ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು: ಕಾನೂನು ತಜ್ಞರ ಜೊತೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಸಭೆ
ಬೆಂಗಳೂರು, ಮಾ.15: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ಹಿಜಾಬ್ ಕುರಿತು ಇಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನೇತೃತ್ವದಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಯಿತು.
ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಹೈಕೋರ್ಟ್ ತೀರ್ಪಿನ ಪೂರ್ಣ ಪ್ರತಿಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿರುವ ಧಾರ್ಮಿಕ ಸ್ವಾತಂತ್ರ್ಯದ ಅಂಶಗಳು, ಜೊತೆಗೆ, ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಚರ್ಚೆ ನಡೆಸಲಾಯಿತು. ನಾಳೆ ಉಲಮಾಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿಯೂ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಹೈಕೋರ್ಟ್ ತೀರ್ಪು ಬರುವ ಮುನ್ನವೆ ನಮ್ಮ ಉಲಮಾಗಳು, ವಕ್ಫ್ ಬೋರ್ಡ್ ಹಾಗೂ ಸಮುದಾಯದ ಹಿತೈಷಿಗಳು ಚರ್ಚೆ ಮಾಡಿದ್ದೇವೆ. ಶರೀಅತ್ ಅನ್ನು ಕಾಪಾಡಲು ಕಾನೂನು ರೀತಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಹೈಕೋರ್ಟ್ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್‍ಗೆ ಹೋಗಲು ಅವಕಾಶವಿದೆ ಎಂದು ತಿಳಿಸಿದೆ. ಅದರಂತೆ, ನಾವು ಸುಪ್ರೀಂಕೋರ್ಟ್ ಕದ ತಟ್ಟಿದ್ದೇವೆ. ಅಲ್ಲದೆ, ನಮ್ಮ ಕಾನೂನು ತಜ್ಞರು ಪುನರ್ ಪರಿಶೀಲನಾ ಅರ್ಜಿಯನ್ನು ಯಾಕೆ ಹಾಕಬಾರದು ಎಂದು ಚಿಂತನೆ ನಡೆಸಿದ್ದಾರೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ‘ಹಿಜಾಬ್’ ಇಸ್ಲಾಮ್ ಧರ್ಮದ ಅವಿಭಾಜ್ಯ ಅಂಗ ಅಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ, ಪವಿತ್ರ ಕುರ್‍ಆನ್‍ನಲ್ಲಿ ಹಿಜಾಬ್ ಧರಿಸುವುದು ಒಬ್ಬ ಮಹಿಳೆಯ ಕಡ್ಡಾಯ ಕ್ರಮ ಎಂದು ಹೇಳಿದೆ. ಇಸ್ಲಾಮ್‍ನಲ್ಲಿ ಆಧಾರ ಸ್ತಂಭಗಳಿವೆ ಅವುಗಳೆಂದರೆ ಕುರ್‍ಆನ್, ಹದೀಸ್, ಇಜ್‍ಮಾಅï, ಖಿಯಾಸ್. ಕುರ್‍ಆನ್‍ನಲ್ಲಿ ಸ್ಪಷ್ಟವಾಗಿ ಹಿಜಾಬ್ ಧರಿಸಲು ಹೇಳಲಾಗಿದೆ. ಆದರೆ, ತ್ರಿಸದಸ್ಯ ಪೀಠ ಹಿಜಾಬ್ ಇಸ್ಲಾಮ್‍ನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿರುವುದು ಆತಂಕ ಹಾಗೂ ಆಶ್ಚರ್ಯ ತಂದಿದೆ ಎಂದರು.
ನಮ್ಮ ಉಲಮಾಗಳು, ಧಾರ್ಮಿಕ ನಾಯಕರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಯಾವ ರೀತಿಯಲ್ಲಿ ಪರಿಹಾರ ಮಾಡಬೇಕು ಎಂದು ನಿರ್ಧರಿಸುತ್ತೇವೆ. ಇದು ಹಿಂದೂ ಮುಸ್ಲಿಮರ ನಡುವಿನ ಸಮಸ್ಯೆ ಅಲ್ಲ. ಕೆಲವು ಮಾಧ್ಯಮಗಳು, ಸಂಘಟನೆಗಳು ಇದನ್ನು ಹಿಂದೂ, ಮುಸ್ಲಿಮರ ನಡುವಿನ ಸಮಸ್ಯೆಯ ರೀತಿಯಲ್ಲಿ ಬಿಂಬಿಸುತ್ತಿರುವುದು ಅಪರಾಧ ಹಾಗೂ ದುರಂತ ಎಂದು ಅವರು ಹೇಳಿದರು.
ಸಹಭಾಳ್ವೆ, ಸೌಹಾರ್ದತೆಗೆ ಧಕ್ಕೆ ಬರುವ ರೀತಿಯಲ್ಲಿ ಈ ತೀರ್ಪುನ್ನು ತೆಗೆದುಕೊಳ್ಳಬಾರದು ಎಂದು ಸಮುದಾಯಕ್ಕೆ ಮನವಿ ಮಾಡಿದ್ದೇವೆ. ಮುಂದೆ ಪರೀಕ್ಷೆಯಿದೆ, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ವಿದ್ಯಾರ್ಥಿನಿಯರು, ಪೋಷಕರಿಗೂ ಇವತ್ತಿನ ತೀರ್ಪಿನಿಂದ ಬೇಜಾರಿನಲ್ಲಿದ್ದಾರೆ. ಶರೀಅತ್ ನಮ್ಮ ಜೀವ ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಜೊತೆಗೆ ಶಿಕ್ಷಣವೂ ಇಸ್ಲಾಮಿನ ಜೀವವಾಗಿದೆ ಎಂದು ಪ್ರವಾದಿ ಹೇಳಿದ್ದಾರೆ. ಇಸ್ಲಾಮ್ ಯಾರಿಗೂ ಬಲವಂತಪಡಿಸುವುದಿಲ್ಲ. ಹಿಜಾಬ್, ವಿದ್ಯಾಭ್ಯಾಸ, ಪರೀಕ್ಷೆ, ಶರೀಅತ್ ಎಲ್ಲವನ್ನು ಮುಂದಿಟ್ಟುಕೊಂಡು ಉಲಮಾಗಳು ಚರ್ಚಿಸಿ ನಿರ್ದೇಶನ ನೀಡಲಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.
ರಾಜಕಾರಣಿಗಳ ಪಿತೂರಿ, ಷಡ್ಯಂತ್ರಗಳಿಗೆ ಬಲಿಯಾಗಬೇಡಿ. ಉಲಮಾಗಳ ನಿರ್ದೇಶನ ಪಾಲಿಸಲು ವಿದ್ಯಾರ್ಥಿಗಳು, ಪೋಷಕರು ಮಾನಸಿಕವಾಗಿ ಸಿದ್ಧವಾಗಬೇಕು. ಸಣ್ಣ ಪ್ರಮಾಣದಲ್ಲಿ ಮುಗಿಯಬೇಕಾದ ಸಮಸ್ಯೆಯನ್ನು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದವರ ಬಗ್ಗೆ ಸಮುದಾಯಕ್ಕೆ ಗೊತ್ತಿದೆ, ಅಲ್ಲಾಹ್‍ನಿಗೆ ಗೊತ್ತಿದೆ. ಅದಕ್ಕೆ ಅವರಿಗೆ ತಕ್ಕ ಶಾಸ್ತಿಯಾಗುತ್ತದೆ. ಉಡುಪಿಯ ಒಂದು ಮಹಿಳಾ ಕಾಲೇಜಿನಲ್ಲಿ ನಡೆದ ಘಟನೆಯನ್ನು ಇಷ್ಟು ವೈಭವೀಕರಿಸುವ ಅಗತ್ಯವಿತ್ತೆ? ಎಂದು ಅವರು ಪ್ರಶ್ನಿಸಿದರು.