ನಾನು ಭಯೋತ್ಪಾದಕನಲ್ಲ, ದೇಶಭಕ್ತ ಎಂದು ಜನ ಸ್ಪಷ್ಟಪಡಿಸಿದ್ದಾರೆ: ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ, ಮಾ. 10: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲುವು ತಂದು ಕೊಡುವ ಮೂಲಕ ಪಂಜಾಬ್ ಜನತೆ ‘‘ಕೇಜ್ರಿವಾಲ್ ಭಯೋತ್ಪಾದಕ ಅಲ್ಲ’’ ಎಂದು ತೀರ್ಪು ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ. ‘‘ಎಲ್ಲ ರಾಜಕೀಯ ಪಕ್ಷಗಳು ಆಪ್ನ ವಿರುದ್ಧ ಸಂಘಟತವಾಗಿದ್ದವು. ಆಪ್ ಅನ್ನು ಸೋಲಿಸುವುದು ಅವರ ಏಕೈಕ ಗುರಿಯಾಗಿತ್ತು. ಅದಕ್ಕಾಗಿ ಆಪ್ ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎಂದು ಹೇಳಲು ಪ್ರತಿಯೊಬ್ಬರೂ ಜೊತೆಗೂಡಿದರು. ಆದರೆ, ಕೇಜ್ರಿವಾಲ್ ನಿಜವಾದ ಮಣ್ಣಿನ ಮಗ, ನಿಜವಾದ ರಾಷ್ಟ್ರ ಭಕ್ತ ಎಂದು ಜನರು ಹೇಳಿದ್ದಾರೆ’’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ಪಕ್ಷ ಅಭೂತಪೂರ್ವ ಜಯ ಗಳಿಸಿದ ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಈ ಜನಾದೇಶದ ಮೂಲಕ ತನ್ನನ್ನು ಸಮರ್ಥಿಸಿಕೊಂಡಂತೆ ಕಂಡು ಬಂತು. ಇದು ಬದಲಾವಣೆಯ ಸಮಯ. ಇದೊಂದು ಕ್ರಾಂತಿ. ಆಪ್ ಗೆ ಸೇರಲು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಆಪ್ ಒಂದು ಪಕ್ಷವಲ್ಲ. ಅದು ಕ್ರಾಂತಿಯ ಹೆಸರು. ಮೊದಲು ದಿಲ್ಲಿಯಲ್ಲಿ, ಅನಂತರ ಪಂಜಾಬ್ ನಲ್ಲಿ ಕ್ರಾಂತಿ ಆಯಿತು. ಇನ್ನು ದೇಶಾದ್ಯಂತ ಕ್ರಾಂತಿಯಾಗಲಿದೆ ಎಂದು ಅವರು ಹೇಳಿದರು.