ವಿಶ್ವವಿದ್ಯಾಲಯಗಳಲ್ಲಿ ಕೈವಾರ ತಾತಯ್ಯರ ಅಧ್ಯಯನ ಪೀಠ ಸ್ಥಾಪಿಸುವಂತೆ ಸಿಎಂಗೆ ಕಾಂಗ್ರೆಸ್ ವಕ್ತಾರ ರಮೆಶ್ ಬಾಬು ಪತ್ರ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಅಥವಾ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಕೈವಾರ ತಾತಯ್ಯನವರ ಅಧ್ಯಯನ ಪೀಠ ಸ್ಥಾಪಿಸಿ ಇದಕ್ಕೆ ಪೂರಕವಾಗಿ ಅಗತ್ಯವಿರುವ ಅನುದಾನವನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ವಕ್ತಾರ ರಮೆಶ್ ಬಾಬು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ರಮೆಶ್ ಬಾಬು ಅವರ ಪತ್ರದ ಸಾರಾಂಶ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಕೈವಾರ ಕ್ಷೇತ್ರದಲ್ಲಿ ಜನಿಸಿದ ಶ್ರೀ ಯೋಗಿನಾರೇಯಣ ಯತೀಂದ್ರರು “ಕೈವಾರ ತಾಶಯ್ಯ” ಎಂದೇ ಪ್ರಸಿದ್ಧರಾಗಿರುತ್ತಾರೆ. ಹಿಂದುಳಿದ ಜನಾಂಗದಲ್ಲಿ ಜನಿಸಿದ ಸಮಾಜ ಸುಧಾರಕರಾಗಿ ಜನಸಾಮಾನ್ಯರ ಬದುಕನ್ನು ಹಸನಗೊಳಿಸಲು ಕೀರ್ತನೆಗಳು ಮತ್ತು ತತ್ವಪದಗಳ ಮೂಲಕ ಕರ್ನಾಟಕದಲ್ಲಿ ಹಾಗೂ ಆಂಧ್ರದ ಗಡಿ ಭಾಗದಲ್ಲಿ ಪ್ರಸಿದ್ದಿಯಾಗಿರುತ್ತಾರೆ. ಕಾಲಜ್ಞಾನದ ಮೂಲಕ ಸಮಾಜದ ಮುಂದೆ ಸಂಭವಿಸಬಹುದಾದ ಘಟನೆಗಳನ್ನು ನೂರಾರು ವರ್ಷಗಳ ಹಿಂದೆಯೇ ದಾಖಲು ಮಾಡಿರುತ್ತಾರೆ. ತಮ್ಮ ಕೀರ್ತನೆಗಳು ಮತ್ತು ಪ್ರವಚನಗಳ ಮೂಲಕ ಜನಸಾಮಾನ್ಯರಿಗೆ ಪ್ರೇರಕ ಶಕ್ತಿಯಾಗಿ ಜನಮನದಲ್ಲಿ ಉಳಿದುಕೊಂಡಿರುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ಮಾರ್ಚ್ 27ರಂದು ಸರ್ಕಾರದ ವತಿಯಿಂದ ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಆಚರಿಸುವ ನಿರ್ಧಾರವನ್ನು 2022-23ರ ಆಯವ್ಯಯದಲ್ಲಿ ಘೋಷಿಸಿರುವುದು ಸ್ವಾಗತಾರ್ಹ ಮತ್ತು ಅಭಿನಂದನೀಯ ಕಾರ್ಯವಾಗಿರುತ್ತದೆ. ಮೂಲಕ ಕೈವಾರ ತಾತಯ್ಯನವರ ಆಚಾರ ಮತ್ತು ವಿಚಾರಗಳು ಜನಮನದಲ್ಲಿ ಉಳಿಸುವ ರಾಜ್ಯ ಸರ್ಕಾರದ ಕ್ರಮ ಸಕಾಲಿಕ. ಶ್ರೀ ಕೈವಾರ ತಾತಯ್ಯನವರ ಕೀರ್ತನೆಗಳು ಮತ್ತು ಪ್ರವಚನಗಳು ಪೂರ್ಣ ಪ್ರಮಾಣದಲ್ಲಿ ದಾಖಲಾಗಿರುವುದಿಲ್ಲ.
ಇವರ ಆಚಾರ ವಿಚಾರಗಳು ಇಂದಿನ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಬೇಕು,ಕೈವಾರ ತಾತಯ್ಯನವರ ಚಿಂತನೆಗಳು ಸಮಾಜಮುಖಿಯಾಗಿದ್ದು, ಜನಪರವಾಗಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಶ್ರೀ ಕೈವಾರ ತಾತಯ್ಯನವರ ಜಯಂತಿಯ ಆಚರಣೆಯ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಅಥವಾ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಕೈವಾರ ತಾತಯ್ಯನವರ ಅಧ್ಯಯನ ಪೀಠ ಸ್ಥಾಪಿಸುವ ಮುಖಾಂತರ, ಶ್ರೀ ಕೈವಾರ ತಾತಯ್ಯನವರ ಶತಮಾನಗಳ ಇತಿಹಾಸವಿರುವ ಕೀರ್ತನೆಗಳು, ಗ್ರಂಥಗಳು ಮತ್ತು ಪ್ರವಚನಗಳನ್ನು ಸಂರಕ್ಷಿಸಿ, ಈ ರಾಜ್ಯದ ಮತ್ತು ದೇಶದ ಆಧ್ಯಯನಶೀಲ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಇದರ ಲಾಭ ದೊರೆಯುವಂತೆ ಮಾಡಬೇಕಾಗಿ ಕೋರುತ್ತೇನೆ.
ಇದಕ್ಕೆ ಪೂರಕವಾಗಿ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ತಾವು ದಯಮಾಡಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಮೂರೂ ವಿಶ್ವವಿದ್ಯಾಲಯಗಳಲ್ಲಿ ಕೈವಾರ ತಾತಯ್ಯನವರ ಅಧ್ಯಯನ ಪೀಠ ಸ್ಥಾಪಿಸಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.