ಎಸ್ಡಿಪಿಐ ಮೇಲೆ ಫಂಡಿಂಗ್ ಆರೋಪ: 24 ಗಂಟೆಯೊಳಗೆ ಸಾಬೀತುಪಡಿಸಲು ಎಸ್ಡಿಪಿಐ ಸವಾಲು

Update: 2022-03-05 12:46 GMT

ಮಂಗಳೂರು, ಮಾ.5:ಖಾಸಗಿ ಚಾನೆಲ್ ನ ಸಂದರ್ಶನದಲ್ಲಿ ಬಜರಂಗದಳದ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಹೊರಿಸಿರುವ ಆರೋಪಕ್ಕೆ ಖಂಡನೆ ವ್ಯಕ್ತಪಡಿಸಿರುವ ಎಸ್ಡಿಪಿಐ ದ.ಕ.ಜಿಲ್ಲಾ ಸಮಿತಿಯು 24 ಗಂಟೆಯೊಳಗೆ ಸಾಕ್ಷಿ ಸಮೇತ ಆರೋಪ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಕ್ಷಮೆ ಯಾಚಿಸಬೇಕು ಎಂದು ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸವಾಲು ಹಾಕಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಕೋಮುದ್ವೇಷ, ಸುರತ್ಕಲ್ ಭಾಗದಲ್ಲಿ ಅಶಾಂತಿ, ದೊಂಬಿ ಹಿಂದೂ-ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ರಾಜಕೀಯವಾಗಿ ಬೆಳೆಯಬೇಕು ಎಂಬ ಆಸೆಯು ಈಡೇರದೆ ಸಂಘಪರಿವಾರದ ನಾಯಕರು ಸತ್ಯಜಿತ್ರನ್ನು ಯೂಸ್ ಆ್ಯಂಡ್ ತ್ರೋ ಆಗಿ ಬಳಸಿದ ಕೋಪವನ್ನು ತೀರಿಸಲು ಎಸ್ಡಿಪಿಐ ಮೇಲೆ ಸುಳ್ಳಾರೋಪ ಮಾಡಿರುವುದು ಹಾಸ್ಯಾಸ್ಪದವಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಲಭೆ ಸೃಷ್ಟಿಸಲು ನೇತೃತ್ವ ನೀಡಿದ್ದ ಉಮಾ ಭಾರತಿ, ಪ್ರಹ್ಲಾದ್ ಜೋಶಿ ಮತ್ತಿತರರು ಶಾಸಕ, ಸಚಿವ, ಸಂಸದರಾಗಿದ್ದಾರೆ, ಅವರೊಂದಿಗಿದ್ದ ಸತ್ಯಜಿತ್ ಮೂಲೆಗುಂಪು ಆಗಿರುವುದನ್ನು ಅರಗಿಸಿಕೊಳ್ಳಲಾಗದೆ ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಎಸ್ಡಿಪಿಐ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಅಬೂಬಕ್ಕರ್ ಕುಳಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸತ್ಯಜಿತ್ ತಾನು ಮಾಡಿದ ಆರೋಪವನ್ನು 24 ಗಂಟೆಯೊಳಗೆ ಸಾಕ್ಷಿ ಸಮೇತ ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಎಸ್ಡಿಪಿಐ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿದೆ. ಅಲ್ಲದೆ ಈ ವಿಚಾರದಲ್ಲಿ ಎಸ್ಡಿಪಿಐ ಬಹಿರಂಗ ಚರ್ಚೆಗೂ ಸಿದ್ಧವಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News