×
Ad

ಬೆಂಗಳೂರು: ಅಂತರ್ ರಾಷ್ಟ್ರೀಯ ಚಿತ್ರೋತ್ಸವ ವೇಳೆ ಚಿತ್ರಗಳ ಮಾಹಿತಿ ಪುಸ್ತಕ ವಿತರಿಸದ್ದಕ್ಕೆ ಪ್ರತಿಭಟನೆ

Update: 2022-03-07 22:07 IST

ಬೆಂಗಳೂರು, ಮಾ. 7: 13ನೇ ಅಂತರ್ ರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ಒರಾಯನ್ ಮಾಲ್‍ನ ಚಿತ್ರ ಪ್ರದರ್ಶನದ ನಡುವೆ, ಚಿತ್ರಪ್ರೇಮಿಗಳು ಚಲನಚಿತ್ರ ಅಕಾಡೆಮಿಯ ಅವ್ಯವಸ್ಥೆಯ ಬಗ್ಗೆ ಆಕ್ರೋಶಿತರಾಗಿ ಪ್ರತಿಭಟನೆಗಿಳಿದ ಪ್ರಸಂಗ ಜರುಗಿತು.

ಚಿತ್ರಪ್ರದರ್ಶನದ ನಡುವೆಯೇ ಗೋಷ್ಠಿಗಳನ್ನು ವ್ಯವಸ್ಥೆ ಮಾಡಿದ್ದ ಅಕಾಡೆಮಿಯ ಕಾರ್ಯಕ್ರಮದ ಜಾಗದಲ್ಲಿಯೇ ಕೆಲ ಸಿನಿಪ್ರೇಮಿಗಳು, ಚಿತ್ರೋತ್ಸವ ಆರಂಭವಾಗಿ 4 ದಿನಗಳಾದರೂ, ಇಲ್ಲಿಯವರೆಗೆ ಪ್ರದರ್ಶನಗೊಳ್ಳುವ ಚಿತ್ರಗಳ ಬಗೆಗಿನ ಮಾಹಿತಿ ಪುಸ್ತಕ ವಿತರಣೆ ಮಾಡಿಲ್ಲವೆಂದು ಪ್ರತಿಭಟಿಸಿದರು.

ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್‍ ರನ್ನು, ಚಿತ್ರೋತ್ಸವ ಆರಂಭವಾಗಿ 4 ದಿನಗಳಾಯಿತು, ಚಿತ್ರಗಳ ಬಗೆಗಿನ ಮಾಹಿತಿವುಳ್ಳ ಪುಸ್ತಕವನ್ನೇ ವಿತರಣೆ ಮಾಡದೆ, ಅಂತರ್‍ರಾಷ್ಟ್ರೀಯ ಚಿತ್ರಗಳ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. 

ಇದ್ದಕ್ಕಿದ್ದಂತೆ ಎದುರಾದ ಸಿನಿಪ್ರಿಯರ ಪ್ರತಿಭಟನೆಗೆ ತಬ್ಬಿಬ್ಬಾದ ಅಧ್ಯಕ್ಷ ಸುನೀಲ್ ಪುರಾಣಿಕ್, ಆದ ತೊಂದರೆಗೆ ಕ್ಷಮೆ ಕೋರುತ್ತೇನೆ, ಗಡಿಬಿಡಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ನಾಳೆ ವಿತರಿಸಲಾಗುವುದು ಎಂದರು. 

7 ದಿನಗಳ ಚಿತ್ರೋತ್ಸವಕ್ಕೆ ಚಲನಚಿತ್ರ ಅಕಾಡೆಮಿ ಖರ್ಚು ಮಾಡುತ್ತಿರುವುದು ಬರೋಬ್ಬರಿ 3 ಕೋಟಿ 33 ಲಕ್ಷ ರೂ.ಗಳು. ಪ್ರತಿವರ್ಷ ಚಿತ್ರೋತ್ಸವ ನಡೆದಾಗಲೂ ಸಿನಿಪ್ರಿಯರ ಅನುಕೂಲಕ್ಕಾಗಿ ಅಕಾಡೆಮಿ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ, ಪ್ರದರ್ಶನ ಕಾಣುವ ಚಿತ್ರಗಳ ಬಗೆಗಿನ ಸಂಪೂರ್ಣ ಮಾಹಿತಿ ಕಿಟ್ ಅನ್ನು ಚಿತ್ರೋತ್ಸವಕ್ಕೂ ಮುನ್ನವೇ ವಿತರಿಸುವ ಪರಿಪಾಠವಿತ್ತು. ಆದರೆ ಈ ಬಾರಿ ಚಿತ್ರೋತ್ಸವ ಶುರುವಾಗಿ 4 ದಿನಗಳಾದರೂ, ಮಾಹಿತಿ ಕಿಟ್ ವಿತರಿಸದೇ ಸಬೂಬು ಹೇಳುತ್ತಿದ್ದುದರಿಂದ ಆಕ್ರೋಶಗೊಂಡು ಸಿನಿಪ್ರಿಯರು ಚಿತ್ರೋತ್ಸವದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಯಿತು ಎಂದು ಸಿನಿಪ್ರಿಯರೊಬ್ಬರು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News