"ಪಂಜಾಬ್ ಜನತೆ ಉತ್ಕೃಷ್ಟ ನಿರ್ಧಾರ ಕೈಗೊಂಡಿದ್ದಾರೆ": ಅಪ್ ಗೆಲುವಿಗೆ ಕೈ ನಾಯಕ ಸಿಧು ಪ್ರತಿಕ್ರಿಯೆ !

Update: 2022-03-11 16:55 GMT

 ಚಂಡೀಗಢ,ಮಾ.11: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಎದುರು ತನ್ನ ಪಕ್ಷ ಘೋರ ಪರಾಭವವನ್ನು ಅನುಭವಿಸಿದ ಬಳಿಕ, ಶುಕ್ರವಾರ ಪ್ರಥಮ ಬಾರಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನೂತನ ವ್ಯವಸ್ಥೆಯ ಉದಯಕ್ಕೆ ನಾಂದಿ ಹಾಡುವಂತಹ ಉತ್ಕೃಷ್ಟ ನಿರ್ಧಾರವನ್ನು ಕೈಗೊಂಡಿರುವ ಪಂಜಾಬ್ ನ ಜನತೆಯನ್ನು ತಾನು ಅಭಿನಂದಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಈ ಮಾತನ್ನು ನೀವು ಹೇಗೆ ಹೇಳಲು ಸಾಧ್ಯವೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಜನತೆಯ ಧ್ವನಿಯೇ ದೇವರ ಧ್ವನಿಯಾಗಿದೆ. ನಾವು ಅದನ್ನು ವಿನಮ್ರವಾಗಿ ಅರಿತುಕೊಳ್ಳಬೇಕಾಗಿದೆ ಹಾಗೂ ಅದಕ್ಕೆ ತಲೆಬಾಗಬೇಕಾಗಿದೆ’’ ಎಂದರು.

ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷದ ದಯನೀಯ ಸೋಲಿನ ಬಗ್ಗೆ ಯಾವುದೇ ಬೇಸರ ತೋರ್ಪಡಿಸದ ಸಿಧು, ಪಂಜಾಬ್ ನ ಏಳಿಗೆಯೇ ತನ್ನ ಧ್ಯೇಯವಾಗಿದ್ದು, ತಾನು ಅದರಿಂ    ಯಾವತ್ತೂ ದೂರ ಹೋಗಿಲ್ಲ ಹಾಗೂ ಹೋಗುವುದೂ ಇಲ್ಲ ಎಂದರು. ‘‘ಯೋಗಿಯು ಧರ್ಮಯುದ್ಧವನ್ನು ನಡೆಸುವಾಗ ಆತ ಎಲ್ಲ ಬಗೆಯ ಬಂಧನಗಳಿಂದ ದೂರವಾಗುತ್ತಾನೆ ಹಾಗೂ ಎಲ್ಲ ಕಟ್ಟುಪಾಡುಗಳಿಂದ ಮುಕ್ತನಾಗಿರುತ್ತಾನೆ. ಅವರು ಸಾವಿಗೂ ಹೆದರುವುದಿಲ್ಲ. ನಾನು ಪಂಜಾಬ್ನಲ್ಲಿಯೇ ಇರುತ್ತೇನೆ ಹಾಗೂ ಮುಂದೆಯೂ ಇರುತ್ತೇನೆ. ಓರ್ವ ವ್ಯಕ್ತಿ ಉನ್ನತವಾದ ಧ್ಯೇಯವನ್ನು ಹೊಂದಿದ್ದು ಹಾಗೂ ಆತ ಪಂಜಾಬನ್ನು ಅತೀವವಾಗಿ ಪ್ರೀತಿಸುತ್ತಿದ್ದರೆ ಆತ ಸೋಲು ಅಥವಾ ಗೆಲುವಿನ ಬಗ್ಗೆ ಚಿಂತಿಸಲಾರ’’ ಎಂದು ಸಿಧು ಹೇಳಿದರು.

‘‘ಪಂಜಾಬ್ ಜನತೆಯ ಜೊತೆಗಿನ ನನ್ನ ನಂಟು ಸೀಮಿತವಾದುದಲ್ಲ. ಅದು ಅಧ್ಯಾತ್ಮಿಕವಾಗಿದ್ದು ಮತ್ತು ಹೃತ್ಫೂರ್ವಕವಾದುದಾಗಿದೆ. ಜನತೆಯ ಜೊತೆಗಿನ ನನ್ನ ಬಾಂಧವ್ಯವು ಕೇವಲ ಗೆಲುವು ಅಥವಾ ಸೋಲಿಗೆ ಸೀಮಿತವಾಗಿಲ್ಲ. ಪಂಜಾಬ್ನ ಜನತೆಯಲ್ಲಿ ನಾನು ದೇವರನ್ನು ಕಾಣುತ್ತೇನೆ ಮತ್ತು ಅವರ ಕಲ್ಯಾಣದಲ್ಲಿ ನನ್ನ ಹಿತವನ್ನು ಕಾಣುತ್ತೇನೆ’’ ಎಂದು ಸಿಧು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜೀವನ್ಜೋತ್ ಕೌರ್ ಅವರು 6 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಸಿಧು ಅವರಿಗೆ 32,929 ಮತಗಳು ಹಾಗೂ ಕೌರ್ಗೆ 39520 ಮತಗಳು ದೊರೆತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News