ನ್ಯಾಯಾಲಯದ ತೀರ್ಪು ಮಹಿಳಾ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ: ಎನ್‌ಡಬ್ಲ್ಯುಎಫ್
ಮಂಗಳೂರು : ಹಿಜಾಬ್ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಅತ್ಯಂತ ದುರದೃಷ್ಟಕರ ಮತ್ತು ಮಹಿಳೆಯರ ಶಿಕ್ಷಣದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಇದರ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘಪರಿವಾರ ಪ್ರೇರಿತ ಸಮಸ್ಯೆಯನ್ನು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಬಗೆಹರಿಸಬೇಕಿದ್ದ ಸರಕಾರವು ದ್ವೇಷ ಭಾವನೆಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವೆಂದು ಆದೇಶ ಹೊರಡಿಸಿತ್ತು. ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತವನ್ನು ಕಡೆಗಣಿಸಿ ಸಂಘದ ಹಠ ಸಾಧನೆಗೆ ಅವಕಾಶ ಮಾಡಿಕೊಟ್ಟಿತ್ತು. ಇದರಿಂದಾಗಿ ಮುಸ್ಲಿಂ ಸಮಾಜದ ಮಧ್ಯೆ ಅಭದ್ರತೆಯ ಭಾವನೆಯೂ ಕಾಡಿತ್ತು. ಈ ಮಧ್ಯೆ ರಾಜ್ಯ ಹೈಕೋರ್ಟ್‌ನ ಈ ತೀರ್ಪು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ನಾಡಿನ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವಂತದ್ದಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಸ್ವಾತಂತ್ರ್ಯವು ಶೇ.680.08ರಷ್ಟಿದೆ. ಸಂಘಪರಿವಾರದಂತಹ ಮಹಿಳಾ ದ್ವೇಷಿ, ಪ್ರತಿಗಾಮಿ ಕೂಟಗಳ ದ್ವೇಷ ಸಾಧನೆಯ ಕಾರಣದಿಂದ ಹಿಜಾಬ್ ಪ್ರಕರಣವು ರಾಜ್ಯದಲ್ಲಿ ಬಿಗುವಿನ ವಾತಾವರಣವನ್ನು ಸೃಷ್ಟಿಸಿತು. ಇದೀಗ ನ್ಯಾಯದ ಕಾತರದಲ್ಲಿದ್ದ ಮುಸ್ಲಿಂ ಸಮುದಾಯವು ಅನ್ಯಾಯದ ತೀರ್ಪಿನಿಂದ ನೊಂದುಕೊಂಡಿವೆ ಮತ್ತು ಈ ತೀರ್ಪಿನಿಂದ ಪ್ರತಿಗಾಮಿ ಶಕ್ತಿಗಳು ಸಂತೋಷಗೊಂಡಿವೆ ಎಂದು ಫರ್ಝಾನಾ ಮುಹಮ್ಮದ್ ತಿಳಿಸಿದ್ದಾರೆ.
ತೀರ್ಪಿನಿಂದ ಧೃತಿಗೆಡದೆ, ನಿರಾಶೆ ಹೊಂದದೆ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವ ಅವಕಾಶ ಮುಕ್ತವಾಗಿದೆ. ಹಾಗಾಗಿ ಹಿಜಾಬ್ ಕುರಿತಂತೆ ದೂರುದಾರರಿಗೆ ಎನ್‌ಡಬ್ಲ್ಯುಎಫ್ ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದೆ ಎಂದು ಫರ್ಝಾನಾ ಮುಹಮ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎನ್‌ಡಬ್ಲ್ಯುಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೌಶೀರಾ, ರಾಜ್ಯ ಕಾರ್ಯದರ್ಶಿ ರಮ್ಲತ್, ಜಿಲ್ಲಾಧ್ಯಕ್ಷೆ ಝುಲೇಖಾ ಉಪಸ್ಥಿತರಿದ್ದರು.