ಹಿಜಾಬ್ ತೀರ್ಪು ನಿರಾಶಾದಾಯಕ : ಮರು ಪರಿಶೀಲನೆಗೆ ಉಲಮಾ ಒಕ್ಕೂಟ ಆಗ್ರಹ
ಮಂಗಳೂರು : ವಿದ್ಯಾರ್ಥಿನಿಯರ ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪು ತೀವ್ರ ನಿರಾಶಾದಾಯಕವೆಂದು ಕರ್ನಾಟಕ ರಾಜ್ಯ ಸುನ್ನೀ ಉಲಮಾ ಒಕ್ಕೂಟವು ಅಭಿಪ್ರಾಯಪಟ್ಟಿದ್ದು, ತೀರ್ಪನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ತೀರ್ಪು ನೀಡುವಾಗ ಶಾಫೀ ಇಲ್ಲವೇ ಹನಫೀ ಕರ್ಮಪಥಗಳ ಪ್ರಮಾಣ ಗ್ರಂಥಗಳನ್ನು ಅವಲಂಬಿಸಲಾಗುತ್ತದೆ. ಮುಸ್ಲಿಂ ಸ್ತ್ರೀಯರು ತಲೆ ಮುಚ್ಚಬೇಕು ಎನ್ನುವುದು ಕುರ್ ಆನಿನ ಸ್ಪಷ್ಟ ಆದೇಶವಾಗಿರುವುದರಿಂದ ಮೇಲಿನ ಎರಡೂ ಪಥಗಳು ಈ ವಿಷಯದಲ್ಲಿ ಒಮ್ಮತಾಭಿಪ್ರಾಯ ಹೊಂದಿದೆ. ಇಂತಹ ಒಮ್ಮತಾಭಿಪ್ರಾಯವಿರುವ ಧಾರ್ಮಿಕ ನಿಯಮವನ್ನು ಉಲ್ಲಂಘಿಸಿ ಹಿಜಾಬ್ ಇಸ್ಲಾಮಿನಲ್ಲಿ ಅನಿವಾರ್ಯವಲ್ಲ ಎಂದು ಯಾವ ಆಧಾರದಲ್ಲಿ ಕೋರ್ಟ್ ಹೇಳಿದೆ ಎನ್ನುವುದು ಅರ್ಥವಾಗುವುದಿಲ್ಲ ಎಂದು ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರು.
ಭಾರತದ ವಿಶಾಲವಾದ ಜಾತ್ಯತೀತ ವ್ಯವಸ್ಥೆಯು ಧಾರ್ಮಿಕ ನಿಯಮಾನುಸಾರ ವಸ್ತ್ರ ತೊಡುವುದಕ್ಕೂ ಸಾಧ್ಯವಿಲ್ಲದಂತಹ ಸಂಕುಚಿತ ವ್ಯವಸ್ಥೆ ಎಂಬುದಾಗಿ ತಪ್ಪು ತಿಳಿಯಲು ಇದು ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಗೌರವಾನ್ವಿತ ನ್ಯಾಯಾಲಯವು ತೀರ್ಪಿನ ಮರುಪರಿಶೀಲನೆಗೆ ಸಿದ್ಧವಾಗಬೇಕು. ದೇಶನಿಷ್ಠೆ ಧರ್ಮನಿಷ್ಠೆಯ ಭಾಗವೆಂದೇ ಭಾವಿಸಿರುವ ಮುಸ್ಲಿಂ ಸಮಾಜಕ್ಕೆ, ನೆಲದ ಕಾನೂನನ್ನು ಗೌರವಿಸಬೇಕೆಂದು ಯಾರೂ ಹೇಳಿಕೊಡಬೇಕಾಗಿಲ್ಲ. ಭಾರತದ ಸಂವಿಧಾನವು ಮುಸ್ಲಿಮರ ಯಾವುದೇ ಧಾರ್ಮಿಕ ಅಗತ್ಯಗಳನ್ನು ಆಚರಿಸುವುದಕ್ಕೆ ಅಡ್ಡಿ ಉಂಟು ಮಾಡುವುದೂ ಇಲ್ಲ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಹೋರಾಟಗಳಲ್ಲಿ ಸಂವಿಧಾನದ ಸಮರ್ಪಕವಾದ ವ್ಯಾಖ್ಯಾನದ ಮೂಲಕ ನ್ಯಾಯಯುತವಾದ ತೀರ್ಪು ಹೊರಬರಲಿದೆ ಎಂದು ಉಲಮಾ ನಾಯಕರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.