ಮಂಗಳೂರು: ಶಾಲಾ-ಕಾಲೇಜು ಸುತ್ತಮುತ್ತ ಸೆ.144ರನ್ವಯ ನಿಷೇಧಾಜ್ಞೆ ಮುಂದುವರಿಕೆ
ಮಂಗಳೂರು, ಮಾ.9: ಹಿಜಾಬ್ ಮತ್ತು ಕೇಸರಿ ಶಾಲು ಗೊಂದಲದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲಾ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯ ಸುತ್ತಮುತ್ತ ಸೆ.144ರನ್ವಯ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಮಾ.12ರವರೆಗೆ ವಿಸ್ತರಿಸಲಾಗಿದೆ.
ಫೆ.28ರಿಂದ ಮಾ.5ರ ವರೆಗೆ ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇದೀಗ ಮಾ.12ರ ಸಂಜೆ 6ರವರೆಗೆ ವಿಸ್ತರಿಸಿ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಆಗಿರುವ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಪ್ರದೇಶ ಘೋಷಣೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾ.12ರಿಂದ 16ರವರೆಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ನಗರ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿಯಾಗಿರುವ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜು, ಬೆಸೆಂಟ್ ಪಿಯು ಕಾಲೇಜು, ಬಲ್ಮಠ ಮಹಿಳಾ ಪಿಯು ಕಾಲೇಜು, ಕೆನರಾ ಪಿಯು ಕಾಲೇಜು ಹಾಗೂ ರಥಬೀದಿಯ ಸರಕಾರಿ ಪಿಯು ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.