×
Ad

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ

Update: 2022-03-13 23:41 IST

ಬೆಂಗಳೂರು, ಮಾ. 13: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕನಿಗೆ ಬೆಂಗಳೂರಿನ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಂದಿರಾನಗರದ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಬೋಧಿಸುತ್ತಿದ್ದ ಹಳೇ ತಿಪ್ಪಸಂದ್ರ ನಿವಾಸಿ ಜೈಶಂಕರ್ (46) ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕ. ಈತನ ಮೇಲಿದ್ದ ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

2014ರ ಅಕ್ಟೋಬರ್ 28ರಂದು ಶಾಲೆಯಿಂದ ಮನೆಗೆ ಹಿಂದಿರುಗಿದ ಬಾಲಕಿ ತನ್ನ ಖಾಸಗಿ ಭಾಗದಲ್ಲಿ ನೋವಾಗುತ್ತಿರುವ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದ್ದಳು. ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಘಟನೆ ನಡೆದ ಮರು ದಿನ ತಾಯಿ ಶಾಲೆಗೆ ಹೋಗಿ ಈ ಬಗ್ಗೆ ಶಿಕ್ಷಕರಿಂದ ವಿವರಣೆ ಕೇಳಿದ್ದರು. ಆದರೆ ಶಾಲೆ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕ ಜೈಶಂಕರ್ ನನ್ನು 2014ರ ಅಕ್ಟೋಬರ್ 30ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ (ಶಿಕ್ಷಕ) ಬಾಲಕಿಯನ್ನು ಮಧ್ಯಾಹ್ನದ ಊಟದ ಬಿಡುವಿನಲ್ಲಿ ಶಾಲೆಯ ಶೌಚಾಲಯಕ್ಕೆ ಕರೆದುದೊಯ್ದು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News