತಿ ಶಾಲೆಯ ಸಂಚಾಲಕ ರೆವೆ. ವಿಜಯ ಹಾರ್ವಿನ್ ಹಸ್ತಪ್ರತಿ ಮತ್ತು ಪುಸ್ತಕ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಎ.ವಿ. ನಾವಡ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸ.ಚಿ. ರಮೇಶ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಂಪಿ ವಿಶ್ವವಿದ್ಯಾನಿಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸುಧಾನ ಕಿಟ್ಟೆಲ್ ಸೆಂಟರ್‌ನ ನಿರ್ದೇಶಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಸುದಾನ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಂದಿಸಿದರು. ಶಿಕ್ಷಕಿ ಕವಿತಾ ಅಡೂರು ಕಾರ್ಯಕ್ರಮ ನಿರೂಪಿಸಿದರು.