ಹಕ್ಕೊತ್ತಾಯ ಕಡೆಗಣನೆ: ಮಾ.14ರಿಂದ ವಿಧಾನಸೌಧ ಮುಂದೆ ದೇವದಾಸಿಯರ ಅಹೋರಾತ್ರಿ ಧರಣಿ
Update: 2022-03-13 20:56 IST
ಬೆಂಗಳೂರು, ಮಾ. 13: ರಾಜ್ಯದ ಆಯವ್ಯಯದಲ್ಲಿ ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಸರಕಾರದ ನಡೆಯನ್ನು ಖಂಡಿಸಿ ನಾಳೆ(ಮಾ.14) ಮತ್ತು 15ರಂದು ವಿಧಾನಸೌಧ ಮುಂದೆ ಬೃಹತ್ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಿಳಿಸಿದೆ.
ದೇವದಾಸಿ ಪದ್ಧತಿಯಿಂದ ಮುಕ್ತರಾಗಲು ನೀಡುತ್ತಿದ್ದ ಮಾಸಿಕ ಸಹಾಯ ಧನ 1,500 ರೂ.ಬದಲಾಗಿ ಕನಿಷ್ಟ 3 ಸಾವಿರ ರೂ.ನೀಡಬೇಕು. ಒಂದು ಲಕ್ಷದಿಂದ 30 ಸಾವಿರ ರೂ.ಗೆ ಕಡಿತಗೊಳಿಸಿರುವ ಸಾಲ ಸೌಲಭ್ಯ 5 ಲಕ್ಷಕ್ಕೆ ಹೆಚ್ಚಿಸುವುದು, ದೇವದಾಸಿ ಮಹಿಳೆಯರ ಮಕ್ಕಳ ವಿವಾಹಕ್ಕೆ ಷರತ್ತು ರಹಿತ ಪ್ರೋತ್ಸಾಹ ಧನ, ರಾಜ್ಯದ 1 ಲಕ್ಷ ದೇವದಾಸಿಯರ ಸಮೀಕ್ಷೆ ನಡೆಸಿ, ಸೂಕ್ತ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದೆ. ಧರಣಿಯಲ್ಲಿ ಸುಮಾರು 2 ಸಾವಿರ ದೇವದಾಸಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘದ ಅಧ್ಯಕ್ಷೆ ಟಿ.ವಿ.ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.