ಹಿಜಾಬ್ ತೀರ್ಪು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡನೆ

Update: 2022-03-15 14:13 GMT

ಬೆಂಗಳೂರು, ಮಾ.15: ಹಿಜಾಬ್ ನಿಷೇಧದ ಕುರಿತು ಕರ್ನಾಟಕ ಹೈಕೋರ್ಟ್ ಹೊರಡಿಸಿದ ತೀರ್ಪು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಖಂಡಿಸಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗವು ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಆದರೆ ಹಿಜಾಬ್ ನಿಷೇಧವನ್ನು ಎತ್ತಿಹಿಡಿಯುವ ಹೈಕೋರ್ಟ್‍ನ ತೀರ್ಪು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ.  ಇದು ಕರ್ನಾಟಕ ರಾಜ್ಯದ ಒಟ್ಟು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಬಿಜೆಪಿ ಆಡಳಿತವು ತಮ್ಮ ಅಜೆಂಡಾವನ್ನು ಜಾರಿಗೆ ತರಲು ಮತ್ತು ಅನ್ಯ ಸಮುದಾಯವನ್ನು ಅಮಾನವೀಯಗೊಳಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ತೀರ್ಪು, ಕೋಮು ಧ್ರುವೀಕರಣಗೊಳಿಸಲು ಹಾಗೂ ಧಾರ್ಮಿಕ ನಂಬಿಕೆಗಳನ್ನು ವ್ಯಾಖ್ಯಾನಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಭಾರತೀಯ ಸಂವಿಧಾನದ ಆಧಾರದ ಮೇಲೆ ಹಕ್ಕುಗಳನ್ನು ಎತ್ತಿಹಿಡಿಯಲು ನಾವು ಒತ್ತಾಯಿಸುತ್ತೇವೆ. ಈ ಸಂವಿಧಾನ ವಿರೋಧಿ ತೀರ್ಪನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾಂವಿಧಾನಿಕ ಹಾಗೂ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದರು. 

ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಜ್ ಗಂಗಾವತಿ, ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಹಾಗೂ ಸಮಿತಿ ಸದಸ್ಯೆ ಆಯಿಷಾ ಮುರ್ಷಿದಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News