ರಾಜ್ಯ ಸಚಿವ ಸಂಪುಟದಲ್ಲಿ ಒಂದಿಷ್ಟು ಬದಲಾವಣೆ ಸಾಧ್ಯತೆ: ಡಿ.ವಿ.ಸದಾನಂದ ಗೌಡ
ಮಂಗಳೂರು, ಮಾ.10: ಪಂಚರಾಜ್ಯ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಒಂದಿಷ್ಟು ಬದಲಾವಣೆ ಆಗುವ ಸಂಭವವಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆ ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಬದಲಾವಣೆ ಕೇಂದ್ರದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಿರೀಕ್ಷಿತ ಫಲಿತಾಂಶ
ನಿರೀಕ್ಷೆಯಂತೆ ಚುನಾವಣಾ ಫಲಿತಾಂಶ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೆಲಸ ಕಾರ್ಯಗಳು, ಅದನ್ನ ಆಧಾರಿಸಿ ಮತದಾರರ ಭಾವನೆಗಳು ಈ ಚುನಾವಣೆಯಲ್ಲಿ ಬಿಂಬಿತವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಎಂದು ಅಭಿಪ್ರಾಯಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆ ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸದಾನಂದ ಗೌಡ, ಪಂಜಾಬ್ ನಲ್ಲಿ ಭಾರೀ ಅಪಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ. ಇನ್ನುಳಿದ 4 ರಾಜ್ಯಗಳಲ್ಲಿ ನಿರೀಕ್ಷೆಯಂತೆ ಬಿಜೆಪಿ ಫಲಿತಾಂಶ ಬಂದಿದೆ ಎಂದರು.
ಈ ಹಿಂದೆ ಗೂಂಡಾರಾಜ್ ಆಗಿದ್ದ ಉತ್ತರ ಪ್ರದೇಶವನ್ನು ಯೋಗಿ ಅದಿತ್ಯನಾಥ್ ಸಾಮಾನ್ಯ ಜನರ ರಾಜ್ಯವನ್ನಾಗಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶೃದ್ಧಾ ಕೇಂದ್ರಗಳ ಅಭಿವೃದ್ಧಿ ಕಾರ್ಯ ಚುನಾವಣೆಯ ಫಲಿತಾಂಶದಲ್ಲಿ ಬಿಂಬಿತವಾಗುತ್ತಿದೆ. ಈ ಪಂಚ ರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಕರ್ನಾಟಕ ಚುನಾವಣೆ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಲಿದೆ ಎಂದವರು ಹೇಳಿದರು.