ಯುದ್ಧದ ಭೀಕರತೆಯ ನಡುವೆ ಮಾಧ್ಯಮಗಳ ಅಮಾನವೀಯತೆ

Update: 2022-03-10 19:30 GMT

ಹಿಂದೆಯೂ, ಇಂದೂ ಯುದ್ಧವೆಂಬುದು ಭೀಕರ ಮಾನವೀಯ ದುರಂತ. ಹಣ, ಅಧಿಕಾರ, ಮದ, ಲಾಲಸೆ ತುಂಬಿದ ಆಳುವ ವರ್ಗಗಳ ತಿಕ್ಕಾಟವೇ ಯುದ್ಧ. ದೇಶಪ್ರೇಮದ ಹೆಸರಿನಲ್ಲಿ ಸಾಯುವವರು, ಗಾಯಗೊಳ್ಳುವವರು, ಎಲ್ಲವನ್ನೂ ಕಳೆದುಕೊಳ್ಳುವ ಜನರು, ನೋವು ನರಳಾಟಗಳು, ಅತ್ಯಾಚಾರ, ಕ್ರೌರ್ಯಗಳು ಸಾಮಾನ್ಯ. ಇಂತಹ ದುರಂತಗಳನ್ನೇ ಸವಿಸವಿದು ಚಪ್ಪರಿಸುತ್ತಾ, ಜನರಿಗೆ ತಮ್ಮ ಮೂಗಿನ ನೇರಕ್ಕೆ ಉಣಬಡಿಸುತ್ತಿರುವ ನಮ್ಮ ಮತ್ತು ಪಾಶ್ಚಾತ್ಯ ಮಾಧ್ಯಮಗಳ ಕುರಿತು ಒಂದಿಷ್ಟು ಸಿಟ್ಟು ಇಲ್ಲಿದೆ.



ನಿಖಿಲ್ ಕೋಲ್ಪೆ

ಹಾರುತ್ತಿರುವ ಗುಂಡುಗಳು, ಚೀರುತ್ತಿರುವ ಸೈರನ್‌ಗಳು, ಎದೆಕೊಯ್ಯುವಂತಹ ವಿಮಾನಗಳ ಚೀತ್ಕಾರ, ಅಪ್ಪಳಿಸುತ್ತಿರುವ ಕ್ಷಿಪಣಿಗಳು, ವಿಮಾನಗಳು ಸುರಿಯುತ್ತಿರುವ ಬಾಂಬುಗಳು, ಸಿಡಿಲನ್ನೂ ಮೀರಿಸಿದ ಸದ್ದಿನೊಂದಿಗೆ ನಿಲ್ಲದ ಭಯಾನಕ ಸ್ಫೋಟಗಳು, ಸಿಮೆಂಟು, ಕಬ್ಬಿಣದ ಚೂರು, ಗಾಜುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾ ಉರುಳುವ ಕಟ್ಟಡಗಳು-ವಾಹನಗಳು. ಹತ್ತಿ ಉರಿಯುತ್ತಿರುವ ಬೆಂಕಿ, ದಟ್ಟ ಕರಿ ಹೊಗೆ, ವಾಕರಿಕೆ ತರುವ ಮದ್ದುಗುಂಡುಗಳ, ಬೆವರಿನ, ರಕ್ತದ ಘಾಟು ವಾಸನೆ, ಬಂಕರುಗಳಲ್ಲಿ ಜೀವ ಕೈಯಲ್ಲಿ ಹಿಡಿದು, ಬೆದರಿದ ಕಣ್ಣುಗಳ ನಡುಗುವ ಮಕ್ಕಳನ್ನು ಎದೆಗವಚಿ ಕಿಕ್ಕಿರಿದು ಕುಳಿತ ಹೆಂಗಸರು, ವೃದ್ಧರು...

ನಂತರ, ಕೆಲ ಸಮಯದ ಮೌನ, ಚೀತ್ಕಾರ, ಹಾಹಾಕಾರ, ಚದುರಿ ಬಿದ್ದ ಹೆಣಗಳು, ಅಳುವ ಮಕ್ಕಳು, ತಮ್ಮವರಿಗಾಗಿ ಹುಡುಕಾಟ, ಗಾಯಗೊಂಡವರ ನರಳಾಟ, ಆಸ್ಪತ್ರೆಗೆ ಸಾಗಿಸುವ ಗಡಿಬಿಡಿ, ಅಳು, ಬಿಕ್ಕಳಿಕೆ, ಸಾಂತ್ವನ, ಹಿಂದೆ ತನ್ನ ಮನೆಯಾಗಿದ್ದ ಕಲ್ಲು, ಮಣ್ಣು, ಬೂದಿಗಳ ರಾಶಿಯನ್ನು ಬೆದಕುತ್ತಾ ಅಳಿದುಳಿದ ಬದುಕನ್ನು ಹುಡುಕುವುದರಲ್ಲಿ ತೊಡಗಿರುವ ನಿರ್ಗತಿಕರು, ಸಿಕ್ಕಿದ್ದನ್ನು ಅವಚಿಕೊಂಡು, ಕತ್ತಲ ಭವಿಷ್ಯದ ಕಡೆಗೆ ಗುಂಪುಗುಂಪಾಗಿ ಜೀವ ಕೈಯಲ್ಲಿ ಹಿಡಿದು ಸಾಗುತ್ತಿರುವ ನಿರಾಶ್ರಿತರು, ಅತ್ಯಾಚಾರ, ಹಿಂಸೆ, ಕ್ರೌರ್ಯ, ಹುಚ್ಚಿಗೆ ಹತ್ತಿರವಾದ ಮಾನಸಿಕ ಸ್ಥಿತಿ, ಅಲ್ಲೋ ಇಲ್ಲೋ ಅಪರೂಪಕ್ಕೆ ಒಸರುವ ಮಾನವೀ ಯತೆಯ ಸೆಲೆ... ಪ್ರತಿಯೊಂದೂ ಆಧುನಿಕ ಯುದ್ಧದ ಸಾಮಾನ್ಯ ಚಿತ್ರಣ.

ಇನ್ನೊಂದು ಕಡೆಯಲ್ಲಿ ಅಧಿಕಾರಸ್ಥರು ರಣಕೇಕೆ ಹಾಕುತ್ತಾ, ಜನರನ್ನು, ಸೈನಿಕರನ್ನು ಹುರಿದುಂಬಿಸುತ್ತಾರೆ. ಸುರಕ್ಷಿತ ಬಂಕರುಗಳಲ್ಲಿ ಕುಳಿತು ಧರಿಸಿದ ಉಡುಪಿಗೆ ಒಂದು ಸುಕ್ಕಿನ ಗೆರೆಯೂ ಬೀಳದಂತೆ ಸಿಂಹಾಸನದ ಮೇಲೆ ಕುಳಿತು ಟಿವಿಗಳ ಮೂಲಕ ವೀರಾವೇಶದಿಂದ ದೇಶಪ್ರೇಮವನ್ನು ಬಡಿದೆಬ್ಬಿಸುವ ಭಾಷಣ ಮಾಡುತ್ತಾರೆ. ಅವರ ಅಷ್ಟು ಸೈನಿಕರನ್ನು ಕೊಂದೆವು, ಅವರ ಇಷ್ಟು ವಿಮಾನಗಳನ್ನು ಹೊಡೆದುರುಳಿಸಿದೆವು... ಇತ್ಯಾದಿಯಾಗಿ ಸಾಧನೆಗಳ ಪಟ್ಟಿ ಒಪ್ಪಿಸುತ್ತಾರೆ; ತಮ್ಮ ಸಾವುನೋವು, ವಿನಾಶಗಳನ್ನು ಮುಚ್ಚಿಡುತ್ತಾರೆ. ಆದರೆ ಸತ್ತ, ನಿರಾಶ್ರಿತರಾದ ನಾಗರಿಕರ ಲೆಕ್ಕ ಸಿಗುವುದು ಮಾತ್ರ ಎಲ್ಲಾ ಮುಗಿದ ಮೇಲೆ. ಅವರ ನೋವು, ಕಣ್ಣೀರಿನ ಲೆಕ್ಕವನ್ನು ಈ ತನಕದ ಇತಿಹಾಸದಲ್ಲಿ ಯಾರೂ ಇಟ್ಟಿಲ್ಲ. ಅದಕ್ಕೆ ಕರಿಯ, ಬಿಳಿಯ, ಹಳದಿ, ಕೆಂಚು, ಕಂದು ಚರ್ಮಗಳ, ಧರ್ಮ, ಅಂತಸ್ತು ಇತ್ಯಾದಿಗಳ ಭೇದವಿಲ್ಲ. ‘‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ ಕ್ಷೋಣಿಯಾಡುವ ಮಾತಂ ದಿಟ ಮಾಳ್ಪಂತೆ...’’ ಕೋಣಗಳ ಕಾದಾಟದಲ್ಲಿ ಅಪ್ಪಚ್ಚಿಯಾಗುವುದು ಬಡ ಗಿಡಗಂಟಿ, ಹುಲ್ಲುಗಳೇ. ಬಂಡವಾಳವಾದಿ, ಸಾಮ್ರಾಜ್ಯವಾದಿಗಳಾದ ಯುಎಸ್‌ಎ ನೇತೃತ್ವದ ಪಾಶ್ಚಾತ್ಯರು ಮತ್ತು ರಶ್ಯ ನಡುವಿನ ಯುದ್ಧದಲ್ಲಿ ಅಪ್ಪಚ್ಚಿಯಾಗುತ್ತಿರುವುದು ಉಕ್ರೇನಿನ ಸಾಮಾನ್ಯ ಜನರು. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಕರ್ತವ್ಯ ಏನಾಗಿತ್ತು? ನಡೆಯುತ್ತಿರುವುದನ್ನು ಯಥಾವತ್ತಾಗಿ ಜನರ ಮುಂದಿಡುವುದು ಮತ್ತು ಯುದ್ಧದ ಭೀಕರತೆಯನ್ನು, ನಿರರ್ಥಕತೆಯನ್ನು ಅವರಿಗೆ ಮನವರಿಕೆ ಮಾಡುವುದು, ಶಾಂತಿಗಾಗಿ ಒತ್ತಡ ರೂಪಿಸುವುದು. ಆದರೆ, ನಮ್ಮ ಮಾಧ್ಯಮಗಳು ಮಾಡುತ್ತಿರುವುದೇನು? ಯುದ್ಧವೆಂದರೆ ವೀಡಿಯೊ ಗೇಮ್ ಎಂಬಂತೆ ಚಪ್ಪರಿಸುತ್ತಾ, ಸಂಭ್ರಮಿಸುತ್ತಾ ಮೃಷ್ಟಾನ್ನ ಭೋಜನವೆಂಬಂತೆ ಜನರಿಗೆ ಉಣಬಡಿಸುತ್ತಾ, ತಮ್ಮ ಓದುಗರ ಸಂಖ್ಯೆ ಮತ್ತು ಟಿಆರ್‌ಪಿಯನ್ನು ಹೆಚ್ಚಿಸುವುದು.

‘‘ಯುದ್ಧಸ್ಯ ವಾರ್ತಾ: ರಮ್ಯಂ’’ ಎಂದರೆ ಯುದ್ಧ ವಾರ್ತೆಗಳು ರಮ್ಯವಾಗಿರುತ್ತವೆ ಎಂಬ ಹಳೆಯ ಮಾತಿದೆ. ಯುದ್ಧ ಸುದ್ದಿ ಮಾರಾಟಕ್ಕೆ ಇದೇ ಮೂಲ. ಮಹಾಭಾರತ ಕಾಲದಿಂದಲೂ ಭಾರತದಲ್ಲಿ ಟಿ.ವಿ., ಇಂಟರ್ನೆಟ್ ಇತ್ತು ಎಂದು ಬೊಗಳೆ ಬಿಡುವ ನಮ್ಮ ಪ್ರಸ್ತುತ ಆಡಳಿತಗಾರರು ಮತ್ತು ಅವರಿಗೆ ಮಾರಿಕೊಂಡ ಮಾಧ್ಯಮದವರು- ಮಹಾಭಾರತ ಯುದ್ಧವನ್ನು ಕುರುಡ ರಾಜ ಧೃತರಾಷ್ಟ್ರನಿಗೆ ಅವನ ಪಕ್ಕದಲ್ಲೇ ಕುಳಿತುಕೊಂಡು ವರ್ಣಿಸಿದ ಸಂಜಯನ ವರದಿಗಾರಿಕೆಯನ್ನೇ, ಅಥವಾ ರಾಮಾಯಣದ ಯುದ್ಧಕಾಂಡವನ್ನೇ ಮಾದರಿಯಾಗಿ ತೆಗೆದುಕೊಂಡಂತಿದೆ. ಅಲ್ಲಿ ರಾಜಾನುರಾಜರು, ಘಟಾನುಘಟಿ ವೀರರ ಶೌರ್ಯ, ಅವರು ಹರಿಸಿದ ರಕ್ತ, ಹೆಣಗಳ ರಾಶಿ, ಅವರ ವಿಜಯ ಅಥವಾ ವೀರೋಚಿತ ಸ್ವರ್ಗಗಳ ವರ್ಣನೆ, ಗುಣಗಾನ ಇದೆಯೇ ಹೊರತು, ರಣಭೂಮಿಯಲ್ಲಿ ಸತ್ತುಕೊಳೆತ ಕಪಿಗಳ, ರಾಕ್ಷಸರ, ಅಕ್ಷೋಹಿಣಿಗಟ್ಟಲೆ ಸೈನಿಕರ, ವಿಧವೆಯರಾದ ಅವರ ಪತ್ನಿಯರ, ಅನಾಥರಾದ ಮಕ್ಕಳ ವರ್ಣನೆಯಿಲ್ಲ.

ಕೊರೋನ ಪೀಡಿತವಾಗಿ ದಿನಬೆಳಗಾದರೆ ಆದನ್ನೇ ಜಗಿಯುತ್ತಿದ್ದ ನಮ್ಮ ಟಿವಿ ಚಾನೆಲ್‌ಗಳು, ನಂತರ ಹಿಜಾಬಿನ ಜ್ವರ ಹಿಡಿಸಿಕೊಂಡು, ತಮ್ಮ ವಾಕರಿಕೆ ಬರಿಸುವ ಕುತರ್ಕಗಳಿಂದಲೇ ಜನರನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಾ ವಿಷ ಹರಡುತ್ತಿರುವಾಗಲೇ, ಯುದ್ಧದ ಸಾಧ್ಯತೆಯೇ ಅವುಗಳಿಗೆ ರೋಮಾಂಚನ ಹುಟ್ಟಿಸಿರಬೇಕು. ಪರಮಾಣು ಅಸ್ತ್ರಗಳನ್ನು ಒಳಗೊಂಡ ಮಹಾಯುದ್ಧದ ಸಾಧ್ಯತೆಯನ್ನು ಹೊಟ್ಟೆಯೊಳಗೆ ಇಟ್ಟುಕೊಂಡ ರಶ್ಯ-ಉಕ್ರೇನ್ ಯುದ್ಧ ಆರಂಭಗೊಂಡಾಗ ಟಿವಿ ಚಾನೆಲೊಂದು ನೀಡಿದ ತಲೆಬರಹವೇ ಇವುಗಳ ಕೊಳಕು ಮನಸ್ಥಿತಿಯನ್ನು ಬಯಲು ಮಾಡುತ್ತದೆ: ‘‘ಉಕ್ರೇನ್ ಮೇಲೆ ರಶ್ಯದ ಬಾಂಬ್ ದಾಳಿ ರೋಮಾಂಚಕವಾಗಿದೆ’’.

ಯುದ್ಧವನ್ನು ಸಂಭ್ರಮಿಸುತ್ತಾ, ಅವರ ಬಳಿ ಆ ಆಸ್ತ್ರ ಇದೆ, ಇವರ ಬಳಿ ಈ ಅಸ್ತ್ರ ಇದೆ. ಅದನ್ನು ಪ್ರಯೋಗಿಸಿದರೆ ಇಷ್ಟು ಜನರು ನಾಶವಾಗುತ್ತಾರೆ ಎಂದು ಅತ್ಯುತ್ಸಾಹದಿಂದ ವರ್ಣಿಸುತ್ತಾ, ಈ ಮಾಧ್ಯಮಗಳು ಮಾವೀಯತೆಯನ್ನೇ ಟಿಆರ್‌ಪಿಗಾಗಿ ಅಡವಿಟ್ಟವು. ಬಹುತೇಕ ಮುದ್ರಣ ಮಾಧ್ಯಮಗಳೂ ಬಹಳ ಹಿಂದೆ ಉಳಿಯಲಿಲ್ಲ. ಇವೆಲ್ಲವೂ ಯುದ್ಧ ಇನ್ನಷ್ಟು ಕಾಲ ಮುಂದುವರಿಯಲಿ ಎಂಬ ಲಾಲಸೆ ಹೊಂದಿರುವಂತಿತ್ತು.

ಭಾರತೀಯರ ಮಟ್ಟಿಗೆ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿದ್ದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕಿತ್ತು. ಇದನ್ನು ಹುಸಿ ದೇಶಪ್ರೇಮವನ್ನು ಬಡಿದೆಬ್ಬಿಸಿ, ಪ್ರಚಾರ ಮತ್ತು ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತಗಳಿಕೆಗೆ ಬಳಸಿಕೊಳ್ಳುವ ಉದ್ದೇಶದಿಂದಲೇ ಆರಂಭಿಸಿದಂತಿದ್ದ ‘ಆಪರೇಶನ್ ಗಂಗಾ’ (ಹೆಸರೇ ಎಲ್ಲವನ್ನೂ ತಿಳಿಸುತ್ತದೆ.) ಆರಂಭಿಸಿದಾಗ ಮಾಧ್ಯಮಗಳು ತಮ್ಮ ಭರ್ಜರಿ ಆರ್ಕೆಸ್ಟ್ರಾ ಆರಂಭಿಸಿದವು. ಮೋದಿ ಹಾಗೆ, ಹೀಗೆ, ಕ್ಷಣಮಾತ್ರದಲ್ಲಿ ಯುದ್ಧ ನಿಲ್ಲಿಸುತ್ತಾರೆ ಎಂಬ ‘ವಿಶ್ವಗುರು’ ಅಮಲಿನ ಸುದ್ದಿಗಳೇ!

ಇದನ್ನು ಚುನಾವಣೆ ಮುಗಿಯುವ ತನಕ ಎಳೆಯಲು ಬಯಸಿದ್ದ ಸರಕಾರದ ಹುನ್ನಾರಕ್ಕೆ ತ್ವರಿತ ಬೆಳವಣಿಗೆಗಳಿಂದ ಪೆಟ್ಟು ಬಿದ್ದು, ಪರಿಸ್ಥಿತಿ ಬಿಗಡಾಯಿಸಿದಾಗ ಕೂಡಾ ಮಾಧ್ಯಮಗಳು ಸರಕಾರಿ ಪಾಂಚಜನ್ಯವನ್ನು ಊದಿದವು. ಹಾಗೋ ಹೀಗೋ ಬಸವಳಿದ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ನಿಷ್ಕ್ರಿಯತೆಯನ್ನೂ, ತಮ್ಮ ಸಂಕಷ್ಟಗಳನ್ನು ಎಳೆಎಳೆಯಾಗಿ ತೋಡಿಕೊಂಡಾಗ ಅವರ ಪರವಾಗಿ ನಿಲ್ಲಬೇಕಾಗಿದ್ದ ಈ ಮಾಧ್ಯಮಗಳು, ಅವರ ವಿರುದ್ಧವೇ ತೋಳಗಳಂತೆ ಮುಗಿಬಿದ್ದು, ಅವರಿಗೇ ದೇಶದ್ರೋಹಿಗಳ ಪಟ್ಟ ನೀಡಿ ಹಿಂಸಿಸಿದವು. ಪರಿಸ್ಥಿತಿ ಕೆಡುತ್ತಿದ್ದಂತೆ ವಿದ್ಯಾರ್ಥಿಗಳ ಅಸಮಾಧಾನ ಬಹಿರಂಗವಾಗಿ ಹರಿಯುತ್ತಿದ್ದಂತೆಯೇ, ಈ ವಿದ್ಯಾರ್ಥಿಗಳು ಅಲ್ಲಿಗೆ ಹೋದದ್ದು ಯಾಕೆ, ಅವರು ಅರ್ಹತೆ ಇಲ್ಲದವರು, ಅಷ್ಟು ಖರ್ಚು ಮಾಡಿ ಅಲ್ಲಿಗೆ ಹೋದವರು ಸರಕಾರವನ್ನು ಅವಲಂಬಿಸುವುದು ಏಕೆ, ಮೀಸಲಾತಿಯ ಕಾರಣದಿಂದಲೇ ಅವರು ಅಲ್ಲಿಗೆ ಹೋಗಬೇಕಾಯಿತು... ಇತ್ಯಾದಿಯಾಗಿ ಪ್ರಹ್ಲಾದ ಜೋಷಿಯಂತಹ ಕೇಂದ್ರ ಮಂತ್ರಿಗಳು ಮತ್ತು ಮೋದಿಯ ಕುರುಡು ಅಭಿಮಾನಿಗಳ ಕೀಳುಮಟ್ಟದ, ಅಸಂಬದ್ಧ, ಬೇಜವಾಬ್ದಾರಿ ಬಡಬಡಿಕೆಗಳಿಗೇ ಪ್ರಚಾರ ನೀಡಿ, ಅಂತಹ ಸುಳ್ಳು ಕಥಾನಕಗಳನ್ನೇ ಆರಂಭಿಸಿದವು. ಭಾರತದಲ್ಲಿ ನೀಟ್‌ನಿಂದಾಗಿ ಅರ್ಹತೆ ಪಡೆಯದೆ ಹೋಗುವ ಪ್ರತಿಭಾವಂತರು ಎಷ್ಟು, ಬಡವರು ಎಷ್ಟು, ಲಭ್ಯವಿರುವ ಸೀಟುಗಳು ಎಷ್ಟು, ಕೊಡಬೇಕಾದ ಡೊನೇಷನ್ ಮತ್ತು ವೆಚ್ಚಗಳೆಷ್ಟು, ಉಕ್ರೇನಿನಲ್ಲಿ ವೆಚ್ಚವೆಷ್ಟು, ಇವೆಲ್ಲವುಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡವರೆಷ್ಟು ಎಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗದೆ, ಇದಕ್ಕೆಲ್ಲಾ ಹಿಂದಿನ ಸರಕಾರ ಕಾರಣ ಎಂಬ ಮೋದಿರಾಗಕ್ಕೆ ಪಕ್ಕವಾದ್ಯ ನುಡಿಸಿದವು. ಸರಕಾರದ ವಿರುದ್ಧ ಮಾತನಾಡಿದ ಎಳೆಯ ಹುಡುಗ ಅನೀಶ್ ಭಾರದ್ವಾಜನನ್ನೇ ಮುಸ್ಲಿಮ್ ದೇಶದ್ರೋಹಿ ಎಂದು ಬಿಂಬಿಸಿ, ಆತನನ್ನು ಖಿನ್ನತೆಗೆ ದೂಡಿದ ವಿದ್ಯಮಾನ ಇದಕ್ಕೊಂದು ಕ್ರೂರ ಉದಾರಣೆಯಷ್ಟೇ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಪಟ ಸುಳ್ಳುಗಳನ್ನೂ, ನಿಂದನೆಗಳನ್ನೂ ಹರಡುವ ಬಿಜೆಪಿಯ ಐಟಿ ಸೆಲ್ಲುಗಳಿಗಿಂತಲೂ ನಮ್ಮ ಮಾಧ್ಯಮಗಳು ಕೆಳಗೆ ಇಳಿದವು.

ಈ ಹಿನ್ನೆಲೆಯಲ್ಲಿ ರಶ್ಯ ಮತ್ತು ಕೆಲವು ಪಾಶ್ಚಾತ್ಯ ಮಾಧ್ಯಮಗಳು ಹೇಗೆ ವರ್ತಿಸಿದವು ಎಂಬುದನ್ನೂ ಚುಟುಕಾಗಿ ನೋಡೋಣ. ರಶ್ಯದಲ್ಲಿ ಮೊದಲೇ ಮಾಧ್ಯಮಗಳಿಗೆ ನಿರ್ಬಂಧವಿದ್ದು, ಸರಕಾರಿ ಮಾಧ್ಯಮಗಳೇ ಪ್ರಾಬಲ್ಯ ಹೊಂದಿರುವುದರಿಂದ, ಭಾರತದ ಮಾಧ್ಯಮಗಳಂತೆ ಸುಳ್ಳುಗಳನ್ನೇ ಹೇಳುತ್ತಿವೆ. ಅಲ್ಲಿ ಅಧಿಕಾರದ ನಿಯಂತ್ರಣ ಇದ್ದರೆ, ಇಲ್ಲಿ ಹಣದ ನಿಯಂತ್ರಣ ಇರುವುದಷ್ಟೇ ವ್ಯತ್ಯಾಸ. ಆದರೂ, ಭಾರತದಂತೆಯೇ ನೂರಾರು ಪತ್ರಕರ್ತರು ಜೈಲು ಶಿಕ್ಷೆಯ ಭಯದ ಎದುರೂ ಯುದ್ಧವಿರೋಧಿ ದನಿಯೆತ್ತಿದ್ದಾರೆ. ಒಂದು ಟಿವಿ ಚಾನೆಲ್‌ನ ಸಿಬ್ಬಂದಿ ಕ್ಯಾಮರಾ ಎದುರು ಬಂದು, ಲೈವಾಗಿ ಸಾಮೂಹಿಕ ರಾಜೀನಾಮೆ ನೀಡಿದ ಘಟನೆಯೂ ನಡೆದಿದೆ. ಇಂತಹವರ ದಮನಕ್ಕಾಗಿಯೇ ಮಿಲಿಟರಿಯನ್ನು ಟೀಕಿಸಿದರೆ ಜೈಲಿಗೆ ತಳ್ಳುವ ‘ಸುಳ್ಳುಸುದ್ದಿ’ ವಿರೋಧಿ ಕಾನೂನನ್ನು ಅಲ್ಲಿನ ಸರ್ವಾಧಿಕಾರಿ ಸರಕಾರ ಹೊಸದಾಗಿ ತಂದಿದೆ.

ಸ್ವತಂತ್ರ ಎಂದು ಹೇಳಿಕೊಳ್ಳುವ ಬಹುತೇಕ ಪಾಶ್ಚಾತ್ಯ ಮಾಧ್ಯಮಗಳು ಸಹಜವಾಗಿಯೇ ಪಾಶ್ಚಾತ್ಯ ಪರವಾಗಿದ್ದರೂ, ಒಂದು ಮಟ್ಟದಲ್ಲಿ ಸಾಕಷ್ಟು ಸಮತೋಲನದಿಂದಲೇ ವರ್ತಿಸುತ್ತಿವೆ. ಆದರೆ, ಅಲ್ಲಿಯೂ ಬಲಪಂಥೀಯರು, ಜನಾಂಗೀಯವಾದಿಗಳು ಮತ್ತು ನವ ನಾಝಿಗಳು ಪ್ರಬಲವಾಗಿ ತಲೆ ಎತ್ತುತ್ತಿದ್ದಾರೆ. ಉಕ್ರೇನ್ ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿಯೇ ಜಗತ್ತಿನಲ್ಲಿ, ಮುಖ್ಯವಾಗಿ ಆಫ್ರಿಕಾದಲ್ಲಿ ಹಲವಾರು ಚಿಕ್ಕ ದೊಡ್ಡ ಯುದ್ಧಗಳು ನಡೆಯುತ್ತಿದ್ದು, ನಿತ್ಯವೆಂಬಂತೆ ನೂರಾರು ಜನರು ವರ್ಷಗಳಿಂದ ಸಾಯುತ್ತಿದ್ದಾರೆ. ನಮ್ಮ ಮಾಧ್ಯಮಗಳಂತೂ ಆ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಪಾಶ್ಚಾತ್ಯರು ಒಳಗೊಂಡ ಯುದ್ಧಗಳಿಗೆ ಮಾತ್ರ ಪ್ರಾಶಸ್ತ್ಯ. ಈ ಯುದ್ಧದ ಸಮಯದಲ್ಲಿ ಪಾಶ್ಚಾತ್ಯ ಮಾಧ್ಯಮಗಳಲ್ಲಿ ಜನಾಂಗೀಯ ಮನಸ್ಥಿತಿಯನ್ನು ತೋರಿಸುವ ಒಂದೆರಡು ಉದಾರಣೆಗಳನ್ನಷ್ಟೇ ಇಲ್ಲಿ ನೀಡಬಹುದು.

ಸಿಬಿಎಸ್ ಚಾನಲ್‌ನ ವರದಿಗಾರ ಚಾರ್ಲಿ ಡಿ’ಅಗಾಟ ಕೀವ್‌ನಿಂದ ವರದಿ ಮಾಡುತ್ತಾ ಹೇಳುತ್ತಾರೆ: ‘‘ಇದು ಇರಾಕ್, ಅಫ್ಘಾನಿಸ್ತಾನದಂತೆ ಅಲ್ಲ. ಇದು ಹೋಲಿಕೆಯಲ್ಲಿ ಹೆಚ್ಚು ನಾಗರಿಕವಾದ ಐರೋಪ್ಯ ನಗರ.’’ ಅಂದರೆ, ಬಿಳಿಯಲ್ಲದವರು ಅನಾಗರಿಕರು ಎಂದು ಈತ ಹೇಳುತ್ತಿದ್ದಾರೆಯೆ?
ಅರಬ್ ಮತ್ತು ಮೂರನೇ ಜಗತ್ತಿನ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುವ ಖತರ್ ಮೂಲದ ‘ಅಲ್ ಜಝೀರ’ದ ಪೀಟರ್ ಡೋಬಲ್ ಹೇಳಿದ್ದು ಇದು: ‘‘ಗಮನ ಸೆಳೆಯುವುದು ಏನೆಂದರೆ, ಅವರು ಡ್ರೆಸ್ ಮಾಡಿದ ರೀತಿ ನೋಡಿ. ಅವರು ಅನುಕೂಲವಂತ ಮಧ್ಯಮವರ್ಗದ ಜನರು. ಇವರು ದೊಡ್ಡ ಯುದ್ಧ ಇನ್ನೂ ನಡೆಯುತ್ತಿರುವ ಪಶ್ಚಿಮ ಏಶ್ಯದಿಂದಲಾಗಲೀ, ಉತ್ತರ ಆಫ್ರಿಕಾದಿಂದಲಾಗಲೀ ಓಡಿಹೋಗಲು ಯತ್ನಿಸುತ್ತಿರುವ ನಿರ್ಗತಿಕ ನಿರಾಶ್ರಿತರಲ್ಲ. ಇವರು ನೀವು ನೆರೆಹೊರೆಯವರಾಗಿ ವಾಸಿಸಲು ಬಯಸುವ ಯುರೋಪಿಯನ್ ಕುಟುಂಬಗಳಂತೆಯೇ ಕಾಣುತ್ತಾರೆ. ಅಂದರೆ, ಈ ಯುರೋಪಿಯನ್ ಮಧ್ಯಮ ವರ್ಗದವರ ನೋವಿಗಿಂತ ಅರಬ್, ಆಫ್ರಿಕನ್ ನಿರ್ಗತಿಕರ ನೋವು ಚಿಕ್ಕದಾದುದೆ?’’ ಈ ಹೇಳಿಕೆ ಕಟುಟೀಕೆಗೆ ಗುರಿಯಾದ ಬಳಿಕ, ‘‘ಅಲ್ ಜಝೀರ’ ನಿಶ್ಶರ್ಥ ಕ್ಷಮೆ ಕೇಳಿದೆ.

ಸಾಕಷ್ಟು ಗೌರವ ಇರುವ ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಪತ್ರಕರ್ತ ಡೇನಿಯಲ್ ಹನ್ನನ್ ಬರೆದದ್ದು ಇದು: ‘‘ಅವರು ನಮ್ಮಂತೆಯೇ ಕಾಣುತ್ತಾರೆ. ಯುದ್ಧವೆಂದರೆ ಇನ್ನು ದೂರದೂರ ದೇಶಗಳ ಬಡಜನರನ್ನು ಭೇಟಿ ಮಾಡುವ ವಿಷಯವಾಗಿ ಉಳಿದಿಲ್ಲ. ಇದು ಯಾರಿಗೂ ಸಂಭವಿಸಬಹುದು. ಇವರು ನಮ್ಮಂತೆ ನೀಲಿ ಕಣ್ಣುಗಳ, ಬ್ಲಾಂಡ್ ಕೂದಲಿನ ಜನರು, ಬಡ ದೇಶಗಳಂತೆ ಇದು ವರ್ಷಗಳಿಂದ ನಡೆಯುತ್ತಿರುವ ಯುದ್ಧವಲ್ಲ. ಯುರೋಪಿಯನ್ನರಿಗೇ ಹೀಗಾಗಲು ಸಾಧ್ಯವೆ?’’ ಇತ್ಯಾದಿ ನುಡಿಮುತ್ತುಗಳ ಹಲವಾರು ಉದಾರಣೆಗಳನ್ನು ನೀಡಬಹುದು.

ಪತ್ರಕರ್ತರು ಈ ರೀತಿಯಲ್ಲಿ ಯುದ್ಧ ಸಂತ್ರಸ್ತರಲ್ಲಿ ಆರ್ಥಿಕ ಸ್ಥಿತಿ, ಜನಾಂಗ, ದೇಶಗಳ ಹಿಂದುಳಿದಿರುವಿಕೆಯ ಆಧಾರದ ಮೇಲೆ ತಾರತಮ್ಯ ಮಾಡುವುದು; ಸಿರಿಯಾ, ಇರಾಕ್, ಅಫ್ಘಾನಿಸ್ಥಾನ, ಮ್ಯಾನ್ಮಾರ್, ಸುಡಾನ್, ನೈಜೀರಿಯಾ, ನೈಜರ್, ಗ್ರೆನೆಡಾ, ಕೊಲಂಬಿಯಾ ಮುಂತಾದ ದೇಶಗಳ ಜನರ ಜೀವ, ಜೀವನ ಬಿಳಿಯರಿಗಿಂತ ಕಡಿಮೆ, ನಗಣ್ಯ ಎಂದು ಸೂಚಿಸುವುದು- ಅಮಾನವೀಯವಷ್ಟೇ ಅಲ್ಲ; ಮಾಧ್ಯಮ ವೃತ್ತಿಗೇ ಕಳಂಕ. ಅರಬ್ ಮತ್ತು ಪಶ್ಚಿಮ ಏಶ್ಯ ಪತ್ರಕರ್ತ ಸಂಘ, ಯುಎಸ್‌ಎ, ಯುರೋಪ್ ಪತ್ರಕರ್ತರ ಸಂಘಗಳು ಇಂತಹ ಜನಾಂಗೀಯವಾದವನ್ನು ವಿರೋಧಿಸುತ್ತಿದ್ದರೆ, ಭಾರತದ ಬಹುತೇಕ ಬ್ರಾಹ್ಮಣ್ಯದ, ಕಾರ್ಪೊರೇಟ್ ವಶದಲ್ಲಿರುವ ಮಾಧ್ಯಮಗಳು ತಮ್ಮದೇ ಬ್ರಾಂಡಿನ ಜನಾಂಗೀಯವಾದವನ್ನು ಬಹುಜನರಿಗೆ ಮಂಕುಬೂದಿ ಎರಚುವುದರ ಮೂಲಕ ಗಟ್ಟಿಗೊಳಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News