ಮಹಿಳೆಯರ ಸಬಲೀಕರಣಕ್ಕಾಗಿ ಸೆಲ್ಕೋ ಸಂಸ್ಥೆಯಿಂದ ಕಾರ್ಯಕ್ರಮಗಳಿಗೆ ಚಾಲನೆ
ಬೆಂಗಳೂರು, ಮಾ.7: ಯುವತಿಯರು ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಸಂಶೋಧನೆ, ಉದಮ್ಯಶೀಲತೆ, ಬೋಧಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಹಾಗೂ ಹೆಣ್ಣುಮಕ್ಕಳನ್ನು ಸುಸ್ಥಿರತೆಯ ಭವಿಷ್ಯದ ರಾಯಭಾರಿಗಳಾಗಿ ರೂಪಿಸುವ ಗುರಿಯನ್ನು ಸೆಲ್ಕೋ ಹೊಂದಿದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.8ರಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುತ್ತಿದೆ ಎಂದು ಸೆಲ್ಕೊ ಸಂಸ್ಥಾಪಕ ಡಾ. ಹರೀಶ್ ಹಂದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಮಾನ ಪಾಲುದಾರರಾಗಲು ಉತ್ತೇಜನ ನೀಡುವ ಸಲುವಾಗಿ ಸೆಲ್ಕೋ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ವೇದಿಕೆಗಳನ್ನು ಸೃಷ್ಟಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಇಂಧನ ಕ್ಷೇತ್ರದಲ್ಲಿ 10,000 ಸಂಭಾವ್ಯ ಮಹಿಳಾ ಉದ್ಯಮಶೀಲರಿಗೆ ಆರ್ಥಿಕವಾಗಿ ಬೆಂಬಲ ನೀಡಲು ಅನೇಕ ಗ್ರಾಮೀಣ ಮಟ್ಟದ ಸಂಸ್ಥೆಗಳ ಜೊತೆಗೆ ಕೈಜೋಡಿಸಲಿದೆ ಎಂದು ತಿಳಿಸಿದೆ.
ರಾಷ್ಟ್ರದಾದ್ಯಂತ ಸ್ಥಳೀಯ ಸರಕಾರಗಳ ಜೊತೆ ಕೈಜೋಡಿಸಿ, ಸುಸ್ಥಿರತಾ ರಾಯಭಾರಿಗಳನ್ನು ಸೃಷ್ಟಿಸುವ ಕಾರ್ಯಕ್ರಮದ ಅಂಗವಾಗಿ ಕನಿಷ್ಠ 500 ಶಾಲೆಗಳೊಂದಿಗೆ ಸೆಲ್ಕೋ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮದಲ್ಲಿ 25,000 ಮಹಿಳೆಯರು ಸುಸ್ಥಿರತಾ ರಾಯಭಾರಿಗಳಾಗಿ ರೂಪುಗೊಳ್ಳುವಂತೆ ಮಾಡಲು ಬೇಕಾದ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ಭಾರತವು 2030ರ ವೇಳೆಗೆ ವಿಶ್ವಸಂಸ್ಥೆಯ ಎಎಸ್‍ಡಿಜಿ ಗುರಿಗಳನ್ನು ತಲುಪಲು ಸಹಾಯವಾಗಲಿದೆ.
ಸೆಲ್ಕೋ ಆರಂಭಿಸುವ ಈ ಎರಡು ಕಾರ್ಯಕ್ರಮಗಳು 2025ರ ಹೊತ್ತಿಗೆ 10 ದಶಲಕ್ಷಕ್ಕೂ ಅಧಿಕ ಕುಟುಂಬಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. 2030ರ ಹೊತ್ತಿಗೆ ಈ ಕಾರ್ಯಕ್ರಮದಿಂದ ಕನಿಷ್ಠ 100 ದಶಲಕ್ಷ ಕುಟುಂಬಗಳು ಈ ಸುಸ್ಥಿರತೆಯ ವ್ಯಾಪ್ತಿಯೊಳಗೆ ಬರಲಿವೆ ಎಂದು ಪ್ರಕಟನೆ ತಿಳಿಸಿದೆ.