ಶಾಸಕರ ಅನುದಾನ ವಾಪಸ್: ಪರಿಷತ್ತಿನಲ್ಲಿ ಪಕ್ಷಾತೀತವಾಗಿ ಧ್ವನಿಗೂಡಿಸಿದ ಸದಸ್ಯರು

Update: 2022-03-15 15:13 GMT

ಬೆಂಗಳೂರು, ಮಾ.15: ರಾಜ್ಯದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ನೀಡಿದ್ದ ಅನುದಾನವನ್ನು ಸರಕಾರ ಹಿಂಪಡೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಸದಸ್ಯರು ಪಕ್ಷಾತೀತವಾಗಿ ಧ್ವನಿಗೂಡಿಸಿದರು.

ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಪ್ರಸ್ತಾಪಿಸಿ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ವರ್ಷಕ್ಕೆ 2 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. 2018-19 ರಿಂದ 3 ವರ್ಷದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಪೈಕಿ 3 ಕೋಟಿಯನ್ನು ಹಿಂಪಡೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಸಂಬಂಧ ನಿಧಿ ಬಳಕೆಗೆ ಜಿಲ್ಲಾಧಿಕಾರಿಗಳು, ನೋಡೆಲ್ ಅಧಿಕಾರಿಯಾಗಿದ್ದರು. ಇದೀಗ ಉಪವಿಭಾಗಾಧಿಕಾರಿಯನ್ನು ನಿಯೋಜಿಸಲಾಗಿದೆ. ಮತ್ತೆ ಜಿಲ್ಲಾಧಿಕಾರಿಗಳಿಗೇ ಹೊಣೆ ನೀಡಲಾಗಿದೆ. ಕಾಮಗಾರಿ ವಿಳಂಬವಾಗಿದ್ದರೆ, ನೋಟಿಸ್ ನೀಡಲಿ, ಅದನ್ನು ಬಿಟ್ಟು ಏಕಾಏಕಿ ಹಣ ಹಿಂಪಡೆದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಇದೇ ವೇಳೆ ಸದಸ್ಯರಾದ ಭೋಜೇಗೌಡ, ಗೋವಿಂದರಾಜು, ಬಿಜೆಪಿಯ ಸುನಿಲ್ ವಲ್ಯಾಪುರೆ ಕೂಡ ಆಕ್ಷೇಪಿಸಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಚಿವ ಮುನಿರತ್ನ ಈ ಸಂಬಂಧ ಮಾಹಿತಿ ಪಡೆದು ಸೂಕ್ತ ಉತ್ತರ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News