ಕೃಷಿಭೂಮಿಯನ್ನು ಕಾರ್ಪೋರೇಟ್‍ಗೆ ಹಸ್ತಾಂತರಿಸುವ ಹುನ್ನಾರ: ನ್ಯಾ.ನಾಗಮೋಹನ್ ದಾಸ್

Update: 2022-03-15 14:49 GMT

ಬೆಂಗಳೂರು, ಮಾ.15: ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುವ ರೈತರ ಹೋರಾಟಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ರೈತರನ್ನು ರೈತರಲ್ಲ ಎಂದು ಬಿಂಬಿಸುವ ನಿಟ್ಟಿನಲ್ಲಿ ಕೃಷಿಭೂಮಿಯನ್ನು ಕಾರ್ಪೋರೇಟ್‍ಗೆ ಹಸ್ತಾಂತರಿಸುವ ಹುನ್ನಾರ ನಡೆಯುತ್ತಿದೆ ಎಂದು ನ್ಯಾ. ನಾಗಮೋಹನ್ ದಾಸ್ ಕಿಡಿಕಾರಿದ್ದಾರೆ.

ಮಂಗಳವಾರ ನಗರದ ಫ್ರಿಡಂ ಪಾರ್ಕ್‍ನಲ್ಲಿ ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ರಾಜ್ಯ ಸರಕಾರವನ್ನು ಜನಾಂದೋಲನಗಳ ಮಹಾಮೈತ್ರಿಯು(ಜೆಎಂಎಂ) ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ. ಕೃಷಿಗೆ ಸಂಬಂಧಿಸಿದ ರಸಗೊಬ್ಬರ, ವಿದ್ಯುತ್ ಸೇರಿದಂತೆ ಎಲ್ಲ ಬೆಲೆಯನ್ನು ಹೆಚ್ಚಿಸಿದೆ. ಹಾಗಾಗಿ ರೈತರು ಬೆಂಬಲ ಬೆಲೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಹೋರಾಟ ಮಾಡುತ್ತಾರೆ ಎಂದು ಮನಗಂಡ ಸರಕಾರವು ಇಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ತಂದಿದೆ. ಹಾಗಾಗಿ ರೈತರ ಭೂಮಿಯನ್ನು ಕಾರ್ಪೋರೇಟ್‍ಗೆ ನೀಡಿದರೆ ಇಂತಹ ಹೋರಾಟಗಳನ್ನು ಹತ್ತಿಕ್ಕಬಹುದು ಎಂದು ಸರಕಾರ ಚಿಂತಿಸುತ್ತಿದೆ ಎಂದರು.

ರೈತ ಸಮುದಾಯಗಳು ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದವು. ಇತ್ತೀಚೆಗೆ ಸರಕಾರಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವತ್ತಾ ಯೋಚಿಸುತ್ತಿವೆ. ರೈತರಿಗೆ ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಬಹುದು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜೆಎಂಎಂನ ಸಂಚಾಲಕ ಎಸ್.ಆರ್.ಹಿರೇಮಠ ಮಾತನಾಡಿ, ರಾಜ್ಯ ಸರಕಾರವು ಜಾರಿಗೊಳಿಸಿರುವ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯಿದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯಿದೆ 2020 ಹಾಗೂ ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆ 2020 ಹಿಂಪಡೆಯಬೇಕು. ಈ ಕುರಿತು ಈಗಾಗಲೇ ರಾಜ್ಯಾದ್ಯಂತ ಜಾಥಾವನ್ನು ಕೈಗೊಂಡು ಸಂವಾದ ಏರ್ಪಡಿಸಿ, ಜನಜಾಗೃತಿಯನ್ನು ಏರ್ಪಡಿಸಲಾಗಿದೆ ಎಂದರು. 

ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ ಶಾಸಕರೊಂದಿಗೆ ಸಂವಾದವನ್ನು ಏರ್ಪಡಿಸಿ ಕಾಯ್ದೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಲಾಗುತ್ತದೆ. ಶಾಸಕರು ಇದನ್ನು ತಿರಸ್ಕರಿಸಿ ಕಾಯ್ದೆ ವಾಪಸ್ಸು ಪಡೆಯುವಲ್ಲಿ ವಿಫಲರಾದರೆ, ಪ್ರತಿಭಟನೆ ಮಾಡುತ್ತೇವೆ. ಅಂತಿಮ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಮಾಡಿ, ನಿರ್ಣಯಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವುದಾಗಿ ತಮ್ಮ ಯೋಜನೆಗಳನ್ನು ವಿವರಿಸಿದರು. 

ಎ.9 ಮತ್ತು 10ರಂದು ಧಾರವಾಡದಲ್ಲಿ ಶಿಬಿರವನ್ನು ಆಯೋಜಿಸಿ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಕಾಯ್ದೆಗಳನ್ನು ಹಿಂಪಡೆಯದ ಹೊರತು, ಯಾವುದೇ ಕಾರಣಕ್ಕೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.  

ಜೆಎಂಎಂನ ಸದಸ್ಯ ಖಾಜಾ ಅಸ್ಲಮ್ ಅಹ್ಮದ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಒಂದು ಆಂದೋಲನವಾಗಿ ರಾಜ್ಯದ ಉದ್ದಗಲಕ್ಕೂ ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರುವಲ್ಲಿ ಸಮಸ್ತ ರೈತರು ಒಗ್ಗೂಡಬೇಕಾಗಿದೆ ಎಂದು ಕರೆ ನೀಡಿದರು. 

ರೈತ ವಿರೋಧಿ ಬಿಜೆಪಿ ಸೋಲಿಸಿ 

ರಾಜ್ಯ ಸರಕಾರವು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ರೈತರಿಗೆ ಸವಾಲು ಒಡ್ಡಿದೆ. ರೈತರು ಈ ಸವಾಲನ್ನು ಸ್ವೀಕರಿಸಿ, ಸರಕಾರವನ್ನು ಸೋಲಿಸಲು ಸಜ್ಜಾಗಬೇಕು. ಏಕೆಂದರೆ ಇಡೀ ದೇಶದ ರೈತ ಸಮುದಾಯ ಕರ್ನಾಟಕದ ಕಡೆ ನೋಡುತ್ತಿದೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೆ ಇದ್ದಲ್ಲಿ ನಾಡಿನ ರೈತರ ಶಕ್ತಿ ಕುಂದಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ರೈತ ವಿರೋಧಿ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ, ನೈಜ ಪ್ರಜಾತಂತ್ರವನ್ನು ಸ್ಥಾಪಿಸುವ ಗುರಿ ಸಮಸ್ತ ರೈತರದ್ದಾಗಬೇಕು. 

-ಡಾ.ವೆಂಕನಗೌಡ ಪಾಟೀಲ್, ಜೆಎಂಎಂ ಸದಸ್ಯ   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News