ಮೇಕೆದಾಟು ಯೋಜನೆ ವಿವಾದ ಮಾತುಕತೆ ಮೂಲಕ ಇತ್ಯರ್ಥಕ್ಕೆ ಸಿದ್ಧ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

Update: 2022-03-05 15:18 GMT

ಬೆಂಗಳೂರು, ಮಾ. 5: ‘ಮೇಕೆದಾಟು ಅಣೆಕಟ್ಟು ಯೋಜನೆ ವಿವಾದವು ಸಿಡಬ್ಲ್ಯೂಸಿ ಹಾಗೂ ಸುಪ್ರೀಂ ಕೋರ್ಟ್‍ನಲ್ಲಿದ್ದು, ನದಿ ಪಾತ್ರದ ರಾಜ್ಯಗಳು ನ್ಯಾಯಾಲಯದ ಹೊರಗೆ ಕೂತು ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು' ಎಂದು ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದಿಲ್ಲಿ ಸಲಹೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆ ವ್ಯಾಜ್ಯವನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕರ್ನಾಟಕ, ತಮಿಳುನಾಡು ಸೇರಿದಂತೆ ಆ ವ್ಯಾಪ್ತಿಯಲ್ಲಿನ ರಾಜ್ಯಗಳ ಜೊತೆ ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ಧವಿದೆ' ಎಂದು ವಿವರಣೆ ನೀಡಿದರು.

‘ಕರ್ನಾಟಕ ರಾಜ್ಯದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ರಾಜಕೀಯ ಮಾಡುತ್ತಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಈ ಸಮಸ್ಯೆ ಬಗೆಹರಿಸದ ಕಾರಣ ವಿವಾದವು ಈ ಮಟ್ಟಕ್ಕೆ ತಲುಪಿದೆ. ಇದೀಗ ನಮ್ಮ ಸರಕಾರ ಈ ವಿವಾದ ಇತ್ಯರ್ಥಕ್ಕೆ ಮುಂದಾಗಲಿದೆ' ಎಂದು ಶೇಖಾವತ್ ತಿಳಿಸಿದರು.

‘ಕೇಂದ್ರದ ಬಿಜೆಪಿ ಸರಕಾರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಉತ್ತರಪ್ರದೇಶ ಕೆನ್ ಬೆಟ್ವಾ ಪ್ರದೇಶದಂತೆ ರಾಜ್ಯದಲ್ಲಿಯೂ ಅಂತರ ರಾಜ್ಯ ಜಲ ವಿವಾದ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು. ಅದೇ ರೀತಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ' ಎಂದು ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.

‘ವಿವಿಧ ರಾಜ್ಯಗಳ ನಡುವೆ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಯೋಜನೆ ಜಾರಿ ಬಗ್ಗೆ ಇರುವ ಅಡ್ಡಿಗಳ ಕುರಿತು ಆಯಾ ರಾಜ್ಯಗಳ ಜೊತೆ ಚರ್ಚೆ ನಡೆಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಪ್ರಮುಖರೊಂದಿಗೆ ಚರ್ಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ಸಮಾಲೋಚನೆ ನಡೆಸಲಾಗಿದೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News