ಶೆಲ್‌ ದಾಳಿಗಳ ಮಧ್ಯೆ 2,500 ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ ಮೂಲಕ ಸ್ಥಳಾಂತರಿಸಿದ ಪಾಕಿಸ್ತಾನದ ಮುಅಝ್ಝಂ ಖಾನ್

Update: 2022-03-08 15:23 GMT
Photo: Rediff.com

ಹೊಸದಿಲ್ಲಿ: ಟೀಮ್‌ ಎಸ್‌ಒಎಸ್‌ ಇಂಡಿಯಾದ ಸ್ಥಾಪಕ ನಿತೇಶ್‌ ಸಿಂಗ್‌ ಅವರಿಗೆ ಉಕ್ರೇನಿನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘರ್ಷಮಯ ನೆಲದಿಂದ ಹೊರಕ್ಕೆ ಹೇಗಾದರೂ ದಾಟಿಸಬೇಕೆಂದು ಚಿಂತೆ. ಆದರೆ, ಯುದ್ಧಗ್ರಸ್ತ ಭೂಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರ ಕರೆದುಕೊಂಡು ಬರುವುದು ಸುಲಭದ ಮಾತಾಗಿರಲಿಲ್ಲ. 

ವಿದ್ಯಾರ್ಥಿಗಳನ್ನು ರೊಮಾನಿಯಾ, ಪೊಲೆಂಡ್‌, ಸ್ಲೊವಾಕಿಯಾ ಮೊದಲಾದ ಸುರಕ್ಷಿತ ಸ್ಥಳಗಳಿಗೆ ಕರೆತರಲು ಬೇಕಾದ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇಲ್ಲದ್ದರಿಂದ, ನಿತೇಶ್‌ ಸಿಂಗ್‌, ಟೂರ್‌ ಆಪರೇಟರ್‌ಗಳನ್ನು ಸಂಪರ್ಕಿಸುತ್ತಾರೆ. ಸುರಿಯುತ್ತಿದ್ದ ಮದ್ದುಗುಂಡುಗಳ ನಡುವೆ ಜೀವ ಪಣಕ್ಕಿಡಲು ನಿತೇಶ್‌ ಸಂಪರ್ಕಿಸಿದ ಎಲ್ಲಾ ಆಪರೇಟರುಗಳು ಹಿಂದೇಟು ಹಾಕಿದ್ದಾರೆ. ಈ ವೇಳೆ ಅವರ ಸಹಾಯಕ್ಕೆ ದೊರಕಿದವರೇ ಮುಅಝ್ಝಂ ಖಾನ್. 

ವಿಶೇಷವೆಂದರೆ, ಅವರು ಪಾಕಿಸ್ತಾನಿ ಮೂಲದವರು. ಮುಅಝ್ಝಂ ಖಾನ್‌ ಸಂಪರ್ಕಕ್ಕೆ ಸಿಗುವವರೆಗೆ ಮುಂದೇನು ಎಂಬುದು ಚಿಂತೆಯಾಗಿತ್ತು ಎಂದು ನಿತೇಶ್‌ Rediff.com ಜೊತೆ ಹೇಳಿದ್ದಾರೆ. 

ದೇವರೇ ಕಳುಹಿದಂತೆ  ಮುಅಝ್ಝಂ ಖಾನ್‌ ನಮ್ಮ ತಂಡಕ್ಕೆ ಬಂದು ಸೇರಿದರು. ಅವರು ತುಂಬಾ ಸಹಾಯಕ್ಕೆ ಒದಗಿದರು. ಬಸ್‌  ಪಾವತಿಸಲು ಹಣವಿಲ್ಲದ ಎಷ್ಟೋ ವಿದ್ಯಾರ್ಥಿಗಳ ಶುಲ್ಕವನ್ನು ಅವರು ಮನ್ನಾ ಮಾಡಿದರು, ಯಾವೊಂದು ಶುಲ್ಕವನ್ನು ಪಡೆಯದೇ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು ಎಂದು Rediff.com ನೊಂದಿಗೆ ನಿತೇಶ್ ಹೇಳಿಕೊಂಡಿದ್ದಾರೆ. 

ಉಕ್ರೇನ್‌ನ ವಿವಿಧ ಸ್ಥಳಗಳಲ್ಲಿ ಸಿಲುಕಿರುವ‌ ಸರಿಸುಮಾರು 2,500 ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಮಾರ್ಗವನ್ನು ವ್ಯವಸ್ಥೆಗೊಳಿಸಿದ್ದೇನೆ ಎಂದು ಮೋಝಮ್‌ ತಿಳಿಸಿದ್ದಾರೆ. 
  
"ನಾನು ಮೊದಲ ಬ್ಯಾಚ್ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ದಾಗ, ಬಿಕ್ಕಟ್ಟು ಇಷ್ಟು ದೊಡ್ಡದಾಗಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ, ನನ್ನ ಮೊಬೈಲ್ ಸಂಖ್ಯೆ ಅನೇಕ ಭಾರತೀಯ ವಿದ್ಯಾರ್ಥಿಗಳ ವಾಟ್ಸಪ್‌ ಗ್ರೂಪುಗಳಲ್ಲಿ ಹರಿದಾಡತೊಡಗಿತ್ತು.  ರಕ್ಷಣಾ ಕಾರ್ಯಾಚರಣೆಗಾಗಿ ಮಧ್ಯರಾತ್ರಿಯಲ್ಲಿ ಕೂಡಾ ನಿರಂತರ ಕರೆಗಳು ನನಗೆ ಬರತೊಡಗಿತು. ಇಲ್ಲಿಯವರೆಗೆ, ನಾನು ಸುಮಾರು 2,500 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದೇನೆ” ಎಂದು ಮುಅಝ್ಝಂ Rediff.com ಜೊತೆ ವಿವರ ಹಂಚಿಕೊಂಡಿದ್ದಾರೆ. 
 
ತನ್ನ ಹಿರಿಯ ಸಹೋದರ ಉಕ್ರೇನಿಯನ್‌ ಪ್ರಜೆಯನ್ನು ಮದುವೆಯಾದ ಬಳಿಕ, ಹನ್ನೊಂದು ವರ್ಷಗಳ ಹಿಂದೆ ಮುಅಝ್ಝಂ ಉಕ್ರೇನ್‌ಗೆ ಹೋಗಿದ್ದಾರೆ.  ಉಕ್ರೇನಿನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಕೆಲಸದಲ್ಲಿದ್ದ ಅವರು, ಕೆಲಸ ತೊರೆದು ಟೂರ್‌ ಬಸ್‌ ಆಪರೇಟರ್‌ ಆಗಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದ್ದಾರೆ. 
 
"ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲೇ ನಾನು ಅನೇಕ ಭಾರತೀಯರೊಂದಿಗೆ ಸ್ನೇಹಿತನಾಗಿದ್ದೆ. ಈ 11 ವರ್ಷಗಳಲ್ಲಿ ನಾನು ಟೆರ್ನೋಪಿಲ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಅನೇಕ ಸ್ನೇಹಿತರನ್ನು ಗಳಿಸಿಕೊಂಡಿದ್ದೇನೆ. ಅವರಲ್ಲಿ ಹಲವರು ಉತ್ತೀರ್ಣರಾಗಿ ಭಾರತಕ್ಕೆ ಮರಳಿದ್ದಾರೆ. ಅವರು ಇನ್ನೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಉತ್ತಮ ಸ್ನೇಹಿತರಾಗಿದ್ದೇವೆ." ಎಂದು ಮುಅಝ್ಝಂ ಹೇಳುತ್ತಾರೆ.
 
 ಭಾರತೀಯರು ತನ್ನೊಡನೆ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ನಮಗೆ ಸಾಮಾನ್ಯ ಭಾಷೆ ಹಿಂದಿ ಇರುವುದರಿಂದ ನಮ್ಮ ಸಂವಹನವು ನಮ್ಮನ್ನು ಹೆಚ್ಚು ಸಂಪರ್ಕಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. 

"ಉಕ್ರೇನ್‌ನಲ್ಲಿ ಯಾವುದೇ ವಿದೇಶಿಯರಿಗೆ ಮಾತುಕತೆ ಅತ್ಯಂತ ಕಷ್ಟಕರವಾದ ವಿಚಾರವಾಗಿದೆ. ಇಲ್ಲಿನ ಜನರು ಉಕ್ರೇನಿಯನ್ ಅಥವಾ ಕೆಲವರು ರಷ್ಯನ್ ಮಾತನಾಡುತ್ತಾರೆ. ಇಂಗ್ಲಿಷ್ ತುಂಬಾ ಕಡಿಮೆ ಮಾತನಾಡುತ್ತಾರೆ. ಈ ಸಂಧರ್ಭದಲ್ಲಿ, ನಾನು ಉರ್ದು ಮಾತನಾಡುತ್ತೇನೆ, ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಹಿಂದಿ ಮಾತನಾಡುತ್ತಾರೆ, ಹಿಂದಿ ಮತ್ತು ಉರ್ದು ಬಹುತೇಕ ಒಂದೇ ಆದ್ದರಿಂದ ಇದು ನಮ್ಮನ್ನು ತಕ್ಷಣವೇ ಸಂಪರ್ಕಿಸುತ್ತದೆ. ನಾವು ಚೆನ್ನಾಗಿ ಹೊಂದಿಕೊಳ್ಳುತ್ತೇವೆ ಎಂದು ಭಾರತೀಯರೊಡನೆ ತಮ್ಮ ಸಂಬಂಧವನ್ನು ತಿಳಿಸಿದ್ದಾರೆ. 

ಮುಅಝ್ಝಂ ಇರುವ ಟೆರ್ನೊಪಿಲ್‌ ನಗರದಿಂದ ರೊಮಾನಿಯಾ ಹಾಗೂ ಸ್ಲೊವಾಕಿಯಾ ಗಡಿಗೆ 5 ಗಂಟೆಗಳ ಪ್ರಯಾಣ ಬೇಕಿದ್ದರೆ, ಪೋಲಂಡ್‌ ಗಡಿಗೆ ಎರಡುವರೆ ಗಂಟೆಗಳ ಪ್ರಯಾಣದ ಅಗತ್ಯವಿದೆ. 
 
ತಾನು ಎಷ್ಟು ಬಾರಿ ಬಸ್‌ಗಳನ್ನು ಗಡಿಗಳ ಬಳಿ ತೆಗೆದುಕೊಂಡು ಹೋಗಿದ್ದೇನೆ ಎಂಬುವುದರ ಲೆಕ್ಕವನ್ನೇ ಮರೆತಿದ್ದೇನೆ ಎನ್ನುವ ಮುಅಝ್ಝಂ, ನನಗೆ (ಭಾರತೀಯ ವಿದ್ಯಾರ್ಥಿಗಳ) ಜೀವ ಉಳಿಸುವುದಷ್ಟೇ ಮೊದಲ ಗುರಿಯಾಗಿತ್ತು. ಎಷ್ಟು ಬಾರಿ ದೇಶದ ಗಡಿಗಳ ಕಡೆಗೆ ಯಾತ್ರೆ ಬೆಳೆಸಿದ್ದೇನೆ ಎಂದು ಲೆಕ್ಕ ಇಟ್ಟುಕೊಂಡಿಲ್ಲ. ಒಂದು ವೇಳೆ ಬಸ್‌ ಗಳು ಲಭ್ಯವಿಲ್ಲದಿದ್ದರೆ, ಖಾಸಗಿ ಕಾರುಗಳನ್ನು ಅಥವಾ ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎನ್ನುತ್ತಾರೆ ಅವರು.
 
ನನ್ನ ಮೊದಲ ಆದ್ಯತೆ ಜೀವ ಉಳಿಸುವುದು ಆಗಿತ್ತು. ಅದೃಷ್ಟವಶಾತ್‌, ಹತ್ತಿರದಲ್ಲಿ ದಾಳಿಗಳು ನಡೆಯುತ್ತಿದ್ದರೂ, ನಾವು ಸಾಗಿದ ಪ್ರದೇಶಗಳಲ್ಲಿ ರಷ್ಯನ್ನರು ಬಾಂಬ್‌ ಹಾಕಿಲ್ಲ. ಬಿಕ್ಕಟ್ಟು ಆರಂಭಗೊಂಡು ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉಕ್ರೇನಿನ ಹಲವು ಬಸ್‌ ನಿರ್ವಾಹಕರು ಟಿಕೆಟ್‌ ದರವನ್ನು ಪ್ರತಿ ವಿದ್ಯಾರ್ಥಿಗೆ ತಲಾ 250 ಡಾಲರ್‌ ರಷ್ಟು ನಿಗದಿ ಪಡಿಸಿದರು. ಆದರೆ, ನಾನು ಕೇವಲ 20 ಅಥವಾ 25 ಡಾಲರ್‌ ಮಾತ್ರ ಪಡೆದುಕೊಂಡೆ. ನನಗೆ ಗೊತ್ತಿತ್ತು ಈ ವಿದ್ಯಾರ್ಥಿಗಳಲ್ಲಿ ದುಡ್ಡಿಲ್ಲವೆಂದು. ಕೆಲವೊಬ್ಬರಿಗೆ ಯಾವುದೇ ಶುಲ್ಕವನ್ನೂ ಪಡೆದಿಲ್ಲ. ಅವರ ಪೋಷಕರ ಆಶೀರ್ವಾದಕ್ಕಿಂತ ನನಗೆ ಯಾವುದೂ ದೊಡ್ಡದು ಅನಿಸಿಲ್ಲ. ವಿದ್ಯಾರ್ಥಿಗಳ ಪೋಷಕರು ಕರೆ ಮಾಡಿ ಹಾಗೂ ವಾಟ್ಸಾಪ್‌ ಮೂಲ ಕೃತಜ್ಞತೆ ಅರ್ಪಿಸುತ್ತಿದ್ದಾರೆ, ಅದುವೇ ದೊಡ್ಡದು ಎಂದು ಮುಅಝ್ಝಂ ತಿಳಿಸಿದ್ದಾರೆ. 
 
ಭಾರತ ಹಾಗೂ ಪಾಕಿಸ್ತಾನದ ಇತಿಹಾಸ ಗಮನಿಸಿದರೆ, ನಿಮಗೆ ಭಾರತೀಯ ವಿದ್ಯಾರ್ಥಿಗಳನ್ನು ಸಹಾಯ ಮಾಡುವಾಗ ಏನನ್ನಿಸಿತು ಎಂದು ಕೇಳಿದಾಗ, ʼಇತ್ತೀಚೆಗೆ ಭಾರತದ ಮಹಿಳಾ ಕ್ರಿಕೆಟ್‌ ತಂಡ ಪಾಕಿಸ್ತಾನದ ಆಟಗಾರ್ತಿಯ ಮಗುವಿನೊಂದಿಗೆ ಆಡುವುದು ನೋಡಿರಬಹುದು. ಅದು ಪ್ರೀತಿ ಮತ್ತು ಮನುಷ್ಯತ್ವ. ಶತೃತ್ವವು ರಾಜಕೀಯವಾಗಿದೆ. ಎರಡೂ ದೇಶಗಳ ನಡುವಿನ ಜನರಲ್ಲಿ ಪರಸ್ಪರ ಪ್ರೀತಿ ಇದೆ ಎಂದು ಅವರು ಹೇಳುತ್ತಾರೆ.
 
"ಮನುಷ್ಯರಾದ ನಾವು ಯಾವಾಗಲೂ ಮಾನವ ಸ್ಪರ್ಶವನ್ನು ಬಯಸುತ್ತೇವೆ, ಅದು ನಮಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡುತ್ತದೆ. ಉಕ್ರೇನ್ ತೊರೆಯುವಾಗ   ಭಾರತೀಯ ವಿದ್ಯಾರ್ಥಿಗಳನ್ನು ನಾನು ತಬ್ಬಿಕೊಳ್ಳುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ದೊಡ್ಡ ಕೆಲಸ. ದಯವಿಟ್ಟು ಸಂಕಷ್ಟದಲ್ಲಿರುವ ಇತರ ಮನುಷ್ಯರಿಗೆ 
ಎಲ್ಲರೂ ಹಾಗೆಯೇ ಮಾಡಬೇಕಾಗಿದೆ. ಅದರಲ್ಲೂ ಯುದ್ಧದಂತಹ ಪರಿಸ್ಥಿತಿಯಲ್ಲಿ ಯಾರನ್ನೂ ಕೈಬಿಡಬಾರದು," ಎಂದು ಅವರು ಹೇಳಿದ್ದಾರೆ.

ಇಷ್ಟೆಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಗಡಿ ದಾಟಿಸಿದ ಅವರು ಉಕ್ರೇನ್‌ ತೊರೆಯಲು ಇನ್ನೂ ನಿರ್ಧರಿಸಿಲ್ಲ, ಅವರ ಅರ್ಧಕ್ಕೂ ಹೆಚ್ಚು ಕುಟುಂಬ ಸದಸ್ಯರು ಉಕ್ರೇನಿನಲ್ಲೇ ಇದ್ದಾರೆ. ಅದರಲ್ಲೂ ಯುದ್ಧಗ್ರಸ್ತ ಸುಮಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ, 700 ರಷ್ಟು ಭಾರತೀಯ ವಿದ್ಯಾರ್ಥಿಗಳೂ ಅಲ್ಲಿ ಇನ್ನೂ ಬಾಕಿಯಾಗಿದ್ದಾರೆ. ಅವರೆಲ್ಲರ ರಕ್ಷಣೆಗೆ ಮುಅಝ್ಝಂ ಖಾನ್‌ ಕಾಯುತ್ತಿದ್ದಾರೆ.


ಕೃಪೆ: Rediff.com (ಸೈಯದ್‌ ಫಿರ್ದೌಸ್‌ ಯೂಸುಫ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News