ದೇಹವೇ ದೇಗುಲ ಎಂಬ ವೈಚಾರಿಕತೆಯನ್ನು ಜನರಿಗೆ ತಿಳಿಸೋಣ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಮಾ. 13: ‘ದೇಹವೇ ದೇಗುಲ ಎಂಬ ಜಗತ್ತಿನ ಅತ್ಯಂತ ದೊಡ್ಡ ವೈಚಾರಿಕ ಸಂದೇಶವನ್ನು ಕೊಟ್ಟಿದ್ದು, ನಮ್ಮ ಕನ್ನಡ. ಈ ವಿವೇಕವನ್ನು ಜನ ಸಾಮಾನ್ಯರಿಗೆ ತಿಳಿಸೋಣ’ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ನಗರದ ಕಸಾಪ ಸಭಾಂಗಣದಲ್ಲಿ ‘ದ್ವಾರನಕುಂಟೆ ಪಾತಣ್ಣ ಪ್ರತಿಷ್ಟಾನ'ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇವಾಲಯಗಳ ಪ್ರವೇಶಕ್ಕೆ ಮಡಿವಂತಿಕೆಯಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು, ದೇವಾಲಯವೇ ಏಕೆ? ನಮ್ಮ `ದೇಹವೇ ದೇಗುಲ' ಎಂದಿದ್ದಾರೆ. ಇದನ್ನು ಜನರಿಗೆ ತಿಳಿಸಬೇಕು. ಹಾಗೆಯೇ ಪರ ವಿಚಾರ ಮತ್ತು ಪರ ಧರ್ಮ ಸಹಿಷ್ಣುತೆ ನಿಜವಾದ ಬಂಗಾರ ಎಂದು ಕನ್ನಡದ ಅತ್ಯಂತ ಪ್ರಾಚೀನ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸ್ಮರಿಸಿದರು.
‘ಕನ್ನಡ ವಿವೇಕ ಮತ್ತು ಸಂವಿಧಾನಾತ್ಮಕ ವಿವೇಕ ಒಂದಾಗಬೇಕು. ಅಲ್ಪಸಂಖ್ಯಾತರನ್ನು ಪ್ರೀತಿಯಿಂದ ಕನ್ನಡಿಕರಣಗೊಳಿಸಬೇಕು. ಸಮಾನತೆ ಮತ್ತು ಎಲ್ಲರನ್ನು ಸಹಿಷ್ಣುತೆಯಿಂದ ಕಾಣುವ ಅಂಶಗಳು ಬಹಳ ಹಿಂದಿನಿಂದಲೂ ಕನ್ನಡ ಸಾಹಿತ್ಯದಲ್ಲಿ ಅಡಕವಾಗಿದ್ದು, ಇದು ಇಂದಿಗೂ ಆದರ್ಶಪ್ರಾಯವಾದದ್ದು' ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ಕವಯತ್ರಿ ಡಾ. ಎಚ್.ಎಲ್.ಪುಷ್ಪಾ ಮಾತನಾಡಿ, ‘ಕಾವ್ಯ ಹೇಗೆ ಮತ್ತು ಏಕೆ ಹುಟ್ಟಿತು ಎಂಬುದು ಕವಿಗಳಿಗೆ ಎದುರಾಗುವ ಪ್ರಶ್ನೆಯಾಗಬೇಕು. ಏಕೆಂದರೆ ಕಾವ್ಯವನ್ನು ಮೊದಲಿನ ಹಾಗೆ ಬರೆಯುವ ಸ್ಥಿತಿ ಈಗ ಇಲ್ಲವಾಗಿದೆ. ಕವಿತೆಯ ಮೇಲೆ ಜವಾಬ್ದಾರಿ ಹೆಚ್ಚಾಗಬೇಕಾಗಿದೆ. ಕವಿತೆಯು ರಂಜನೆಗೆ ಎನ್ನುವ ಕಾಲ ಇದಲ್ಲ. ಕವಿ ಮತ್ತು ಕಾವ್ಯಕ್ಕೆ ಜವಾಬ್ದಾರಿ ಇರುವ ಕಾಲ ಇದಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಕವಿಗೋಷ್ಟಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ, ಸುಬ್ಬು ಹೊಲೆಯಾರ್, ದು. ಸರಸ್ವತಿ, ನೂತನ್ ದೋಶೆಟ್ಟಿ, ಆರತಿ ಎಚ್.ಎನ್., ಜಯಲಕ್ಷ್ಮಿ ಪಾಟೀಲ್, ದಾದಾಪೀರ್ ಜೈಮನ್ ಮತ್ತು ಶಿಲೋಕ್ ಮುಕ್ಕಾಟಿ ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಪ್ರತಿಷ್ಟಾನದ ಅಧ್ಯಕ್ಷ ಬಿ.ಎಂ.ಹನೀಫ್, ದ್ವಾರನಕುಂಟೆ ಪಾತಣ್ಣ, ರಘುನಾಥ ಚ.ಹ. ಉಪಸ್ಥಿತರಿದ್ದರು.
‘ಹಲವು ಸಮುದಾಯಗಳ ಹಲವು ಬಿಕ್ಕಟ್ಟುಗಳು, ಸಮಸ್ಯೆಗಳು ಹೊರಹೊಮ್ಮುವ ಕಾಲಘಟ್ಟದಲ್ಲಿ ಎಲ್ಲರೂ ತಮ್ಮ ತಮ್ಮ ಆಹಾರ, ಉಡುಪು ಹಾಗೂ ಧರ್ಮ ಸೇರಿದಂತೆ ಹದಗೆಟ್ಟ ರಾಜಕಾರಣದ ಬಗ್ಗೆ ಯೋಚನೆ ಮಾಡಬೇಕಾಗಿದೆ'
-ಡಾ.ಎಚ್.ಎಲ್.ಪುಷ್ಪಾ ಕವಯತ್ರಿ