​ಪೆಟ್ರೋಲ್, ಡೀಸೆಲ್ ಬೆಲೆ 6 ರೂಪಾಯಿ ತುಟ್ಟಿ ?

Update: 2022-03-08 02:19 GMT

ಹೊಸದಿಲ್ಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಮವಾರ ಮುಕ್ತಾಯವಾಗುತ್ತಿದ್ದಂತೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಚಿಂತನೆ ನಡೆಸಿದೆ. ತೈಲ ಮಾರಾಟ ಕಂಪನಿಗಳು ಇಂಧನ ಬೆಲೆಯನ್ನು ಹಂತ ಹಂತವಾಗಿ ಏರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿವೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 139 ಡಾಲರ್ ತಲುಪಿದ್ದು, ಆರಂಭಿಕ ಹಂತದಲ್ಲಿ ಪ್ರತಿ ಲೀಟರ್‌ಗೆ 5-6 ರೂಪಾಯಿ ಹೆಚ್ಚಿಸಲು ಕಂಪನಿಗಳಿಗೆ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಚಿಲ್ಲರೆ ಮಾರಾಟ ಕಂಪನಿಗಳು ಸದ್ಯಕ್ಕೆ ಉಳಿದ ನಷ್ಟವನ್ನು ಅಂದರೆ ಲೀಟರ್‌ಗೆ ಸುಮಾರು 12 ರೂಪಾಯಿಯನ್ನು ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ದಾಸ್ತಾನು ಲಾಭ ಮತ್ತು ಶುದ್ಧೀಕರಣದ ಲಾಭಾಂಶದಿಂದ ಇದನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.

ಆದಾಗ್ಯೂ ತಕ್ಷಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೀಮಾಸುಂಕವನ್ನು ಕಡಿತಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಪ್ರಸ್ತುತ ಮಟ್ಟದಲ್ಲೇ ಧೀರ್ಘಾವಧಿವರೆಗೆ ಕಚ್ಚಾತೈಲದ ಬೆಲೆ ಉಳಿದಲ್ಲಿ ಈ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಮೂಲಗಳು ಹೇಳಿವೆ. ಅಂಥ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನ ಹೊರೆ-ಹಂಚಿಕೆ ಸೂತ್ರದ ಅನ್ವಯ ತೆರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ತೈಲ ಕಂಪನಿಗಳು ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಕಾರಣದಿಂದ ಗ್ರಾಹಕರ ಮೇಲಿನ ಹೊರೆ ಅತ್ಯಲ್ಪ ಎನ್ನಲಾಗಿದೆ.

ದೈನಿಕ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಲು ಮಾರ್ಚ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಗಿ ಸರ್ಕಾರಗಳು ರಚನೆಯಾಗುವವರೆಗೂ ಕಾಯುವಂತೆ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ 83 ಡಾಲರ್ ಇದ್ದ ಅವಧಿಯ ಬಳಿಕ ಅಂದರೆ ನವೆಂಬರ್ 4ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News