ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಗಳಲ್ಲಿ 2289.67 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹ: ಸಚಿವ ಎಂ.ಟಿ.ಬಿ.ನಾಗರಾಜ್

Update: 2022-03-15 12:38 GMT

ಬೆಂಗಳೂರು, ಮಾ.15: ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಗಳಲ್ಲಿ 2289.67 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾಹಿತಿ ನೀಡಿದರು.

ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2018-19ರಲ್ಲಿ 711.18 ಕೋಟಿ, 2019-20ರಲ್ಲಿ 736.77 ಕೋಟಿ, 2020-21ರಲ್ಲಿ 841.72 ಕೋಟಿ ರೂ.ಸೇರಿದಂತೆ 2,289.67 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.

ಪೌರ ಸಭೆಗಳ ಅಧಿನಿಯಮ 1964ರ ಕಲಂ 101 ಮತ್ತು 102 ಹಾಗೂ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಕಲಂ 108 ಮತ್ತು 109ಡಿ ಅಡಿಯಲ್ಲಿ ಆಸ್ತಿ ತೆರಿಗೆಗಳನ್ನು ನಿಗದಿ ಮಾಡಲಾಗಿದೆ ಎಂದರು.

ಅದರಂತೆ ವಾಣಿಜ್ಯ ಕಟ್ಟಡಗಳಿಗೆ ಕನಿಷ್ಠ ಶೇ.0.5ರಿಂದ ಗರಿಷ್ಠ ಶೇ.3 ರಷ್ಟು ವಸತಿ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ 0.2 ರಿಂದ 1.5ರಷ್ಟು, ಖಾಲಿ ನಿವೇಶನಗಳಿಗೆ 0.2ರಿಂದ 0.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕೈಗಾರಿಕೆಗಳ ವಾಣಿಜ್ಯ ಕಟ್ಟಡಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆ ದರದ ಶೇ.70 ಕ್ಕೂ ಕಡಿಮೆ ಇಲ್ಲದಂತೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಆಸ್ತಿ ತೆರಿಗೆ ವಂಚನೆ ಮಾಡಿರುವ ಪ್ರಕರಣಗಳು ಕಂಡು ಬಂದರೆ ಅಂತಹ ಸ್ಥಳೀಯ ಸಂಸ್ಥೆಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News