ಬೆಂಗಳೂರು: ನಕಲಿ ಛಾಪಾ ಕಾಗದ ವಂಚನೆ ಜಾಲ ಪತ್ತೆ; 8 ಮಂದಿ ಆರೋಪಿಗಳ ಬಂಧನ

Update: 2022-03-15 15:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.15: ನಕಲಿ ಛಾಪಾ ಕಾಗದಗಳು ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಯ ನಕಲಿ ಸೀಲುಗಳನ್ನು ಬಳಸಿ ನಿವೇಶನಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಈಶಾನ್ಯ ವಿಭಾಗದ ಪೊಲೀಸರು ಭೇದಿಸಿ 8 ಮಂದಿಯನ್ನು ಬಂಧಿಸಿದ್ದಾರೆ. 

ಯಲಹಂಕದ ಪ್ರದೀಪ್(28), ಚಿಕ್ಕಬೊಮ್ಮಸಂದ್ರದ ಧರ್ಮಲಿಂಗಂ(48), ಯಲಹಂಕ ಉಪನಗರದ ಮಂಜುನಾಥ್(43), ಯಾರಬ್(41), ವೈ.ಆರ್.ಮಂಜುನಾಥ್(51), ಭದ್ರಪ್ಪ ಲೇಔಟ್‍ನ ಅಬ್ದುಲ್‍ಘನಿ(67), ಶ್ಯಾಂಪುರದ ಶಬನಾಬಾನು(42), ಹುಲಿಯೂರುದುರ್ಗದ ರಾಮಯ್ಯ(43) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಲ್ಲಿ ಪ್ರದೀಪ್ ಹಳೆಯ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಆಟೊ ಚಾಲಕ ರಾಮಯ್ಯ ಕೊಲೆ, ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಪಡೆದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾನೆ ಎಂದು ಡಿಸಿಪಿ ಅನುಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಆರೋಪಿಗಳಿಂದ 8 ಕೋಟಿ ಮೌಲ್ಯದ ಅವ್ಯವಹಾರ ಬೆಳಕಿಗೆ ಬಂದಿದ್ದು, ಸುಮಾರು 50 ವರ್ಷ ಹಿಂದಿನ ಹಳೆಯ ಛಾಪಾ ಕಾಗದಗಳನ್ನು ಸೃಷ್ಟಿಸಿ ಕೃತ್ಯ ನಡೆಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರದಲ್ಲಿ ಡಾ.ಪ್ರತಾಪ್‍ರೆಡ್ಡಿ ಎಂಬುವರ 2,400 ಅಡಿಗಳ ವಿಸ್ತೀರ್ಣದ ನಿವೇಶನವಿದ್ದು, ಮಾಲಕರು ವಿದೇಶದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆರೋಪಿ ಪ್ರದೀಪ್ ಹಾಗೂ ಇತರರು ಸೇರಿ ಕೋಟ್ಯಂತರ ಬೆಲೆಯ ಆ ನಿವೇಶನವನ್ನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಲಕರ ತಂದೆ ಜಯಪ್ರತಾಪರೆಡ್ಡಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಯಲಹಂಕ ಉಪನಗರ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ವಿವಿಧ ಮುಖಬೆಲೆಯ 2,130 ನಕಲಿ ಛಾಪಾ ಕಾಗದಗಳು, ಉಪ ನೋಂದಾಣಾಧಿಕಾರಿಗಳ ಕಚೇರಿಯ 17 ಸೀಲುಗಳು, ಟೈಪ್‍ರೈಟರ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News